ಮಂಡ್ಯ: ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಮಾಡುವ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಠಾಣೆಗಳಿಗೆ ಸಿಸಿ ಟಿವಿ ಅಳವಡಿಸುತ್ತಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳೂ ಇದೀಗ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು ವ್ಯಾಪ್ತಿಗೆ ಒಳಪಟ್ಟಿವೆ.
ಜಿಲ್ಲೆಯಲ್ಲಿ ಒಟ್ಟು 31 ಪೊಲೀಸ್ ಠಾಣೆಗಳಿದ್ದು, ಪ್ರತಿಯೊಂದು ಠಾಣೆಗೆ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕಂಟ್ರೋಲ್ ಯೂನಿಟ್ ಅದೇ ಠಾಣೆಯಲ್ಲಿರುತ್ತದೆ. ಪೊಲೀಸ್ ಠಾಣೆಗಳಿಗೆ ಯಾರ್ಯಾರು ಬರುತ್ತಾರೆ, ಹೋಗುತ್ತಾರೆ. ಸಾರ್ವಜನಿಕರೊಂದಿಗೆ ಅಧಿಕಾರಿಗಳ ವರ್ತನೆ ಹೇಗಿರುತ್ತದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಎಲ್ಲಾ ಠಾಣೆಗಳಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಮಾಡುವುದು ಇದರ ಹಿಂದಿನ ಮೂಲ ಉದ್ದೇಶವೆಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ದೂರು: ಪೊಲೀಸರು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಸಕಾಲದಲ್ಲಿ ದೂರು ದಾಖಲಿಸಿಕೊಳ್ಳದೆ ವಿಳಂಬ ಮಾಡುತ್ತಿದ್ದಾರೆ. ದೂರು ನೀಡಲು ಬಂದವರ ವಿರುದ್ಧ ದರ್ಪ ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎನ್ನುವುದೂ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಠಾಣೆಗಳಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿ ಅಧಿಕಾರಿಗಳ ಕಾರ್ಯವೈಖರಿ ಮೇಲೆ ನಿಗಾ ವಹಿಸಲು ಉನ್ನತ ಮಟ್ಟದ ಅಧಿಕಾರಿಗಳು ಮುಂದಾಗಿದ್ದಾರೆ.
ಇದುವರೆಗೂ ಪೊಲೀಸ್ ಠಾಣೆಯೊಳಗೆ ಏನು ನಡೆಯುತ್ತಿದೆ ಎನ್ನುವುದು ಯಾರ ಗಮನಕ್ಕೂ ಬರುತ್ತಿರಲಿಲ್ಲ. ರಾಜ್ಯದ ವಿವಿಧೆಡೆ ಆಗಾಗ ವರದಿಯಾಗುತ್ತಿದ್ದ ಲಾಕಪ್‌ಡೆತ್ ಪ್ರಕರಣಗಳೂ ಪೊಲೀಸ್ ಅಧಿಕಾರಿಗಳನ್ನು ಅನುಮಾನದಿಂದ ನೋಡುವಂತಾಗಿತ್ತು. ಅಲ್ಲದೆ, ಪೊಲೀಸ್ ಅಧಿಕಾರಿಗಳ ವಿರುದ್ಧವೇ ಸಾಕಷ್ಟು ದೂರುಗಳು ಮೇಲಧಿಕಾರಿಗಳಿಗೆ ಸಲ್ಲಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆ ಕರ್ತವ್ಯಬದ್ಧತೆಯನ್ನು ಪರಿಶೀಲಿಸುವ ಉದ್ದೇಶದಿಂದ ಎಲ್ಲಾ ಠಾಣೆಗಳಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿದೆ ಎಂದು ಹೇಳಲಾಗಿದೆ.
ಪ್ರಮುಖ ಸ್ಥಳಗಳಲ್ಲಿ ಅಳವಡಿಕೆ: ಪೊಲೀಸ್ ಠಾಣೆಯ ಹೊರಗೆ ಒಂದು, ಒಳಗೆ ಮೂರು ಸಿಸಿ ಕ್ಯಾಮರಾಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಠಾಣೆಯ ಎಲ್ಲಾ ಮೂಲೆಗಳು ಕ್ಯಾಮರಾ ವ್ಯಾಪ್ತಿಗೆ ಬರುವಂತೆ ಎಚ್ಚರಿಕೆ ವಹಿಸಲಾಗಿದೆ. ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಇರುವ ಜಾಗಗಳಲ್ಲೂ ಕ್ಯಾಮರಾ ಕಣ್ಗಾವಲು ಇರುವುದರಿಂದ ಪೊಲೀಸರು ಸ್ವಲ್ಪ ಜಾಗೃತರಾಗುವುದಕ್ಕೂ ಸಾಧ್ಯವಾಗಿದೆ. ಅಲ್ಲದೆ, ಸದಾಕಾಲ ಕ್ಯಾಮರಾ ಸುಸ್ಥಿತಿಯಲ್ಲಿರುವಂತೆ ಮುನ್ನೆಚ್ಚರಿಕೆ ವಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ವಹಣೆ ಮುಖ್ಯ: ಪೊಲೀಸ್ ಇಲಾಖೆಯೊಳಗೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ನಿಗಾ ವಹಿಸಲು ಅಳವಡಿಸಿರುವ ಸಿಸಿ ಕ್ಯಾಮರಾಗಳು ಉತ್ತಮ ಸ್ಥಿತಿಯಲ್ಲಿರುವಂತೆ ಜೋಪಾನ ಮಾಡುವುದೂ ಅಷ್ಟೇ ಮುಖ್ಯವಾಗಿದೆ. ಕ್ಯಾಮರಾಗಳು ಹಾಳಾಗದಂತೆ ಪದೇ ಪದೇ ದುರಸ್ತಿಗೆ ಒಳಗಾಗದಂತೆ, ಉದ್ದೇಶಪೂರ್ವಕವಾಗಿ ಹಾನಿ ಉಂಟುಮಾಡದಂತೆ ಎಚ್ಚರ ವಹಿಸಬೇಕು. ಆಗ ಸಿಸಿ ಕ್ಯಾಮರಾ ಅಳವಡಿಕೆಯ ಉದ್ದೇಶ ಸಾರ್ಥಕತೆ ಪಡೆದುಕೊಳ್ಳುತ್ತದೆ. ಸಿಸಿ ಕ್ಯಾಮರಾ ಅಳವಡಿಸಿ ಕೆಲವೇ ದಿನಗಳಲ್ಲಿ ಅವುಗಳ ಕಾರ್ಯ ಸ್ಥಗಿತಗೊಂಡರೆ ಉದ್ದೇಶ ಹಳ್ಳ ಹಿಡಿಯುವುದರಲ್ಲಿ ಸಂಶಯವಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಪೊಲೀಸ್ ಅಧಿಕಾರಿಗಳು ಎಚ್ಚರದಿಂದ ಇರುವುದಕ್ಕೆ ಸಿಸಿ ಕ್ಯಾಮರಾ ಬ್ರಹ್ಮಾಸ್ತ್ರವಾಗುವುದೇ. ಠಾಣೆಯೊಳಗಿರುವ ಸಿಸಿ ಕ್ಯಾಮರಾಗಳು ಎಷ್ಟು ದಿನ ಕಾರ್ಯನಿರ್ವಹಿಸಲಿವೆ, ಪೊಲೀಸರನ್ನು ಜನಸ್ನೇಹಿ ಮಾಡುವಲ್ಲಿ ಸಿಸಿ ಕ್ಯಾಮರಾ ಯಶಸ್ವಿಯಾಗುವುದೆ, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಅಧಿಕಾರಿಗಳ ಕಾರ್ಯವೈಖರಿ ಸುಧಾರಿಸುವುದೇ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.