Advertisement

ಅಕ್ರಮ ಪಿಸ್ತೂಲ್‌ ಮಾರಾಟ ಜಾಲ ಭೇದಿಸಿದ ಸಿಸಿಬಿ

12:26 AM Apr 09, 2019 | Team Udayavani |

ಬೆಂಗಳೂರು: ಮಹಾರಾಷ್ಟ್ರದ ಅಮರಾವತಿಯಿಂದ ನಾಡಪಿಸ್ತೂಲ್‌ (ಕಂಟ್ರಿಮೆಡ್‌)ಗಳನ್ನು ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಬೃಹತ್‌ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.

Advertisement

ಹೆಬ್ಟಾಳದ ಶಕೀಲ್‌ ಅಹಮದ್‌ (24), ರಾಜಸ್ಥಾನದ ಶರ್ವಣ್‌ ಕತ್ರಿ (32), ಮಹಾರಾಷ್ಟ್ರದ ಅಮರಾವತಿಯ ಇಮ್ರಾನ್‌ಖಾನ್‌ (31), ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಲೀಲ್‌ ಉಮರ್‌ (29), ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ರಫಿ ಅಹಮದ್‌ ಖಾನ್‌ (26), ನಾಗವಾರ ಮುಖ್ಯರಸ್ತೆಯ ಗೋವಿಂದಪುರ ನಿವಾಸಿ ಸೈಯದ್‌ ವಸೀಂ (25), ಮಂಬೈನ ಮೊಹಮ್ಮದ್‌ ಹಸನ್‌ ಅನ್ಸಾರಿ (43), ಉತ್ತರಪ್ರದೇಶದ ಮುಜಾಫ‌ರ್‌ನಗರದ ಇಮ್ರಾನ್‌ (23) ಬಂಧಿತರು.

ಆರೋಪಿಗಳಿಂದ ಎರಡು ನಾಡಪಿಸ್ತೂಲ್‌ (ಕಂಟ್ರಿಮೆಡ್‌)ಗಳು, ಎಂಟು ಜೀವಂತ ಗುಂಡುಗಳು, ಒಂದು ಏರ್‌ಗನ್‌, 500 ಎಂ.ಎಲ್‌. ಕ್ಲೋರೋಫಾಮ್‌, 55 ಸಾವಿರ ರೂ. ನಗದು, ಒಂದು ಕಾರು, ಎರಡು ರಾಯಲ್‌ ಎನ್‌ಫಿಲ್ಡ್‌ ಬುಲೆಟ್‌ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಪಿಗಳ ಪೈಕಿ ಇಮ್ರಾನ್‌ಖಾನ್‌ ಮತ್ತು ಮೊಹಮ್ಮದ್‌ ಹಸನ್‌ ಅನ್ಸಾರಿ ಮಹಾರಾಷ್ಟ್ರದ ಅಮರಾವತಿಯಿಂದ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ನಗರಕ್ಕೆ ತಂದಿದ್ದು, ಆರ್‌.ಟಿ.ನಗರದ ತರಳಬಾಳು ರಸ್ತೆಯಲ್ಲಿ ಇತರೆ ಆರು ಮಂದಿಗಳಿಗೆ ಮಾರಾಟಕ್ಕೆ ಯತ್ನಿಸಿದ್ದರು. ಈ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ ಎಂದರು.

ಹತ್ತಾರು ವರ್ಷಗಳಿಂದ ಪಿಸ್ತೂಲ್‌ ಮಾರಾಟವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಇಮ್ರಾನ್‌ ಖಾನ್‌ ಮತ್ತು ಮೊಹಮ್ಮದ್‌ ಹಸನ್‌ ಅನ್ಸಾರಿ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಶೇಷಾದ್ರಿಪುರದಲ್ಲಿರುವ ಡ್ಯಾನ್ಸ್‌ ಬಾರ್‌ವೊಂದಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಹೆಬ್ಟಾಳದ ಶಕೀಲ್‌ ಅಹಮದ್‌ ಪರಿಚಯವಾಗಿದೆ. ಬಳಿಕ ಮೂವರು ನಗರದಲ್ಲಿ ಅಕ್ರಮ ಪಸ್ತೂಲ್‌ ಮಾರಾಟ ದಂಧೆ ವಿಸ್ತರಿಸಲು ಸಂಚು ರೂಪಿಸಿದ್ದರು ಎಂದು ಅವರು ಹೇಳಿದರು.

Advertisement

ರೈಸ್‌ಪುಲ್ಲಿಂಗ್‌, ನಿಧಿ ಹೆಸರಿನಲ್ಲಿ ವಂಚನೆ: ಆರೋಪಿಗಳು ಅಕ್ರಮ ಪಿಸ್ತೂಲ್‌ ಮಾರಾಟ ದಂಧೆ ಮಾತ್ರವಲ್ಲದೆ, ರೈಸ್‌ಪುಲ್ಲಿಂಗ್‌ ಹಾಗೂ ನಿಧಿ ಹುಡುಕಾಟ ಹೆಸರಿನಲ್ಲಿ ಹತ್ತಾರು ಮಂದಿಗೆ ಲಕ್ಷಾಂತರ ರೂ. ವಂಚನೆ ಮಾಡಿರುವುದು ತಿಳಿದು ಬಂದಿದೆ.

ಜತೆಗೆ ತಮ್ಮ ಬಳಿಯಿರುವ ಕಟ್ಟರ್‌ಗಳಿಂದ ಮನೆಗಳ ಬೀಗ ಮುರಿದು ಮನೆಗಳ್ಳತನ, ಸುಲಿಗೆ ಹಾಗೂ ಕೆಲವಡೆ ದರೋಡೆ ಕೂಡ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಚೆನ್ನೈನ ಕೆಲ ಠಾಣೆಗಳಲ್ಲಿಯೂ ವಂಚನೆ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯಿದ್ದು, ಹೆಚ್ಚಿನ ವಿಚಾರಣೆಗಾಗಿ ಎಲ್ಲ ಆರೋಪಿಗಳನ್ನು ಎಂಟು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಬಳಿ ಕ್ಲೋರೋಫಾಮ್‌ ಪತ್ತೆಯಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಗಳು ಕೃತ್ಯಕ್ಕೂ ಮೊದಲು ಕ್ಲೋರೋಫಾಮ ಸೇವಿಸಿ ಅದರ ಅಮಲಿನಲ್ಲಿ ಕಳ್ಳತನ ಮತ್ತಿತರ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಹೇಳಿದರು.

ಕಪ್ಪು ಅರಿಶಿನಪುಡಿ ಬಳಕೆ: ತಮ್ಮ ಬಳಿಯಿರುವ “ಕಪ್ಪು ಅರಿಶಿನಪುಡಿ’ಯಿಂದ ಮನೆ ಹಾಗೂ ಅಂಗಡಿಗಳ ಕೀಗಳನ್ನು ಸುಲಭವಾಗಿ ಕತ್ತರಿಸಬಹುದು ಎಂದು ನಂಬಿಸುತ್ತಿದ್ದ ಆರೋಪಿಗಳು, ಪ್ರತಿ ಕೆ.ಜಿ.ಗೆ 10 ಕೋಟಿ ರೂ. ನಿಗದಿ ಮಾಡಿದ್ದರು. ಇದನ್ನು ನಂಬಿ ಖರೀದಿ ಮಾಡಲು ಬರುತ್ತಿದ್ದ ವ್ಯಕ್ತಿಗಳಿಗೆ ಪಿಸ್ತೂಲ್‌ ತೋರಿಸಿ ಸುಲಿಗೆ ಮಾಡುತ್ತಿದ್ದರು. ಆದರೆ, ಇದುವರೆಗೂ ಈ ಸಂಬಂಧ ಯಾರು ದೂರು ನೀಡಿಲ್ಲ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next