Advertisement
ಅದರಂತೆ ಇನ್ನು ಮುಂದೆ ಪ್ರಸಾದ, ದಾಸೋಹ ಮಾತ್ರವಲ್ಲದೆ ದೇವರಿಗಿಡುವ ನೈವೇದ್ಯ ತಯಾರಿಕೆ ಕೂಡ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದೆ. ಜತೆಗೆ ಇವುಗಳಿಗೆ ಉಪಯೋಗಿಸುವ ಆಹಾರ ಪದಾರ್ಥಗಳ ಗುಣಮಟ್ಟ ತಪಾಸಣೆ ಖಾತರಿಯಾದ ಬಳಿಕವಷ್ಟೇ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸ್ವಯಂಪ್ರೇರಿತವಾಗಿ ದಾಸೋಹ, ಪ್ರಸಾದ ವಿತರಿಸ ಬಯಸುವವರು ಕೂಡ ಇನ್ನು ಮುಂದೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಎಷ್ಟು ಮಂದಿಗೆ, ಯಾವ ಪ್ರಸಾದ ವಿತರಿಸಲಾಗುತ್ತದೆ ಎಂಬ ಮಾಹಿತಿ ಜತೆಗೆ ಸಿದ್ಧಪಡಿಸಿದ ಪ್ರಸಾದ, ದಾಸೋಹದ ಮಾದರಿಯನ್ನು ಆರೋಗ್ಯ ಪರಿವೀಕ್ಷಕರು ಪರಿಶೀಲಿಸಿ ಖಾತರಿಪಡಿಸಿದ ಬಳಿಕವಷ್ಟೇ ವಿತರಿಸಬೇಕಾಗುತ್ತದೆ. ಹಾಗಾಗಿ ಇನ್ನು ಮುಂದೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿ ಏಕಾಏಕಿ ಪ್ರಸಾದ ವಿತರಿಸಲು ಅವಕಾಶ ಇರುವುದಿಲ್ಲ. ಪೂರ್ವಾನುಮತಿ, ಅಗತ್ಯ ದೃಢೀಕರಣದ ಬಳಿಕವಷ್ಟೇ ಪ್ರಸಾದ, ದಾಸೋಹ ವಿತರಣೆಗೆ ಅನುಮತಿ ಸಿಗಲಿದೆ.
ದೇವರ ನೈವೇದ್ಯ ಮತ್ತು ದಾಸೋಹಕ್ಕಾಗಿ ಇರುವ ಅಡುಗೆ ಕೋಣೆ ಸಿಸಿಟಿವಿ ಹೊಂದಿರಲೇಬೇಕು ಎಂದಿದೆ. ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು. ತಯಾ ರಿಸಿರುವ ನೈವೇದ್ಯ/ಅಡುಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡ ಅನಂತರ ವಿತರಣೆ ಮಾಡಲು ಕ್ರಮ ವಹಿಸಬೇಕು. ದೇಗುಲದ ಪರಿಸರದಲ್ಲಿ ಭಕ್ತರೇ ಪ್ರಸಾದ ತಯಾರಿಸಿ ನೇರವಾಗಿ ವಿತರಿಸುವ ವಿಚಾರದಲ್ಲಿ ಪೂರ್ವಭಾವಿ ಅನುಮತಿ ಪಡೆಯಬೇಕು. ಭಕ್ತರಿಗೆ ವಿತರಿಸುವ ಮುನ್ನ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ತಂಡದಿಂದ ಪರೀಕ್ಷೆಗೆ ಒಳಪಡಿಸಿ ಪ್ರಸಾದವು ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ದೃಢೀಕರಣ ಪಡೆದುಕೊಳ್ಳಬೇಕು. ಪ್ರಸಾದದಲ್ಲಿ ಸೇರಿದ್ದು ಮೊನೋ ಕ್ರೋಟೋಪಾಸ್!
ಮೈಸೂರು: ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವನೆ ಘಟನೆಗೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಆಹಾರದಲ್ಲಿ ಕ್ರಿಮಿನಾಶಕ ಮೊನೋ ಕ್ರೋಟೋಪಾಸ್‌ನ ಆರ್ಗನೋ ಫಾಸ್ಪರಸ್ ಅಂಶ ಬೆರೆತಿರುವುದು ಪತ್ತೆಯಾಗಿದೆ. ತನಿಖೆ ಮುಂದುವರಿದಿರುವುದರಿಂದ ಕ್ರಿಮಿನಾಶಕ ಎಷ್ಟು ಪ್ರಮಾಣದಲ್ಲಿ ಬೆರೆತಿದೆ ಎಂಬುದನ್ನು ಈಗಲೇ ಬಹಿರಂಗಪಡಿಸಲಾಗುವುದಿಲ್ಲ ಎಂದು ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ ತಿಳಿಸಿದ್ದಾರೆ. ಜೆಎಸ್‌ಎಸ್ ಆಸ್ಪತ್ರೆ ಮತ್ತು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆ ಸಂಬಂಧ ಸಾಕಷ್ಟು ಸುಳಿವು ಸಿಕ್ಕಿದ್ದು, 13 ಅಧಿಕಾರಿಗಳು ವಿವಿಧ ಕೋನಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ತನಿಖೆ ಉತ್ತಮ ಹಾದಿಯಲ್ಲಿ ನಡೆಯುತ್ತಿದೆ ಎಂದಷ್ಟೇ ಹೇಳಬಹುದು ಎಂದರು.