Advertisement

Cauvery Water Dispute: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಂಸದರ ಸಭೆ ಆರಂಭ

10:54 AM Sep 20, 2023 | Team Udayavani |

ಬೆಂಗಳೂರು: ಕಾವೇರಿ ನದಿ ನೀರು ವಿವಾದ ಸಂಬಂಧ ದೆಹಲಿಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರು ಹಾಗೂ ಸರ್ವಪಕ್ಷ ಸಂಸದರ ಸಭೆ ಆರಂಭವಾಗಿದೆ.

Advertisement

ಜಲ ಸಂಪನ್ಮೂಲ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್ ಸೇರಿದಂತೆ ಸುಪ್ರೀಂ ಕೋರ್ಟ್ ವಕೀಲರು, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು, ರಾಜ್ಯದ ಹಿತ ಕಾಪಾಡುವ ದೃಷ್ಟಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ನಿರ್ಧಾರಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕಷ್ಟ ಸೂತ್ರ ಸಿದ್ದವಾಗದೇ ಇರುವುದರಿಂದ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ. ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ, ಗಟ್ಟಿಯಾಗಿ ನಿಲ್ಲಬೇಕು ಎಂದ ಅವರು .

ನಮಗೆ ಈಗ ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ ಎಂದರು.

Advertisement

ಸುಪ್ರೀಂಕೋರ್ಟ್ ಆದೇಶದ ಪ್ರಕಾರ 108.4 ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಆದರೆ ನಾವು ಬಿಟ್ಟಿರುವುದು 39.8 ಟಿಎಂಸಿ ನೀರು ಮಾತ್ರ. ಏಕೆಂದರೆ ನಮ್ಮಲ್ಲಿ ನೀರೇ ಇಲ್ಲ. ಆದ್ದರಿಂದ ನಮಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.

ಇಂಥಾ ಪರಿಸ್ಥಿತಿ ಎದುರಾದಾಗ ಸಮರ್ಥವಾಗಿ ಜನರ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ. ಆದ್ದರಿಂದ ನಮ್ಮ ನೀರನ್ನು, ನಮ್ಮ ಜಾಗದಲ್ಲಿ ಬಳಸಿಕೊಳ್ಳಲು, ಸಂಗ್ರಹಿಸಿಕೊಳ್ಳಲು, ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ನಮಗೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಥಾ ಪರಿಸ್ಥಿತಿಗೆ ಮೇಕೆದಾಟು ಪರಿಹಾರ ಆಗುತ್ತದೆ ಎಂದರು.

ರಾಜ್ಯದ ಹಿತಾಸಕ್ತಿ ಬಂದಾಗ ರಾಜಕಾರಣ ಮುಂದಕ್ಕೆ ಬರಬಾರದು. ಎಲ್ಲ ಸಂಸದರು, ರಾಜ್ಯ ಸಭಾ ಸದಸ್ಯರು ಒಟ್ಟಾಗಿ ನಿಂತು ರಾಜ್ಯದ ಪರವಾಗಿ ದೆಹಲಿಯಲ್ಲಿ, ಕೇಂದ್ರ ಸಚಿವರ ಎದುರು ಬೇಡಿಕೆ ಮಂಡಿಸಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾದ ಡಿ.ಕೆ.ಶಿವಕುಮಾರ್ ಹೇಳಿದರು.

ನಮಗೆ ಕೇಂದ್ರದಿಂದಲೂ ಸಕಾರಾತ್ಮಕ ನೆರವು ದೊರಕುವ ನಿಟ್ಟಿನಲ್ಲಿ ಬೇಡಿಕೆ, ಒತ್ತಡಗಳನ್ನು ಮಂಡಿಸಬೇಕು. ನಮಗೆ ಸಮಸ್ಯೆ ಬಗೆಹರಿದು ರಾಜ್ಯದ ಹಿತಾಸಕ್ತಿ ಕಾಪಾಡಿಕೊಳ್ಳುವುದಷ್ಟೆ ಮುಖ್ಯ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ವಿನಂತಿಸಿದರು.

ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು, ಕಾವೇರಿ ವ್ಯಾಪ್ತಿಯ ಶಾಸಕರು, ಸಚಿವರು, ಕಾನೂನು ತಂಡ ಉಪಸ್ಥಿತರಿದ್ದಾರೆ.

ಇದನ್ನೂ ಓದಿ: Chaitra kundapura: ಕೋಟಿ, ಕೋಟಿ ಡೀಲ್-‌ ಚೈತ್ರಾಳಿಂದ 17 ಜನ ಮೋಸ ಹೋಗಿದ್ದಾರೆ: ಕಾಂಗ್ರೆಸ್

Advertisement

Udayavani is now on Telegram. Click here to join our channel and stay updated with the latest news.

Next