Advertisement
ನಗರದ ಪ್ರತಿಷ್ಠಿತ ಬಡಾವಣೆಗಳನ್ನು ಒಳಗೊಂಡಿರುವ ಪಾಲಿಕೆ ದಕ್ಷಿಣ ವಲಯಕ್ಕೆ ಜಲಮಂಡಳಿಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಆದರೆ, ಮಂಡಳಿಯ ಕೇಂದ್ರ ಕಚೇರಿಗೆ ಕೆಲವೇ ಕಿ.ಮೀ. ಅಂತರದಲ್ಲಿರುವ ಹಲವು ಭಾಗಗಳಿಗೆ ಕಲುಷಿತ ನೀರು ಹರಿಯುತ್ತಿದೆ. ದುರ್ವಾಸನೆಯುಕ್ತ ನೀರು ಬಳಸಲಾಗದೆ ಜನರು ಅನಿವಾರ್ಯವಾಗಿ ಕ್ಯಾನ್ ನೀರಿನ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ದುರ್ವಾಸನೆ: ಜಲಮಂಡಳಿಗೆ ಕೂಗಳತೆ ದೂರದಲ್ಲಿರುವ ಸುಧಾಮನಗರ ವಾರ್ಡ್‌ನ ಕುಂಬಾರಗುಂಡಿ ಬಡಾವಣೆ, ಹಮೀದ್ ಖಾನ್ ಗಾರ್ಡನ್, ರಾಜಗೋಪಾಲ ಗಾರ್ಡನ್, ರಾಜಾರಾಮ್ ಮೋಹನ್‌ರಾಯ್ ಬಡಾವಣೆ, ದೊಡ್ಡಮಾವಳ್ಳಿ, ಕಲಾಸಿಪಾಳ್ಯ ಸುತ್ತಮುತ್ತಲಿನ ಪ್ರಮುಖ ಬಡಾವಣೆಗಳು, ಕೊಳೆಗೇರಿಗಳು ಹಾಗೂ ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌ನ ಹಲವು ಭಾಗಗಳಲ್ಲಿ ಕಾವೇರಿ ನೀರು ಕಲುಷಿತಗೊಂಡಿದ್ದು, ದುರ್ವಾಸನೆ ಬೀರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಮರ್ಪಕ ನೀರು ಪೂರೈಕೆ: ಕೇಂದ್ರ ಭಾಗದ ದಕ್ಷಿಣ ವಲಯದ ಬಹುತೇಕ ವಾರ್ಡ್‌ಗಳಿಗೆ ಕಾವೇರಿ ನೀರು ಪೂರೈಕೆ ವ್ಯವಸ್ಥೆ ಇದೆ. ಜಲಮಂಡಳಿಯಿಂದ ದಿನ ಬಿಟ್ಟು ದಿನ ನೀರು ಹರಿಸುವುದರಿಂದ ವಲಯದಲ್ಲಿ ಹೆಚ್ಚಿನ ನೀರಿನ ಸಮಸ್ಯೆಯಿಲ್ಲ. ಕಾವೇರಿ ಸಂಪರ್ಕ ಹೊಂದಿಲ್ಲದ ಪ್ರದೇಶಗಳು ಹಾಗೂ ಕೆಲ ಕೊಳಗೇರಿ ಹೊರತುಪಡಿಸಿದರೆ ಒಟ್ಟಾರೆಯಾಗಿ ವಲಯದಲ್ಲಿ ನೀರಿನ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಳಕೆಗೆ ಯೋಗ್ಯವಲ್ಲ: ಜಲಮಂಡಳಿಯಿಂದ ಭರಪೂರವಾಗಿ ನೀರು ಹರಿಸಿದರೂ, ದಕ್ಷಿಣ ಭಾಗದ ಜನರು ಮಾತ್ರ ಜಲಮಂಡಳಿಯಿಂದ ಪೂರೈಸಲಾಗುವ ನೀರನ್ನು ಕುಡಿಯಲು ಬಳಸುವುದಿಲ್ಲ. ಬದಲಾಗಿ ಶುದ್ಧೀಕರಿಸಿದ ಕ್ಯಾನ್ ನೀರಿಗೆ ಆದ್ಯತೆ ನೀಡುತ್ತಿದ್ದು, ಕಾವೇರಿ ನೀರನ್ನು ಗೃಹ ಬಳಕೆಗೆ ಬಳಸುತ್ತಿರುವುದು ಕಂಡುಬಂದಿದೆ.
ಮೊದಲ ಎರಡು ಮೂರು ಗಂಟೆ ದುರ್ವಾಸನೆಯಿಂದ ಕೂಡಿದ ಕಲುಷಿತ ನೀರು ಬರುತ್ತದೆ. ನಂತರದಲ್ಲಿ ಶುದ್ಧ ನೀರು ಬರುತ್ತದೆ. ಒಳಚರಂಡಿ ಮ್ಯಾನ್‌ಹೋಲ್ ಪಕ್ಕದಲ್ಲಿಯೇ ನೀರಿನ ಪೈಪ್‌ಲೈನ್ ಹಾಕಿರುವುದು ಸಮಸ್ಯೆಗೆ ಕಾರಣ.-ಪ್ರಶಾಂತ್, ರಾಜಗೋಪಾಲ ಗಾರ್ಡನ್ ನಿವಾಸಿ ಜಲಮಂಡಳಿಯಿಂದ ಹರಿಸಲಾಗುವ ನೀರಿನಲ್ಲಿ ಕೆಲವೊಮ್ಮೆ ಮೋರಿ ನೀರು ಮಿಶ್ರಣವಾಗಿರುತ್ತದೆ. ಜತೆಗೆ ಕೆಲವೊಮ್ಮೆ ನೀರು ತುಂಬಾ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೀಗಾಗಿ ಕುಡಿಯಲು ಆ ನೀರನ್ನು ಬಳಸುವುದಿಲ್ಲ.
-ನೀಲಾವತಿ, ಕುಂಬಾರಗುಂಡಿ ಬಡಾವಣೆ ನೀರಿನ ಪೈಪುಗಳನ್ನು ಚರಂಡಿ ಪಕ್ಕದಲ್ಲಿ ಅಳವಡಿಸಿರುವುದರಿಂದ ನೀರು ದುರ್ವಾಸನೆ ಕೂಡಿರುತ್ತದೆ. ಈ ಕುರಿತು ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ.
-ಆನಂದಿ, ಸುಧಾಮನಗರ * ವೆಂ.ಸುನೀಲ್‌ಕುಮಾರ್