ಮಂಗಳೂರು: ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಉಂಟಾಗಿದೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ಮೂಲಕ ದಾಳಿ ಮಾಡಿಸಿದೆ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಬಿಐ ದಾಳಿ ಮೂಲಕ ಡಿಕೆಶಿ ಅವರ ಮನೋಸ್ಥೈರ್ಯವನ್ನು ಕುಗ್ಗಿಸುವುದು ಬಿಜೆಪಿಯ ಕುತಂತ್ರ. ಆದರೆ ಇದು ಸಾಧ್ಯವಿಲ್ಲ. ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿಯವರ ಜತೆಗಿರುತ್ತಾರೆ. ಕೇಂದ್ರ ಮತ್ತು ರಾಜ್ಯದ ಸರಕಾರಗಳು ಯಾವುದೇ ಜನಪರ ಕೆಲಸಗಳನ್ನು ಮಾಡುತ್ತಿಲ್ಲ. ಬದಲಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಆರೋಪಿಸಿದರು.
ಡಿಕೆಶಿ ವಿರುದ್ಧ ಇರುವ ಹಳೆಯ ಎಫ್ಐಆರ್ ಅನ್ನು ಮುಂದಿಟ್ಟುಕೊಂಡು ದಾಳಿ ನಡೆಸಲಾಗುತ್ತಿದೆ. ಡಿಕೆಶಿಯವರು ಈಗಾಗಲೇ ಐಟಿ ಮತ್ತು ಇಡಿ ತನಿಖೆಗಳಿಗೆ ಸಹಕಾರ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಎಸಗಿದವರ ಪರವಾಗಿ ಅಲ್ಲಿನ ಬಿಜೆಪಿ ಮುಖಂಡರು ನಿಂತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ವಿಚಾರದಲ್ಲಿ ಮೌನವಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬಿಕರ ವಿರುದ್ಧ ಲಂಚದ ಆರೋಪ ಇರುವ ಬಗ್ಗೆ ಮತ್ತು ಕೋವಿಡ್ ನಿಯಂತ್ರಣಕ್ಕಾಗಿ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆಗೆ ಸದನದಲ್ಲಿ ಒತ್ತಾಯಿಸಿದರೂ ತನಿಖೆ ನಡೆಸುತ್ತಿಲ್ಲ ಎಂದು ಖಾದರ್ ಹೇಳಿದರು.
“ಇತರರ ಮೇಲೂ ದಾಳಿ ನಡೆಸಲಿ’
ಮಾಜಿ ಮುಖ್ಯಸಚೇತಕ ಐವನ್ ಡಿ’ಸೋಜಾ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಬೆಳವಣಿಗೆಯನ್ನು ತಡೆಯಲು ಬಿಜೆಪಿ ಪ್ರಾಯೋಜಿತ ಸಿಬಿಐ ದಾಳಿ ನಡೆಯುತ್ತಿದೆ. ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಇರುವ ಬಿಜೆಪಿಯವರು ಹಾಗೂ ಇತರರ ಮೇಲೂ ಇದೇ ರೀತಿ ದಾಳಿ ನಡೆಸಲಿ. ಉತ್ತರ ಪ್ರದೇಶದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣದ ಬಗ್ಗೆ ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿಯೂ ಈ ದಾಳಿ ನಡೆಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಪೊರೇಟರ್ ನವೀನ್ ಡಿ’ಸೋಜಾ, ಪಕ್ಷದ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ, ದಿನಕರ ಶೆಟ್ಟಿ ಉಪಸ್ಥಿತರಿದ್ದರು.