Advertisement

ಡಿಕೆಶಿ ವಿರುದ್ಧ ಸಿಬಿಐ ತನಿಖೆ: ಮಧ್ಯಂತರ ತಡೆ ವಿಸ್ತರಣೆ

10:38 PM Mar 03, 2023 | Team Udayavani |

ಬೆಂಗಳೂರು: ಘೋಷಿತ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ನೀಡಿರುವ ಮಧ್ಯಂತರ ತಡೆ ಎರಡು ವಾರ ವಿಸ್ತರಣೆಯಾಗಿದೆ.

Advertisement

ತಮ್ಮ ವಿರುದ್ಧದ ಸಿಬಿಐ ತನಿಖೆ ಪ್ರಶ್ನಿಸಿ ಡಿ.ಕೆ. ಶಿವಕುಮಾರ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಈ ವೇಳೆ ಸಿಬಿಐ ಪರ ವಕೀಲ ಪಿ. ಪ್ರಸನ್ನಕುಮಾರ್‌ ವಾದ ಮಂಡಿಸಿ, ಸಮಾನ ಸ್ವತ್ತು ಹಂಚಿಕೆ ಸಾಧಿಸುವ ಮೂಲಕ ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವುದು ಸಂವಿಧಾನದ ಆಶಯವಾಗಿದೆ. ಆದರೆ, ಈ ಉದ್ದೇಶವಿನ್ನೂ ದೂರದ ಕನಸಾಗಿ ಉಳಿದಿದ್ದು, ನಿಸ್ಸಂದೇಹವಾಗಿ ಭ್ರಷ್ಟಾಚಾರವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ, ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ನಡೆಸುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಎರಡು ದಿನಗಳ ಹಿಂದಷ್ಟೇ ತೀರ್ಪು ನೀಡಿದೆ. ಆದ್ದರಿಂದ ಡಿ.ಕೆ. ಶಿವಕುಮಾರ್‌ ವಿರುದ್ಧದ ತನಿಖೆಗೆ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಸಿಬಿಐ ವಾದಕ್ಕೆ ಆಕ್ಷೇಪಣೆ ಸಲ್ಲಿಸಲು ಡಿ.ಕೆ. ಶಿವಕುಮಾರ್‌ ಪರ ವಕೀಲರು ಕಾಲಾವಕಾಶ ಕೇಳಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿತು.

ಮಗಳಿಗೆ ನೋಟಿಸ್‌ ಕೊಟ್ಟಿಲ್ಲ:
ಅರ್ಜಿದಾರರಾದ ಡಿ.ಕೆ. ಶಿವಕುಮಾರ್‌ ಅವರ ಮಗಳಿಗೂ ನೋಟಿಸ್‌ ನೀಡಲಾಗಿದೆ ಎಂದು ಕೋರ್ಟ್‌ಗೆ ತಪು$³ ಮಾಹಿತಿ ನೀಡಿ ತನಿಖೆಗೆ ತಡೆಯಾಜ್ಞೆ ಪಡೆದುಕೊಳ್ಳಲಾಗಿದೆ. ಆದರೆ, ಅರ್ಜಿದಾರರಿಗಾಗಲೀ ಅವರ ಮಗಳಿಗಾಗಲೀ ಸಿಬಿಐ ಯಾವುದೇ ನೋಟಿಸ್‌ ನೀಡಿಲ್ಲ. ಅರ್ಜಿದಾರರ ಮಗಳು ಓದಿದ್ದ ಶಾಲೆ ಮತ್ತು ಕಾಲೇಜುಗಳಿಗಷ್ಟೇ ನೋಟಿಸ್‌ ನೀಡಲಾಗಿದ್ದು, ಅವರ ಶುಲ್ಕ ಯಾರು ಪಾವತಿಸಿದ್ದಾರೆ, ಎಷ್ಟು ಪಾವತಿಸಿದ್ದಾರೆ ಎಂಬ ಮಾಹಿತಿ ಕೇಳಲಾಗಿದೆ. ಹೀಗಿದ್ದರೂ, ಸುಳ್ಳು ಹೇಳಿ ಕೋರ್ಟ್‌ನಿಂದ ತಡೆಯಾಜ್ಞೆ ಪಡೆದುಕೊಂಡಿದ್ದಾರೆ ಎಂದು ಸಿಬಿಐ ಪರ ವಕೀಲ ಪ್ರಸನ್ನಕುಮಾರ್‌ ದೂರಿದರು.

Advertisement

ವರದಿ ಸಲ್ಲಿಕೆ:
ಇದೇ ವೇಳೆ ನ್ಯಾಯಾಲಯದ ನಿರ್ದೇಶನದಂತೆ ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಿಬಿಐ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಪ್ರಕರಣದಲ್ಲಿ ಏನೆಲ್ಲ ತನಿಖೆ ನಡೆಸಲಾಗಿದೆ ಎಂಬ ಬಗ್ಗೆ ಹಲವು ಮಹತ್ವದ ಮಾಹಿತಿಗಳು ವರದಿಯಲ್ಲಿದೆ. ಅದರ ಆಧಾರದಲ್ಲಿ ತನಿಖೆ ಪೂರ್ಣಗೊಳಿಸಬೇಕಿದೆ. ಆದರೆ, ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ತನಿಖೆಗೆ ಅಡ್ಡಿಯಾಗಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿ ಕಳೆದ ಫೆ.10ರಂದು ನೀಡಿರುವ ಮಧ್ಯಂತರ ಆದೇಶ ತೆರವುಗೊಳಿಸಬೇಕೆಂದು ಕೋರಿದರು. ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿದ್ದ ತನಿಖಾ ಪ್ರಗತಿ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ ಅದನ್ನು ಸಿಬಿಐ ಪರ ವಕೀಲರಿಗೇ ಹಿಂದಿರುಗಿಸಿತು.

Advertisement

Udayavani is now on Telegram. Click here to join our channel and stay updated with the latest news.

Next