ನವದೆಹಲಿ: ನೋಯ್ಡಾ-ಆಗ್ರಾವನ್ನು ಸಂಪರ್ಕಿಸುವ ಬಹುಕೋಟಿ ಯುಮುನಾ ಎಕ್ಸ್ ಪ್ರೆಸ್ ವೇ ಯೋಜನೆಗಾಗಿ ಮಥುರಾದಲ್ಲಿ ಖರೀದಿಸಿದ ಭೂಮಿಯ 126 ಕೋಟಿ ರೂಪಾಯಿ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿರುವುದಾಗಿ ವರದಿ ತಿಳಿಸಿದೆ.
2009ರಲ್ಲಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಬಹುಜನ್ ಸಮಾಜ್ ಪಕ್ಷದ ಮುಖ್ಯಸ್ಥೆ ಮಾಯಾವತಿ 165 ಕಿಲೋ ಮೀಟರ್ ದೂರದ ಎಕ್ಸ್ ಪ್ರೆಸ್ ಹೆದ್ದಾರಿಯ ಯೋಜನೆ ಆರಂಭಿಸಿದ್ದರು. ನಂತರ 2012ರಲ್ಲಿ ಬಿಎಸ್ಪಿ ವಿರೋಧಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದ ನಂತರ ಯೋಜನೆಯನ್ನು ಉದ್ಘಾಟಿಸಿದ್ದರು.
ಯಮುನಾ ಎಕ್ಸ್ ಪ್ರೆಸ್ ವೇ ಕಾಮಗಾರಿಯಲ್ಲಿ 126 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 2018ರಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಉತ್ತರಪ್ರದೇಶ ಸರ್ಕಾರ ಎಫ್ಐಆರ್ ದಾಖಲಿಸಿತ್ತು. ಪ್ರಾಥಮಿಕ ಮಾಹಿತಿ ವರದಿಯಲ್ಲಿ ಎಕ್ಸ್ ಪ್ರೆಸ್ ವೇ ಸಂಸ್ಥೆಯ ಮಾಜಿ ಎಕ್ಸಿಕ್ಯೂಟಿವ್ ಪಿಸಿ ಗುಪ್ತಾ ಹಾಗೂ ಇತರ 19 ಮಂದಿಯ ಹೆಸರನ್ನು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಯಮುನಾ ಎಕ್ಸ್ ಪ್ರೆಸ್ ವೇ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳಬೇಕೆಂದು ಉತ್ತರ ಪ್ರದೇಶ ಸರ್ಕಾರ ಮನವಿ ಮಾಡಿಕೊಂಡಿತ್ತು. ಉತ್ತರಪ್ರದೇಶ ಸರ್ಕಾರದ ಇಲಾಖಾ ತನಿಖೆಯಲ್ಲಿ ಗುಪ್ತಾ ಹಾಗೂ ಯಮುನಾ ಎಕ್ಸ್ ಪ್ರೆಸ್ ವೇ ಇಂಡಸ್ಟ್ರೀಯಲ್ ಡೆವಲಪ್ ಮೆಂಟ್ ಪ್ರಾಧಿಕಾರ(ವೈಇಐಡಿಎ)ದ ಕೆಲವು ಅಧಿಕಾರಿಗಳು ಮತ್ತು ಇತರರು ಮಥುರಾದ ಏಳು ಹಳ್ಳಿಯಲ್ಲಿ 57.15 ಹೆಕ್ಟೇರ್ ಜಾಗವನ್ನು 85.49 ಕೋಟಿ ರೂಪಾಯಿಗೆ 19 ಕಂಪನಿಗಳ ನೆರವಿನೊಂದಿಗೆ ಖರೀದಿಸಿದ್ದರು ಎಂದು ತಿಳಿದು ಬಂದಿತ್ತು.
ಈ ಜಾಗವನ್ನು ವೈಇಐಡಿಎ 126 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸಲು ಮುಂದಾಗಿದೆ ಎಂದು ವರದಿ ತಿಳಿಸಿದೆ.