ಲಕ್ನೋ: ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಸೋಮವಾರ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್ ಅವರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ.
ಬಿಜೆಪಿ ಸೇರ್ಪಡೆಗೊಂಡು ಮಾತನಾಡಿದ ಅವರು, ರಾಮಮಂದಿರ ವಿಚಾರದಲ್ಲಿ ಪ್ರತಿಪಕ್ಷಗಳು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಸವಾಲೆಸೆದಿದ್ದಾರೆ. ಇದೇ ವೇಳೆ, ಬಾಬರಿ ಮಸೀದಿ ಧ್ವಂಸ ಪ್ರಕರಣದ ಸಂಚು ರೂಪಿಸಿರುವ ಆರೋಪ ಹೊತ್ತಿರುವ ಸಿಂಗ್ ಈಗ ವಿಚಾರಣೆ ಎದುರಿಸಬೇಕಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
2017 ಏ.19ರಂದು ಸುಪ್ರೀಂಕೋರ್ಟ್ ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿತ್ತು. ಆ ಸಂದರ್ಭದಲ್ಲಿ ಕಲ್ಯಾಣ್ ಸಿಂಗ್ ರಾಜಸ್ಥಾನ ರಾಜ್ಯಪಾಲರಾಗಿದ್ದ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಅವರ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಅವರ ವಿರುದ್ಧ ಕ್ರಮ ಕಾನೂನು ಕ್ರಮ ಸಾಧ್ಯವಾಗುತ್ತದೆ. ಸಂವಿಧಾನದ 361ನೇ ವಿಧಿಯ ಅನ್ವಯ ರಾಜ್ಯಪಾಲರು, ರಾಷ್ಟ್ರಪತಿ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಿಲ್ಲ.
ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣದ ಪ್ರಕಾರ ಕಲ್ಯಾಣ್ ಸಿಂಗ್ ಉ.ಪ್ರ. ಸಿಎಂ ಆಗಿದ್ದಾಗ 1992ರಲ್ಲಿ ವಿವಾದಿತ ಕಟ್ಟಡ ಧ್ವಂಸಗೊಳಿಸದಂತೆ ಎಚ್ಚರಿಕೆ ವಹಿಸುವುದಾಗಿ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಗೆ ವಾಗ್ಧಾನ ಮಾಡಿ, ಅದರಂತೆ ನಡೆದುಕೊಳ್ಳಲಿಲ್ಲ. 1993ರಲ್ಲಿ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಹೀಗಾಗಿ, ಇದೇ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಜತೆಯಲ್ಲಿ ಕಲ್ಯಾಣ್ ಸಿಂಗ್ ಕೂಡ ವಿಚಾರಣೆ ಎದುರಿಸಬೇಕಾಗಿದೆ.