ಚೆನ್ನೈ : ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ಸ್ಥಾಪಿಸುವಲ್ಲಿ ಕೇಂದ್ರ ಸರಕಾರದ ವೈಫಲ್ಯವನ್ನು ಪ್ರತಿಭಟಿಸಿ ಡಿಎಂಕೆ ನೀಡಿರುವ ಕರೆಯನ್ವಯ ಇಂದು ತಮಿಳು ನಾಡಿನಲ್ಲಿ ಇಂದು ಬಂದ್ ಮುಷ್ಕರ ನಡೆಯುತ್ತಿದ್ದು, ರಸ್ತೆ ಮತ್ತು ರೈಲು ಸಂಚಾರ ತೀವ್ರವಾಗಿ ಬಾಧಿತವಾಗಿದೆ.
ಚೆನ್ನೈ ಮಹಾನಗರದ ಅಣ್ಣಾ ಸಲೈ, ಕೋಡಂಬಾಕ್ಕಂ ಮತ್ತು ನುಂಗಂಬಾಕ್ಕಂ ಪ್ರದೇಶಗಳಲ್ಲಿ ಬಂದ್ ಬಿಸಿ ಜೋರಾಗಿ ಅನುಭವಕ್ಕೆ ಬಂದಿದ್ದು ದಿನ ನಿತ್ಯದ ಜನಜೀವನ ತೀವ್ರವಾಗಿ ಅಸ್ತವ್ಯಸ್ತವಾಗಿದೆ.
ಎಎನ್‌ಐ ವರದಿ ಪ್ರಕಾರ ಕೆಲವು ಕಾರ್ಮಿಕ ಸಂಘಟನೆಗಳು ಬಂದ್ ಮುಷ್ಕರದಲ್ಲಿ ಭಾಗಿಯಾಗಿದ್ದು ಇಂದು ಬೆಳಗ್ಗೆ ವಾಹನ ಸಂಚಾರ ತೀವ್ರ ಅಡಚಣೆಗೆ ಗುರಿಯಾಯಿತು. ಇದೇ ರೀತಿಯ ಸನ್ನಿವೇಶ ರಾಜ್ಯದ ವಿವಿಧೆಡೆ ಕಂಡುಬಂದಿದ್ದು ಅವುಗಳಲ್ಲಿ ಮುಖ್ಯವಾಗಿ ಹೊಸೂರು ಮತ್ತು ತಿರುಚ್ಚಿಯಲ್ಲಿ ಪ್ರತಿಭಟನೆಯ ಪರಾಕಾಷ್ಠೆ ಕಂಡುಬಂತು.
ಕೆಎಸ್‌ಆರ್‌ಟಿಸಿ ಅಂತಾರಾಜ್ಯ ಬಸ್ ಸೇವೆ ಕೂಡ ತೀವ್ರವಾಗಿ ಬಾಧಿತವಾಯಿತು. ಪ್ರತಿಭಟನೆಯ ಪರಿಣಾಮವಾಗಿ ತಮಿಳು ನಾಡಿಗೆ ಹೋಗುವ ಮತ್ತು ಅಲ್ಲಿಂದ ವಿವಿಧೆಡೆಗಳಿಗೆ ಸಂಚರಿಸುವ ರೈಲುಗಳು ವಿಳಂಬಿತವಾದವು. ರಾಜ್ಯಾದ್ಯಂತ ಅನೇಕ ಅಂಗಡಿ, ಮುಂಗಟ್ಟುಗಳು ಇಂದು ಮುಚ್ಚಿದ್ದವು.
ಆಳುವ ಎಐಎಡಿಎಂಕೆ ಇದೇ ವಿಷಯಕ್ಕೆ ಸಂಬಂಧಪಟ್ಟು ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ ಕೆಲವೇ ದಿನಗಳ ತರುವಾಯ ಡಿಎಂಕೆ ಇಂದಿನ ಬಂದ್ ಮುಷ್ಕರಕ್ಕೆ ಕರೆ ನೀಡಿದೆ.