ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ತನಿಖಾ ವರದಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಮೋದಿಸಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ನಡೆಸಿರುವ ತನಿಖೆಯನ್ನು ಅನುಮೋದಿಸಲಾಗಿದೆ ಎಂದು ಎಸ್‌ಐಟಿ ಮುಖ್ಯಸ್ಥ ಸೋಮೇಂದು ಮುಖರ್ಜಿ ಹೈಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸಲು ನೇಮಕ ಮಾಡಲಾದ ಎಸ್‌ಐಟಿ ರಚನೆಯ ಸಿಂಧ್ವತ್ವ ಪ್ರಶ್ನಿಸಿ ಸಂತ್ರಸ್ತೆ ಮತ್ತು ವಕೀಲೆ ಗೀತಾ ಮಿಶ್ರಾ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆಗೆ ನಡೆಸಿತು.
ಇದನ್ನೂ ಓದಿ;- ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ
ಈ ವೇಳೆ ಎಸ್‌ಐಟಿ ಪರ ವಕೀಲ ಪಿ.ಪ್ರಸನ್ನ ಕುಮಾರ್ ಹಾಜರಾಗಿ, ಎಸ್‌ಐಟಿ ತನಿಖಾ ವರದಿಗೆ ಸೌಮೇಂದು ಮುಖರ್ಜಿ ಅನುಮೋದನೆ ನೀಡಿದ್ದಾರೆ. ವರದಿಗೆ ಒಪ್ಪಿಗೆ ನೀಡಿ 2021ರ ನ.26ರಂದು ಆರು ಪುಟಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತನಿಖಾ ವರದಿಯನ್ನು ಎಸ್‌ಐಟಿ ಮುಖ್ಯಸ್ಥ ಸೋಮೇಂದು ಮುಖರ್ಜಿ ಅನುಮೋದಿಸಿಲ್ಲ ಎಂಬ ವಿಚಾರ ನ್ಯಾಯಾಲಯದ ಮುಂದಿತ್ತು. ಇದೀಗ ಅವರೇ ವರದಿ ನೋಡಿ ಒಪ್ಪಿಕೊಂಡಿದ್ದಾರೆ. ಹಾಗಾಗಿ, ವರದಿಯನ್ನು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಲಿ. ಆ ನ್ಯಾಯಾಲಯವು ಮುಂದಿನ ಪ್ರಕ್ರಿಯೆಯನ್ನು ನಡೆಸಲಿ ಎಂದು ತಿಳಿಸಿತು.
ಅದಕ್ಕೆ ಸಂತ್ರಸ್ತೆ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆ, ವಿಚಾರಣಾಧೀನ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಎಸ್‌ಐಟಿ ಪರ ವಕೀಲರು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಎಸ್‌ಐಟಿ ಮುಖ್ಯಸ್ಥರು ತನಿಖಾ ವರದಿಯನ್ನು ಅನುಮೋದಿ ಸಿದ್ದಾರೆ. ಹಾಗಾಗಿ, ವಿಚಾರಣಾ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ನೀಡಿರುವ ನಿರ್ಬಂಧ ಆದೇಶವನ್ನು ತೆರವುಗೊಳಿಸಲು ಕೋರಿ ಎಸ್‌ಐಟಿ ಸೂಕ್ತ ಅರ್ಜಿ ಸಲ್ಲಿಸಲಿ. ಅದನ್ನು ಪರಿ ಶೀಲಿಸಲಾಗುವುದು ಹಾಗೂ ಎಲ್ಲರ ವಾದ ಆಲಿಸಲಾ ಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.