Advertisement
ಕಾಸರಗೋಡು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ 95 ಸಿಸಿ ಟಿವಿ ಕೆಮರಾಗಳನ್ನು ಅಳವಡಿಸಲಾಗಿದ್ದು, ಅವುಗಳಲ್ಲಿ 10 ಕೆಮರಾಗಳು ಮಾತ್ರವೇ ಇದೀಗ ಕಾರ್ಯಾಚರಿಸುತ್ತಿವೆ. ಈ ಮಧ್ಯೆ 81 ಕೆಮರಾಗಳು ಸಮರ್ಪಕವಾಗಿ ಕಾರ್ಯವೆಸಗದೆ ಮೂರು ವರ್ಷಗಳು ಕಳೆದವು. ಕೊಲೆ ಪ್ರಕರಣಗಳು, ದಾಳಿಗಳು, ಕಳ್ಳತನ ಇತ್ಯಾದಿ ನಿರಂತರ ಸುದ್ದಿಯಾಗುತ್ತಿರುವಾಗ ಸಿಸಿ ಟಿವಿ ಕೆಮರಾಗಳು ಕಾರ್ಯವೆಸಗದಿರುವುದು ಪೊಲೀಸ್ ತನಿಖೆಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
Related Articles
Advertisement
ಶಾಸಕರ ಪ್ರಾದೇಶಿಕ ನಿಧಿ ಬಳಕೆಗೆ ನಿರ್ಧಾರ ಕಾಸರಗೋಡಿನ ಸೂಕ್ಷ್ಮ ಪರಿಸ್ಥಿತಿಯನ್ನು ಗಮನಿಸಿ ಜಿಲ್ಲಾಡಳಿತ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರಮುಖರನ್ನು ಒಳಗೊಂಡ ಜಿಲ್ಲಾ ಮಟ್ಟದ ಶಾಂತಿ ಸಮಿತಿಯು ಸಿಸಿ ಟಿವಿ ಕೆಮರಾಗಳನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿತ್ತು. ಈ ತೀರ್ಮಾನದಂತೆ ಮಂಜೇಶ್ವರ, ಕಾಸರಗೋಡು ಮತ್ತು ಕಾಞಂಗಾಡು ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ತಲಾ ಹತ್ತು ಲಕ್ಷ ರೂ. ಹಾಗೂ ಕೇರಳ ಸರಕಾರದ 2 ಕೋಟಿ ರೂ. ವಿನಿಯೋಗಿಸಿ ಕೆಲ್ಟ್ರೋನ್ ಕಂಪೆನಿಗೆ ಮೂರು ವರ್ಷಗಳ ದುರಸ್ತಿ ಕಾಮಗಾರಿ ಸಹಿತ ಹೊಸ ಕೆಮರಾಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿತ್ತು. ಆದರೆ ಈ ನಿರ್ಧಾರ ಕೂಡ ಇದೀಗ ಮೂಲೆಪಾಲಾಗಿರುವುದು ದುರಂತ.
ಹಲವೆಡೆಗಳಲ್ಲಿ ಸಮಾಜದ್ರೋಹಿಗಳು, ಕಿಡಿಗೇಡಿಗಳು ಕೆಮರಾಗಳನ್ನು ಹಾನಿಗೊಳಿಸಿರುವುದಾಗಿ ಮಾಹಿತಿಯಿದೆ. ಹಾನಿಗೀಡಾದ ಕೆಮರಾಗಳನ್ನು ದುರಸ್ತಿಗೊಳಿಸಲು ಇದುವರೆಗೆ ಒಂದು ರೂಪಾಯಿ ಕೂಡ ಬಿಡುಗಡೆಗೊಳಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಪ್ರಕರಣಗಳ ತನಿಖೆಯಲ್ಲಿ ಸಿಸಿ ಟಿವಿ ಕ್ಯಾಮರಾಗಳು ಅತ್ಯಂತ ಉಪಯುಕ್ತವಾಗುತ್ತಿವೆ ಎಂದು ಪೊಲೀಸರು ಹೇಳುತ್ತಿದ್ದರೂ, ಕೆಮರಾಗಳು ಕೆಟ್ಟುಹೋದಲ್ಲಿ ಪ್ರಮುಖ ಪ್ರಕರಣಗಳ ತನಿಖೆಗೂ ಯಾವುದೇ ಪ್ರಯೋಜನ ಸಿಗುತ್ತಿಲ್ಲ.
ಇದೀಗ ದುರಸ್ತಿ ಕಾರ್ಯಗಳಿಗೆ ಬೃಹತ್ ಮೊತ್ತ ನೀಡಬೇಕಾಗಿದ್ದರೂ, ಕೇವಲ 30 ಲಕ್ಷ ರೂ. ಗಳನ್ನಾದರೂ ಬಿಡುಗಡೆ ಮಾಡಲು ಕೂಡ ಸರಕಾರ ತಯಾರಾಗುತ್ತಿಲ್ಲ. ಈ ಮೊತ್ತವನ್ನು ನೀಡಿದರೂ ಕ್ಯಾಮರಾಗಳನ್ನು ದುರಸ್ತಿಗೊಳಿಸಲು ಸಾಧ್ಯವಿದೆ. ಆದರೆ ಈ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಕೂಡ ಯಾಕೋ ಗಂಭೀರ ನಿಲುವು ತಳೆದಂತೆ ಕಂಡುಬರುತ್ತಿಲ್ಲ ಎಂಬುದು ಅಚ್ಚರಿಯ ವಿಷಯವಾಗಿದೆ.
1.5 ಕೋಟಿ ರೂ. ಬಿಡುಗಡೆಕಾಸರಗೋಡು ಜಿಲ್ಲೆಯಲ್ಲಿ ಪದೇ ಪದೇ ಕೊಲೆ, ದರೋಡೆ, ಕಳವು, ಕೋಮು ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರಸ್ತೆ ಮತ್ತು ಜಂಕ್ಷನ್‌ಗಳಲ್ಲಿರುವ ಸಿ.ಸಿ. ಟಿ.ವಿ. ಕೆಮರಾಗಳನ್ನು ನವೀಕರಿಸಲಾಗುವುದೆಂದು ಎಡಿಜಿಪಿ ರಾಜೇಶ್ ದಿವಾನ್ ತಿಳಿಸಿದ್ದಾರೆ. ಇದಕ್ಕಾಗಿ ಜಿಲ್ಲೆಗೆ 1.5 ಕೋಟಿ ರೂ. ಸರಕಾರ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ಸೈಮನ್ ತಿಳಿಸಿದ್ದಾರೆ.