Advertisement
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯು ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಈ ಹಿಂದೆ ಉಡುಪಿ ನಗರಾದ್ಯಂತ 90 ಸಿಸಿ ಟಿವಿಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಬಹುತೇಕ ಹೆಚ್ಚಿನ ಕೆಮರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಣ್ಣ ನಗರವಾದರೂ ಜನದಟ್ಟನೆ, ವಾಹನದಟ್ಟನೆ ಅತ್ಯಧಿಕವಾಗಿ ಕಂಡುಬರುತ್ತಿದ್ದು, ಈ ನಡುವೆ ಅಲ್ಲಲ್ಲಿ ಅಪಘಾತ, ಕಳ್ಳತನ ಸಹಿತ ಸಂಜೆಯ ಬಳಿಕ ಮಟ್ಕಾ, ಗಾಂಜಾದಂತಹ ಚಟುವಟಿಕೆಗಳೂ ವ್ಯಾಪಕವಾಗಿ ನಡೆಯುತ್ತಿದೆ. ಈ ಎಲ್ಲದರ ಬಗ್ಗೆ ಪೊಲೀಸರು ಕಣ್ಗಾವಲು ಇರಿಸುವುದು ಕಷ್ಟಸಾಧ್ಯವಾದರೂ ಸಿಸಿಟಿವಿಗಳ ಆಧಾರದಲ್ಲಿ ಪತ್ತೆಹಚ್ಚಲು ಸಾಧ್ಯವಿದೆ.
ನಗರದಲ್ಲಿ ಯಾವುದಾದರೂ ಘಟನೆಗಳು ನಡೆದರೆ ಪೊಲೀಸರು ಸ್ಥಳೀಯ ಅಂಗಡಿ, ಹೊಟೇಲ್, ಶಾಪ್‌ಗಳಲ್ಲಿ ಅಳವಡಿಸಿರುವ ಸಿಸಿ ಕೆಮರಾಗಳಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸುವ ಅಗತ್ಯ ಎದುರಾಗುತ್ತಿದೆ. ಇದು ಅಗತ್ಯವಾದರೂ ಇಲಾಖೆಯೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಆಯಾಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದರೆ ತನಿಖೆ ನಡೆಸಲೂ ಪೊಲೀಸರಿಗೆ ಸುಲಭವಾಗಲಿದೆ. ಯಾವ ಭಾಗದಲ್ಲಿ ಅಗತ್ಯ
ಕಿನ್ನಿಮೂಲ್ಕಿ ಜಂಕ್ಷನ್, ಸಂತೆಕಟ್ಟೆ, ಕಡಿಯಾಳಿ, ಕಲ್ಸಂಕ, ಸಿಟಿ ಬಸ್ ತಂಗುದಾಣ, ಸರ್ವಿಸ್ ಬಸ್ ತಂಗುದಾಣ, ಬನ್ನಂಜೆ ಸರ್ಕಲ್, ಕರಾವಳಿ ಬೈಪಾಸ್, ಬ್ರಹ್ಮಗಿರಿ, ಅಂಬಲಪಾಡಿ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಅಂಬಾಗಿಲು ಜಂಕ್ಷನ್, ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್, ಪೆರಂಪಳ್ಳಿ ಸಹಿತ ಇನ್ನಿತರ ಕೆಲವು ಭಾಗದಲ್ಲಿ ಅತ್ಯಾಧುನಿಕ ಸಿಸಿ ಟಿವಿಗಳನ್ನು ಇಲಾಖೆಯ ಮೂಲಕ ಅಳವಡಿಸುವುದು ಅತೀ ಅಗತ್ಯವಾಗಿದೆ. ಕೆಲವೆಡೆ ಸಿಸಿ ಟಿವಿಗಳು ಇವೆಯಾದರೂ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.
Related Articles
ಜನಪ್ರತಿನಿಧಿಗಳ ಸಹಕಾರ ಮತ್ತು ಸಿಎಸ್‌ಆರ್ ಅನುದಾನ ಬಳಕೆ ಮಾಡಿ ನಗರದಲ್ಲಿ ಸಿಸಿ ಕೆಮರಾ ಅಳವಡಿಕೆ ಮಾಡಬಹುದು. ಇದರಿಂದ ನಗರ ಪ್ರವೇಶ ಮತ್ತು ನಿರ್ಗಮನ ಪ್ರದೇಶ ಸೇರಿದಂತೆ ಆಯಾಕಟ್ಟಿನ ಸ್ಥಳಗಳಲ್ಲಿ ಯಾರು ಬರುತ್ತಾರೆ ಮತ್ತು ಹೋಗುತ್ತಾರೆ ಎಂಬ ಮಾಹಿತಿಯನ್ನು ಸುಲಭದಲ್ಲಿ ತಿಳಿಯಲು ಸಾಧ್ಯವಾಗುತ್ತದೆ. ಈಗಾಗಲೇ ಸಿಸಿಟಿವಿ ಇರುವೆಡೆ ಹೊರತುಪಡಿಸಿ ಉಳಿದ ಭಾಗದಲ್ಲಿ ಅಳವಡಿಸಬೇಕು. ನಗರಸಭೆ ಸಹಿತ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ತುರ್ತು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
ಅಪರಾಧಗಳ ಬಗ್ಗೆ ಮಾಹಿತಿ ಕಲೆಹಾಕಲು ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಆಯಾಕಟ್ಟಿನ 15 ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಉದ್ದೇಶಿಸಲಾಗಿದ್ದು, ಶೀಘ್ರವಾಗಿ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಕಳುಹಿಸಲಾಗುವುದು. 15 ಜಂಕ್ಷನ್‌ಗಳಲ್ಲಿ ಒಂದೊಂದರಲ್ಲಿ 3-4 ಕೆಮರಾಗಳನ್ನು ಅಳವಡಿಸಲಾಗುವುದು. ಮೊದಲ ಆದ್ಯತೆಯಾಗಿ ಉಡುಪಿ ನಗರಕ್ಕೆ ಕೆಮರಾಗಳನ್ನು ಅಳವಡಿಸಿ, ಮುಂದೆ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಅಳವಡಿಸಲಾಗುವುದು. ಇದಕ್ಕೆ ಬೇಕಾದ ಪ್ರಸ್ತಾವವನ್ನು ಸಿದ್ಧಪಡಿಸಲಾಗುವುದು.– – ಡಾ| ಅರುಣ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ – ಪುನೀತ್ ಸಾಲ್ಯಾನ್ ಸಸಿಹಿತ್ಲು