ಹೊಸದಿಲ್ಲಿ : ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ ಕೆ ಪಟ್ನಾಯಕ್ ಅವರು ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ವಿರುದ್ಧದ ತನಿಖೆಯ ಮೇಲುಸ್ತುವಾರಿ ನಡೆಸುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿಂದು ಹೇಳಿದರು.
ವರ್ಮಾ ಮತ್ತು ಅಸ್ಥಾನಾ ವಿರುದ್ಧದ ಆರೋಪ – ಪ್ರತ್ಯಾರೋಪಗಳ ತನಿಖೆಯನ್ನು ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಡೆಸಲಿದ್ದು ಎರಡು ವಾರಗಳೊಳಗೆ ತನಿಖೆ ಮುಗಿಸಲಿದೆ ಎಂದು ಸಿಜೆಐ ಗೊಗೋಯ್ ಹೇಳಿದರು.
ಆಲೋಕ್ ವರ್ಮಾ ಬಳಿಕ ಇದೀಗ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಕೂಡ ತನ್ನ ವಿರುದ್ದದ ಸರಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.
ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ಅವರು ಈಗಾಗಲೇ ಸರಕಾರ ತನ್ನ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ತನ್ನನ್ನು ಬಲವಂತದ ರಜೆಯ ಮೇಲೆ ಕಳುಹಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಪ್ರವೇಶಿಸಿದ್ದಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳ ತನಿಖೆಯ ಹೊಣೆ ಹೊತ್ತಿರುವ ಸಿಬಿಐ ನ ಅನೇಕ ಅಧಿಕಾರಿಗಳನ್ನು ಸರಕಾರ ವರ್ಗಾಯಿಸಿರುವುದು ಸಿಬಿಐ ಕಾರ್ಯಕ್ಷಮತೆಗೆ ಸವಾಲಾಗಿ ಪರಿಣಮಿಸಿದೆ ಎಂದು ವರ್ಮಾ ಆರೋಪಿಸಿದ್ದಾರೆ.
ಇದೇ ವೇಳೆ ಸಿಬಿಐ ಉನ್ನತ ಅಧಿಕಾರಿಗಳ ವಿರುದ್ದದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಸ್‌ಐಟಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿ ಸರಕಾರೇತರ ಸೇವಾ ಸಂಸ್ಥೆ “ಕಾಮನ್ ಕಾಸ್’ ಸಲ್ಲಿಸಿರುವ ಅರ್ಜಿ ಕೂಡ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಇದೆ.