Advertisement

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

02:34 PM May 06, 2024 | Team Udayavani |

ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಥಿಯೇಟರ್‌ ನತ್ತ ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸ್ಟಾರ್‌ ನಟರ ಸಿನಿಮಾಗಳನ್ನು ನೋಡಲು ಒಂದಷ್ಟು ಜನ ಬರುತ್ತಾರೆ ವಿನಃ ಹೊಸಬರ ಸಿನಿಮಾಗಳು ಬಂದರೆ ಅಲ್ಲಿ ಬೆರಳಣಿಕೆಯಷ್ಟು ಜನ ಮಾತ್ರ ಸಿನಿಮಾ ನೋಡಲು ಬರುತ್ತಾರೆ. ಆ ಕಾರಣದಿಂದ ಬೆಂಗಳೂರಿನ ಅನೇಕ ಥಿಯೇಟರ್‌ ಬಾಗಿಲು ಮುಚ್ಚಿವೆ.

Advertisement

ಇದೀಗ ಈ ಸಾಲಿಗೆ ಮತ್ತೊಂದು ಥಿಯೇಟರ್‌ ಸೇರಿದೆ. ಬೆಂಗಳೂರಿನ ಸ್ಯಾಂಕಿ ರಸ್ತೆಯ, ಪ್ಯಾಲೇಸ್ ಗುಟ್ಟಳ್ಳಿಯಲ್ಲಿರುವ ‘ಕಾವೇರಿ’ ಚಿತ್ರಮಂದಿರ ಇನ್ಮುಂದೆ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಿದೆ ಎಂದು ವರದಿಯಾಗಿದೆ.

ʼಕಾವೇರಿʼ ಚಿತ್ರಮಂದಿರಕ್ಕೆ ಕಳೆದ ಜನವರಿ 11ಕ್ಕೆ ಭರ್ತಿ 50 ವರ್ಷ ತುಂಬಿತ್ತು. ಈ ಸಂಭ್ರಮದಲ್ಲಿ ಗೋಲ್ಡನ್ ಜ್ಯುಬಿಲಿ ಆಚರಣೆಯನ್ನು ಮಾಡಲಾಗಿತ್ತು.

ಹಳೆಯ ಥಿಯೇಟರ್‌ ಗಳಲ್ಲಿ ಒಂದು:  ಕಾವೇರಿ ಥಿಯೇಟರ್‌ ಬೆಂಗಳೂರಿನ ಹಳೆಯ ಥಿಯೇಟರ್‌ ಗಳಲ್ಲಿ ಒಂದು. 1974, ಜನವರಿ 11ರಂದು ಈ ಚಿತ್ರಮಂದಿರ ಆರಂಭಗೊಂಡ ಈ ಥಿಯೇಟರ್‌ನಲ್ಲಿ ಡಾ. ರಾಜ್‌ ಕುಮಾರ್‌ ಅವರ ‘ಬಂಗಾರದ ಪಂಜರ’ ಮೊದಲು ಪ್ರದರ್ಶನಗೊಂಡ ಸಿನಿಮಾವಾಗಿತ್ತು ಎನ್ನಲಾಗಿದೆ.

ಸಿಂಗಲ್‌ ಸ್ಕ್ರೀನ್‌ ಆಗಿದ್ದರೂ, ವಿಶಾಲವಾದ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಹೊಂದಿರುವ ಈ ಥಿಯೇಟರ್‌ ನಲ್ಲಿ 1300ರಷ್ಟು ಸೀಟುಗಳಿವೆ.

Advertisement

ರಾಜ್‌ ಕುಮಾರ್‌, ಪುನೀತ್‌ ರಾಜ್‌ ಕುಮಾರ್‌, ಕಮಲ್‌ ಹಾಸನ್‌ ಅವರ ಸಿನಿಮಾಗಳು ಸೇರಿದಂತೆ ಅನೇಕ ಸಿನಿಮಾಗಳು ಇಲ್ಲಿ ಶತದಿನ ಪ್ರದರ್ಶನ ಕಂಡಿವೆ. ಕನ್ನಡ, ತಮಿಳು, ಹಿಂದೆ, ಮಲಯಾಳಂ ಜೊತೆಗೆ ಹಾಲಿವುಡ್ ನ ಅನೇಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.

ಬಂದ್‌ ಯಾಕೆ? : ಇತ್ತೀಚೆಗೆ ಜನ ಥಿಯೇಟರ್‌ ಗೆ ಬರುತ್ತಿಲ್ಲ. ಅಲ್ಪಸ್ವಲ್ಪ ಜನ ಬಂದು ಸಿನಿಮಾವನ್ನು ನೋಡುತ್ತಿದ್ದಾರೆ. ಇದರಿಂದ ಇಷ್ಟು ದೊಡ್ಡ ಕಟ್ಟಡವನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಥಿಯೇಟರ್‌ ನ್ನು ಮುಚ್ಚಿ, ಈ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ ಎಂದು ವರದಿ ಆಗಿದೆ.

ಸಾಲು ಸಾಲು ಥಿಯೇಟರ್‌‌ ಗಳು ಬಂದ್..  ʼಕಾವೇರಿʼ ಥಿಯೇಟರ್‌ ನಲ್ಲಿ ಇತ್ತೀಚೆಗೆ ಹಿಂದಿ, ತೆಲುಗು ಹಾಗೂ ತಮಿಳು ಸಿನಿಮಾಗಳನ್ನೇ ಹೆಚ್ಚಾಗಿ ಪ್ರದರ್ಶನ ಮಾಡಲಾಗುತ್ತಿತ್ತು. ಹಿಂದಿಯ ‘ಬಡೇ ಮಿಯ್ಯಾ ಚೋಟೆ ಮಿಯ್ಯಾ’, ‘ಮೈದಾನ್’ ಈ ಎರಡು ಸಿನಿಮಾಗಳನ್ನು ಪ್ರದರ್ಶನ ಮಾಡಿದ ಬಳಿಕ ಚಿತ್ರಮಂದಿರವನ್ನು ಮುಚ್ಚಲಾಗಿದೆ.

ಬೆಂಗಳೂರಿನಲ್ಲಿ ಸಿನಿಮಾ ಥಿಯೇಟರ್‌ ಬಂದ್‌ ಆಗಿರುವುದು ಇದೇ ಮೊದಲಲ್ಲ. ಪ್ರೇಕ್ಷಕರು ಓಟಿಟಿಯತ್ತ ಹಾಗೂ ಮಲ್ಟಿಫ್ಲೆಕ್ಸ್‌ ನತ್ತ ಮುಖ ಮಾಡಿರುವುದರಿಂದ, ಜನಪ್ರಿಯ ಚಿತ್ರಮಂದಿರಗಳಾದ ಕಪಾಲಿ, ಸಾಗರ್, ಕಲ್ಪನಾ, ಮೆಜೆಸ್ಟಿಕ್, ಪಲ್ಲವಿ ಥಿಯೇಟರ್‌ ಗಳು ಈ ಹಿಂದೆಯೇ ಬಾಗಿಲು ಮುಚ್ಚಿವೆ.

 

Advertisement

Udayavani is now on Telegram. Click here to join our channel and stay updated with the latest news.

Next