Advertisement

CCB ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಸೆರೆ

08:31 PM Aug 28, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ/ಮಾರಾಟ ಮಾಡುತ್ತಿದ್ದ ಇಬ್ಬರನ್ನು 15 ಗ್ರಾಂ ಎಂಡಿಎಂಎ ಸಹಿತ ಮಂಗಳೂರು ಸಿಸಿಬಿ ಪೊಲೀಸರು ಬುಧವಾರ (ಆ.28) ವಶಕ್ಕೆ ಪಡೆದಿದ್ದಾರೆ.

Advertisement

ಕಾಸರಗೋಡು ಜಿಲ್ಲೆ ಮಂಜೇಶ್ವರ ಬಡಾಜೆ ಪೋಸ್ಟ್‌ ಪುಚ್ಚಿತ್‌ಬೈಲ್‌ ಹೌಸ್‌ ನಿವಾಸಿಗಳಾದ ಅಬ್ದುಲ್‌ ಸಲಾಂ ಯಾನೇ ಸಲಾಂ(30) ಮತ್ತು ಸೂರಜ್‌ ರೈ ಯಾನೇ ಅಂಕಿ(26) ಬಂಧಿತ ಆರೋಪಿಗಳು.

ಎಂಡಿಎಂಎಯನ್ನು ಮಂಗಳೂರು ನಗರಕ್ಕೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಬರುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ನಗರದ ತಲಪಾಡಿ ಕೆ.ಸಿ.ರೋಡ್‌ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

75,000 ರೂ. ಮೌಲ್ಯದ 15 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, 2 ಮೊಬೈಲ್‌ ಫೋನ್‌ಗಳು, ಡಿಜಿಟಲ್‌ ತೂಕ ಮಾಪಕ ಹಾಗೂ ಡಿಯೋ ದ್ವಿಚಕ್ರ ವಾಹನವನ್ನು ಸ್ವಾ ಧೀನಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,65,000 ರೂ.ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಆರೋಪಿಗಳ ಪೈಕಿ ಅಬ್ದುಲ್‌ ಸಲಾಂ ವಿರುದ್ಧ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ.

ಸೂರಜ್‌ ರೈ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ.

ಆರೋಪಿಗಳು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಕೇರಳದಿಂದ ಎಂಡಿಎಂಎ ನ್ನು ಖರೀದಿಸಿ ನಗರ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.

ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

ಸಿಸಿಬಿ ಘಟಕದ ಎಸಿಪಿ ಮನೋಜ್‌ ಕುಮಾರ್‌ ನಾಯ್ಕ ನೇತೃತ್ವದಲ್ಲಿ ಪೊಲೀಸ್‌ ನಿರೀಕ್ಷಕರಾದ ಶ್ಯಾಮ್‌ ಸುಂದರ್‌ ಎಚ್‌.ಎಂ. ಪಿಎಸ್‌ಐಯವರಾದ ನರೇಂದ್ರ ಮತ್ತು ಸಿಸಿಬಿ ಸಿಬಂದಿಯವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next