ಸೋಮವಾರಪೇಟೆ: ಕೂಡು ಕುಟುಂಬಕ್ಕೆ ಮತ್ತೂಂದು ಹೆಸರು ಎನ್ನಬಹುದಾದ ಇಲ್ಲಿನ ಚಾವಡಿಮನೆ ಕುಟುಂಬದ ಸದಸ್ಯರು ಉನ್ನತ ಶಿಕ್ಷಣ ಪಡೆದು, ಉನ್ನತ ಸ್ಥಾನ ಅಲಂಕರಿಸುವುದರೊಂದಿಗೆ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಪುಷ್ಪಗಿರಿ ಕೃಷಿ ಒಕ್ಕೂಟದ ಅಧ್ಯಕ್ಷ ಎಂ.ಬಿ. ರಾಜಪ್ಪ ಬಣ್ಣಿಸಿದರು.
ಸ್ಥಳೀಯ ಸಫಾಲಿ ಸಭಾಂಗಣದಲ್ಲಿ ತೋಳೂರುಶೆಟ್ಟಳ್ಳಿಯ ಪ್ರತಿಷ್ಠಿತ ಒಕ್ಕಲಿಗರ ಕುಟುಂಬಗಳಲ್ಲೊಂದಾದ ಚಾವಡಿಮನೆ ಕುಟುಂಬದ ವತಿಯಿಂದ ಕುಟುಂಬದ ಸದಸ್ಯ ಟಿ.ಕೆ. ಮಾಚಯ್ಯ ನವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಆಯೋ ಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು, ಮಾತನಾಡಿದರು.ಸುಮಾರು ಆರು ದಶಕಗಳ ಹಿಂದೆ ಕುಗ್ರಾಮವಾಗಿದ್ದ ತೋಳೂರು ಶೆಟ್ಟಳ್ಳಿಯಲ್ಲಿ ನೆಲೆಸಿದ್ದ ಅಲ್ಪ ಪ್ರಮಾಣದ ವಿದ್ಯಾಭ್ಯಾಸ ಪಡೆದಿದ್ದ ಸಿ.ಎಸ್. ಕಾಳಪ್ಪ ಹಾಗೂ ಚಿನ್ನಮ್ಮ ದಂಪತಿಗಳಿಗೆ ಏಳು ಮಂದಿ ಪುತ್ರರೂ ಹಾಗೂ ಈರ್ವರು ಪುತ್ರಿಯರು. ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದಿದ್ದರೂ ತಮ್ಮ 9 ಮಂದಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸುಸಂಸ್ಕೃತ ಜೀವನವನ್ನು ಕಲಿಸಿದ ಪರಿಣಾಮವಾಗಿ ಇಂದು ಅವರುಗಳು ಸೇವೆಯಲ್ಲೂ ತಮ್ಮ ಛಾಪನ್ನು ಮೂಡಿಸಿ, ಐಕ್ಯಮತ್ಯದ ಕುಟುಂಬವಾಗಿ ಹೊರಹೊಮ್ಮಿದೆ ಎಂದರು.
ಕುಟುಂಬದ ಕಿರಿಯ ಸದಸ್ಯೆ 10ನೇ ತರಗತಿ ವಿದ್ಯಾರ್ಥಿನಿ ಕೃಪಾ ರವಿಕುಮಾರ್ ರಚಿಸಿದ 20 ಕವನಗಳನ್ನೊಳಗೊಂಡ “ಹೊಂಗನಸು’ ಎಂಬ ಕವನ ಸಂಕಲನದ ಪುಸ್ತಕವನ್ನು ಅನಾವರಣ ಮಾಡಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ನಾಣ್ಣುಡಿಯಂತೆ ಕೃಪಾ ರಚಿಸಿರುವ ಕವನ ಅತ್ಯದ್ಭುತವಾಗಿದೆ. ತನ್ನ ಹುಟ್ಟೂರಿನಿಂದ ಹಿಡಿದು ದಿನನಿತ್ಯದ ಜೀವನದ ನೋವು ನಲಿವು ಸೇರಿದಂತೆ ಪ್ರಕೃತಿ, ಭೂಮಿ ಎಲ್ಲವನ್ನು ಕ್ರೋಡೀಕರಿಸಿ ಪುಸ್ತಕ ರೂಪದಲ್ಲಿ ಹೊರ ತರುವ ಮೂಲಕ ಚಾವಡಿ ಕುಟುಂಬದ ಗೌರವವನ್ನು ಹೆಚ್ಚಿಸಿದ್ದಾಳೆ. ಆಕೆಯ ಹೆಸರು ವಿಶ್ವವ್ಯಾಪಿ ಪಸರಿಸುವಂತಾಗಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಟುಂಬದ ಹಿರಿಯ ಸದಸ್ಯ ಟಿ.ಕೆ. ಸುಬ್ಬಯ್ಯ ಮಾತನಾಡಿ, ನಮ್ಮ ಸಹೋದರರಲ್ಲಿ ಸೌಮ್ಯ ನಡವಳಿಕೆಯಿಂದ ಕೂಡಿದವನು ಮಾಚಯ್ಯ. 1980ರಲ್ಲಿ ವಾಣಿಜ್ಯ ಪದವಿಯನ್ನು ಮುಗಿಸುತ್ತಿದ್ದಂತೆ ಸೋಮವಾರಪೇಟೆ ಕಂದಾಯ ಇಲಾಖೆಯಲ್ಲಿ, ನಂತರ ಚೌಡ್ಲು ವಿಎಸ್‌ಎಸ್‌ಎನ್, ಗೌಡಳ್ಳಿ ಸಹಕಾರ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ, ಅನಂತರದಲ್ಲಿ ಕ.ರಾ. ನಿರ್ಮಾಣ ನಿಗಮದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ, ಇದೀಗ ನಿವೃತ್ತಿಯಾಗಿದ್ದಾನೆ. ಕಚೇರಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಹೋದರ ಇಂದಿನಿಂದ ಕೃಷಿಕರಾಗಿ ಸೇವೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಚಿಕ್ಕಮಗಳೂರು ಕೊಪ್ಪದ ಪಿಕಾರ್ಡ್ ಬ್ಯಾಂಕಿನ ಕಾರ್ಯದರ್ಶಿ ಎಂ.ಆರ್. ಕಿರಣ್ ಹೆಗ್ಗಡೆ, ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಸ್. ರಾಮಕೃಷ್ಣ, ನಗರಳ್ಳಿ ಸುಗ್ಗಿ ಸಮಿತಿ ಅಧ್ಯಕ್ಷ ಕೆ.ಟಿ. ಜೋಯಪ್ಪ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಯೋಗೇಶ್, ಶಿಕ್ಷಕರ ಸಂಘದ ಪದಾಧಿಕಾರಿ ಟಿ.ಕೆ. ಶಿವಕುಮಾರ್, ಛಾವಡಿಮನೆ ವಸಂತ್‌ಕುಮಾರ್ ಮಾತನಾಡಿದರು.ಚಾವಡಿ ಕುಟುಂಬದ ವತಿಯಿಂದ ಟಿ.ಕೆ. ಮಾಚಯ್ಯ-ಇಂದಿರಾ ದಂಪತಿ ಯನ್ನು ಈ ಸಮಾರಂಭದಲ್ಲಿ ಸಮ್ಮಾನಿಸಲಾಯಿತು.