Advertisement

ಉದ್ಯಮಿ ಆದಿಕೇಶವುಲು ಪುತ್ರನ ವಿರುದ್ಧ ಸಿಬಿಐ ತನಿಖೆಗೆ ಆದೇಶ

10:08 PM Sep 08, 2022 | Team Udayavani |

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಕೆ.ರಘುನಾಥ್‌ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ಉದ್ಯಮಿ, ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಅಧ್ಯಕ್ಷರೂ ಆಗಿದ್ದ ಮಾಜಿ ಸಂಸದ ದಿ| ಡಿ.ಕೆ. ಆದಿಕೇಶವುಲು ನಾಯ್ಡು ಅವರ ಪುತ್ರ ಡಿ.ಎ.ಶ್ರೀನಿವಾಸ್‌ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ ನೀಡಿದೆ.

Advertisement

ಪ್ರಕರಣ ಸಂಬಂಧ ಮೃತ ಕೆ. ರಘುನಾಥ್‌ ಅವರ ಪತ್ನಿ ಎಂ. ಮಂಜುಳಾ ಹಾಗೂ ಪುತ್ರ ರೋಹಿತ್‌ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಿ ಆದೇಶಿಸಿದೆ.

ಅಲ್ಲದೆ, ಸ್ಥಳೀಯ ಪೊಲೀಸರು ಹಾಗೂ ಎಸ್‌ಐಟಿ ನಡೆಸಿದ್ದ ತನಿಖೆಯಲ್ಲಿ ಲೋಪಗಳಿರುವ ಹಿನ್ನೆಲೆಯಲ್ಲಿ ನ್ಯಾಯಸಮ್ಮತ ತನಿಖೆಗೆ ಸಿಬಿಐ ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದೆ. ಎಸ್‌ಐಟಿ ಸಲ್ಲಿಸಿರುವ ಬಿ ರಿಪೋರ್ಟ್‌ ಪ್ರಭಾವಕ್ಕೆ ಒಳಗಾಗದೆ ಸಿಬಿಐ ಸ್ವತಂತ್ರವಾಗಿ ತನಿಖೆ ನಡೆಸಬೇಕು. ತನಿಖೆಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಆದಿಕೇಶವುಲು 2013ರ ಏ.24 ರಂದು ಮೃತಪಟ್ಟಿದ್ದರು. ಅವರಿಗೆ  ರಿಯಲ್‌ ಎಸ್ಟೇಟ್‌ ಉದ್ಯಮಿ ರಘುನಾಥ್‌ ಆಪ್ತರಾಗಿದ್ದರು. ಹಾಗಾಗಿ ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್‌, ರಘುನಾಥ್‌ಗೆ ತಮ್ಮ ಹೆಸರಿನಲ್ಲಿದ್ದ ಆಸ್ತಿ ವರ್ಗಾಯಿಸಲು ಒತ್ತಡ ಹೇರುತ್ತಿದ್ದರೆಂದು ಆರೋಪಿಸಲಾಗಿದೆ. ರಘುನಾಥ್‌ 2016ರಲ್ಲಿ ತಮ್ಮ ಪತ್ನಿ ಮಂಜುಳಾ ಹೆಸರಿಗೆ  ಆಸ್ತಿ ಉಯಿಲು ಬರೆದಿದ್ದರು. ಆದಾದ ನಂತರ 2019 ರ ಮೇ 4 ರಂದು ರಘುನಾಥ್‌ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ, ರಘುನಾಥ್‌ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಆದಿಕೇಶವುಲು ಅವರ ಕುಟುಂಬದ ಸದಸ್ಯರ ಒಡೆತನದಲ್ಲಿರುವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಸಾವನ್ನು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಮುಕ್ತಾಯಗೊಳಿಸಿದ್ದರು. ಇದನ್ನು ವಿರೋಧಿಸಿ ರಘುನಾಥ್‌ ಪತ್ನಿ ಮಂಜುಳಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ತನಿಖೆಗೆ ಎಸ್‌ಐಟಿ ರಚಿಸುವಂತೆ 2021ರ ಏಪ್ರಿಲ್‌ನಲ್ಲಿ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಎಸ್‌ಐಟಿ ಬಿ ರಿಪೋರ್ಟ್‌ ಸಲ್ಲಿಸಿತ್ತು. ಸಿಬಿಐ ತನಿಖೆಗೆ ಕೋರಿ ಪತ್ನಿ ಹಾಗೂ ಪುತ್ರ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next