ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ(ಸಿಬಿಎಸ್ ಇ) ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟಗೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿದ್ದಾರೆ. 2019ನೇ ಸಾಲಿನ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು ಶೇ.83.4ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷದ ಫಲಿತಾಂಶ. ಶೇ.83.01.
ಹನ್ಸಿಕಾ ಶುಕ್ಲಾ ಮತ್ತು ಕರಿಷ್ಮಾ ಅರೋರಾ ಸರಾಸರಿ 500 ಅಂಕಗಳಲ್ಲಿ 499 ಅಂಕ ಗಳಿಸುವ ಮೂಲಕ ಟಾಪರ್ ಪಟ್ಟ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಹನ್ಸಿಕಾ ಶುಕ್ಲಾ ಘಾಜಿಯಾಬಾದ್ ನ ಡಿಪಿಎಸ್ ಮೀರತ್ ರಸ್ತೆಯ ನಿವಾಸಿ. ಕರಿಷ್ಮಾ ಅರೋರಾ ಮುಜಾಫರ್ ನಗರ್ ನಿವಾಸಿಯಾಗಿದ್ದಾರೆ.
ಸಿಬಿಎಸ್ ಇ ದ್ವಿತೀಯ ಪಿಯುಸಿ ಫಲಿತಾಂಶವನ್ನು ವಿದ್ಯಾರ್ಥಿಗಳು ಈ ಅಧಿಕೃತ ವೆಬ್ ಸೈಟ್ ನಲ್ಲಿ ನೋಡಬಹುದಾಗಿದೆ. cbse.nic.in ಮತ್ತು cbseresults.nic.in.
ಫೆಬ್ರುವರಿ 16ರಂದು ಆರಂಭಗೊಂಡಿದ್ದ ಸಿಬಿಎಸ್ ಇ ದ್ವಿತೀಯ ಪಿಯುಸಿ ಮೆಗಾ ಪರೀಕ್ಷೆಯಲ್ಲಿ ಬರೋಬ್ಬರಿ 13 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಮೂರು ವಿದ್ಯಾರ್ಥಿಗಳು ಎರಡನೇ Rank ಪಡೆದಿದ್ದಾರೆ. ಋಷಿಕೇಶದ ಗೌರಂಗಿ ಚಾವ್ಲಾ, ರಾಯ್ ಬರೇಲಿಯ ಐಶ್ವರ್ಯ ಹಾಗೂ ಹರ್ಯಾಣದ ಭವ್ಯ 500ರಲ್ಲಿ 498 ಅಂಕ ಗಳಿಸಿದ್ದಾರೆ.
ದೆಹಲಿಯ ನೀರಜ್ ಜಿಂದಾಲ್ ಮತ್ತು ಮೆಹಕ್ ತಲ್ವಾರ್ ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳು 3ನೇ Rank ಪಡೆದಿದ್ದು, ಸಿಬಿಎಸ್ ಇ ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಹತ್ತು ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಯಾರು ಈ ಬಾರಿಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೋ ಅಂತಹ ವಿದ್ಯಾರ್ಥಿಗಳು ಮರು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವಂತಾಗಲಿ..ಬೆಸ್ಟ್ ಆಫ್ ಲಕ್ ಎಂದು ಕೇಂದ್ರ ಶಿಕ್ಷಣ ಸಚಿವ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.