ಹೊಸದಿಲ್ಲಿ : ನಕಲಿ ದಾಖಲೆಗಳ ಆಧಾರದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮತ್ತು ಮೀನು ಸಾಕಣೆ ಸಾಲಗಳನ್ನು ನೀಡುವ ಮೂಲಕ ಐಡಿಬಿಐ ಬ್ಯಾಂಕಿಗೆ 445.32 ಕೋಟಿ ರೂ. ವಂಚನೆ ಎಸಗಿದ ಆರೋಪದ ಮೇಲೆ ಸಿಬಿಐ, ಐಡಿಬಿಐ ಬ್ಯಾಂಕಿನ ಓರ್ವ ಮಾಜಿ ಜನರಲ್ ಮ್ಯಾನೇಜರ್ ಮತ್ತು ಇತರ 30 ಮಂದಿಯ ವಿರುದ್ಧ ಕೇಸು ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
2009ರಿಂದ 2012ರ ವರೆಗಿನ ಅವಧಿಯಲ್ಲಿ ಒಟ್ಟು 21 ಸಮೂಹಗಳಲ್ಲಿ ಒಳಗೊಂಡ 220 ಸಾಲಗಾರರಿಗೆ 192.98 ಕೋಟಿ ರೂ. ಸಾಲವನ್ನು ಮಾಜಿ ಜನರಲ್ ಮ್ಯಾನೇಜರ್ ಬಟ್ಟು ರಾಮ ರಾವ್ ಅವರೊಂದಿಗಿನ ಕ್ರಿಮಿನಲ್ ಸಂಚಿನಲ್ಲಿ ನಕಲಿ ದಾಖಲೆಗಳು ಮತ್ತು ಅತ್ಯಧಿಕ ಮೌಲ್ಯ ನಿಗದಿಸಲ್ಪಟ್ಟ ಹೆಚ್ಚುವರಿ ನಕಲಿ ಭದ್ರತೆಗಳ ಆಧಾರದಲ್ಲಿ ನೀಡಲಾಗಿತ್ತು.
ಮರುಪಾವತಿಯಾಗದ ಈ ಸಾಲ 2017ರ ಸೆ.30ರ ಪ್ರಕಾರ 445.32 ಕೋಟಿ ರೂ.ಗೆ ಬೆಳೆದಿತ್ತು. ಆ ಮೂಲಕ ಅದು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಪರಿಗಣಿತವಾಗಿತ್ತು.
ಸಾಲಗಾರರು ಈ ಬೃಹತ್ ಮೊತ್ತದ ಸಾಲವನ್ನು ನಕಲಿ ದಾಖಲೆಗಳ ಆಧಾರದಲ್ಲಿ ಪಡೆಯುವಲ್ಲಿ ಐಡಿಬಿಐ ಬ್ಯಾಂಕಿನ ಬಶೀರ್‌ಬಾಗ್ ಶಾಖೆಗೆ ನಿಯೋಜಿತರಾಗಿದ್ದ ರಾವ್, ಚೀಫ್ ಜನರಲ್ ಮ್ಯಾನೇಜರ್ (ನಿವೃತ್ತ) ಆರ್ ದಾಮೋದರನ್ (ದಕ್ಷಿಣ ಚೆನ್ನೈ) ಮತ್ತು ಬ್ಯಾಂಕಿನ ಮೌಲ್ಯ ವಿಶ್ಲೇಷಕ ಮಂಡಳಿಯ ಸದಸ್ಯರು ಶಾಮೀಲಾಗಿ ಕ್ರಿಮಿನಲ್ ಸಂಚು ನಡೆಸಿದ್ದರು ಎಂದು ಸಿಬಿಐ ಹೇಳಿದೆ.
ಸಾಲದ ಹಣವನ್ನು ಸಾಲಗಾರರು ನಿರ್ದಿಷ್ಟ ಉದ್ದೇಶಗಳಿಗೆ ಬಳಸದೆ ದುರುಪಯೋಗ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.