Advertisement

ಉಳ್ಳಾಲ ನೇತ್ರಾವತಿ ಸೇತುವೆಗೆ ಸಿಸಿಟಿವಿ: ಶಾಸಕ ವೇದವ್ಯಾಸ ಕಾಮತ್‌

09:56 AM Aug 03, 2019 | keerthan |

ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ ವಿ.ಜಿ ಅವರು ಇತ್ತೀಚೆಗೆ ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ಸಾವನ್ನಪ್ಪಿದ ಬಳಿಕ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಸೇತುವೆಗೆ ಸಿಸಿಟಿವಿ ಅಳವಡಿಸಲು ಶಾಸಕ ವೇದವ್ಯಾಸ ಕಾಮತ್‌ ಚಿಂತನೆ ನಡೆಸಿದ್ದಾರೆ.

Advertisement

ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಅವರು ಉಳ್ಳಾಲ ಸೇತುವೆಗೆ ಸಿಸಿಟಿವಿ ಅಳವಡಿಕೆಗೆ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಫೇಸ್‌ ಬುಕ್‌ ಪೋಸ್ಟ್‌ ಮಾಡಿರುವ ಶಾಸಕ ಕಾಮತ್‌, ʼʼಮಂಗಳೂರಿನಿಂದ ಉಳ್ಳಾಲಕ್ಕೆ ಹೋಗುವ ರಸ್ತೆಯಲ್ಲಿ ಪ್ರಮುಖವಾಗಿ ಸಿಗುವ ನೇತ್ರಾವತಿ ಸೇತುವೆ ಅಥವಾ ಉಳ್ಳಾಲ ಸೇತುವೆಗೆ ಸಿಸಿಟಿವಿ ಅಳವಡಿಸಲು ಚಿಂತನೆ ಮಾಡಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ  ಜಿಲ್ಲಾಧಿಕಾರಿಯವರೊಂದಿಗೆ ಸಮಾಲೋಚಿಸುತ್ತೇನೆ. ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿ ಪರಿಣಮಿಸುತ್ತದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ಕಾರಣವಾಗುತ್ತಿದೆ. ಸಿಸಿಟಿವಿಗಳನ್ನು ಅಳವಡಿಸುವುದರಿಂದ ಸೇತುವೆಯ ಮೇಲೆ ನಡೆದ ದುರ್ಘಟನೆಗಳನ್ನು ತಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಮಯ ಮತ್ತು ಶ್ರಮ ವ್ಯರ್ಥವಾಗುವುದಿಲ್ಲ. ಇನ್ನು ಮನೆಯಿಂದ ನಾಪತ್ತೆಯಾಗುವ ವ್ಯಕ್ತಿಗಳ ಬಗ್ಗೆ ಇಂತಹ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ನಾಪತ್ತೆಯಾದವರ ಮನೆಯವರಿಗೆ, ಗೆಳೆಯರಿಗೆ ಹಾಗೇ ನಾಪತ್ತೆ ಪ್ರಕರಣಗಳ ತನಿಖೆ ನಡೆಸುವ ಪೊಲೀಸ್ ಅಧಿಕಾರಿಗಳಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಿಂದ ಪೊಲೀಸ್ ಇಲಾಖೆಗೆ ತನಿಖೆಗೆ ಸಹಕಾರಿಯಾಗುವುದನ್ನು ದೃಷ್ಟಿಯಲ್ಲಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳುವುಗುವುದುʼʼ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next