ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿನ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ಸೋಮವಾರ (ಜು.29) ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧದ ಹೆಚ್ಚುವರಿ ಆರೋಪ ಪಟ್ಟಿ(Chargesheet)ಯನ್ನು ರೋಸ್ ಅವೆನ್ಯೂ ಕೋರ್ಟ್ ಗೆ ಸಲ್ಲಿಸಿದೆ.
ದೆಹಲಿಯ ಅಬಕಾರಿ ನೀತಿ ದುರುಪಯೋಗದ ಬಗ್ಗೆ ತೀವ್ರ ವಿಚಾರಣೆ ನಡೆಸಿದ ನಂತರ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆ ನಂತರ ಇದೀಗ ಹೆಚ್ಚುವರಿಯಾಗಿ ಚಾರ್ಜ್ ಶೀಟ್ ಅನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಯೇ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಕೇಜ್ರಿವಾಲ್ ಅವರ ನಿಕಟವರ್ತಿ ವಿಜಯ್ ನಾಯರ್, ಹಲವಾರು ಮದ್ಯ ತಯಾರಕರು ಮತ್ತು ವ್ಯಾಪಾರಿಗಳ ಜೊತೆ ಸಂಪರ್ಕದಲ್ಲಿದ್ದರು ಎಂದು ಸಿಬಿಐ ಹೇಳಿದೆ.
ದೆಹಲಿಯ ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರ ಅಬಕಾರಿ ನೀತಿ ಜಾರಿಗೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸಚಿವ ಸಂಪುಟ ಅನುಮತಿ ನೀಡಿತ್ತು. ಈ ನೀತಿಯ ಜಾರಿ ಮೂಲಕ ರಖಂ ಮದ್ಯ ಮಾರಾಟಗಾರರಿಂದ ಆಮ್ ಆದ್ಮಿ ಪಕ್ಷದ ವರಿಷ್ಠ ಕೇಜ್ರಿವಾಲ್ ಗೆ ದೊಡ್ಡ ಮೊತ್ತದ ಲಾಭಾಂಶ ಸಂದಾಯವಾಗಿರುವುದಾಗಿ ಸಿಬಿಐ ದೂರಿದೆ.
ಈ ಲಿಕ್ಕರ್ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಮುಖ ರೂವಾರಿಯಾಗಿದ್ದಾರೆ. ದೆಹಲಿ ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಕೇಜ್ರಿವಾಲ್ ನಿರ್ದೇಶನದ ಮೇರೆಗೆ ತೆಗೆದುಕೊಳ್ಳಲಾಗಿತ್ತು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ವಿವರಿಸಿದೆ.