Advertisement

Cauvery: “ಮೇಲ್ಮನವಿ” ಹೆಜ್ಜೆ- ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನ

10:49 PM Sep 13, 2023 | Team Udayavani |

ಬೆಂಗಳೂರು: ಕಾವೇರಿ ವಿಚಾರಕ್ಕೆ ಸಂಬಂಧಪಟ್ಟಂತೆ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿದ್ದು, ಕಾನೂನು ತಜ್ಞರ ಸಲಹೆ ಪಡೆದ ಬಳಿಕವೇ ಮುಂದಿನ ನಡೆ ಏನೆಂಬುದನ್ನು ನಿರ್ಧರಿಸಲಿದೆ. ಈ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್‌ ಬುಧವಾರ ಸಂಜೆ ದಿಲ್ಲಿಗೆ ದೌಡಾಯಿಸಿದ್ದು, ಮುಂದಿನ ಕಾನೂನು ಹೋರಾಟದ ರೂಪುರೇಷೆ ಸಂಬಂಧ ತಜ್ಞರ ಜತೆ ಚರ್ಚೆ ನಡೆಸಿದ್ದಾರೆ.

Advertisement

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕಾವೇರಿ “ವಸ್ತುಸ್ಥಿತಿ’ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಲಾಗಿದೆ. ರಾಜ್ಯಕ್ಕೆ ಅಗತ್ಯವಾದ ನೀರಿನ ಲಭ್ಯತೆಯೇ ಇಲ್ಲವಾದ್ದರಿಂದ ನೀರು ಬಿಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಹೀಗಾಗಿ ಕಾವೇರಿ ನಿಯಂತ್ರಣ ಪ್ರಾಧಿಕಾರಕ್ಕೆ ಮತ್ತೆ ಮೇಲ್ಮನವಿ ಸಲ್ಲಿಸುವ ಜತೆಗೆ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.

ಸಭೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್‌, ಸಾಮಾನ್ಯ ವರ್ಷದಲ್ಲಿ  ತಮಿಳುನಾಡಿಗೆ ನೀರು ಬಿಡಲು ನಮ್ಮ ಅಭ್ಯಂತರ ಇಲ್ಲ. ಆದರೆ 125 ವರ್ಷದಲ್ಲಿ ಇದೇ ಮೊದಲ ಬಾರಿಗೆ ಹಿಂದೆಂದು ಕಾಣದಷ್ಟು ನೀರಿನ ಕೊರತೆಯನ್ನು ಕಾವೇರಿ ಜಲಾನಯನ ಪ್ರದೇಶದಲ್ಲಿ ನಾವು ಕಾಣುತ್ತಿದ್ದೇವೆ. ಸಂಕಷ್ಟ ಸೂತ್ರ ಇಲ್ಲದಿರುವುದರಿಂದ ರಾಜ್ಯ ಈಗ ತೊಂದರೆಗೆ ಸಿಲುಕಿದೆ ಎಂದು ಹೇಳಿದರು.

ನಮ್ಮಲ್ಲೇ ನೀರಿಲ್ಲ

ಪ್ರತಿ ವರ್ಷ ಸೆ. 11ರ ವರೆಗೆ ನಾವು 99 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಇದುವರೆಗೂ 37 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಮಗೆ 70 ಟಿಎಂಸಿ ನೀರು ಬೆಳೆ ರಕ್ಷಣೆಗೆ ಬೇಕು. ಕುಡಿಯುವ ನೀರಿಗೆ 33 ಟಿಎಂಸಿ ಹಾಗೂ ಕೈಗಾರಿಕಾ ಬಳಕೆಗೆ 3 ಟಿಎಂಸಿ ಬೇಕು. ಆದರೆ ಕಬಿನಿ, ಕೆಆರ್‌ಎಸ್‌, ಹೇಮಾವತಿ ಹಾಗೂ ಹಾರಂಗಿಯಲ್ಲಿ ಕೇವಲ 53 ಟಿಎಂಸಿ ನೀರು ಮಾತ್ರ ಲಭ್ಯವಿದೆ. ತಮಿಳುನಾಡಿಗೆ ನೀರು ಕೊಡಬಾರದೆಂಬುದು ನಮ್ಮ ಉದ್ದೇಶವಲ್ಲ. ಆದರೆ ನಮ್ಮಲ್ಲೇ ನೀರು ಇಲ್ಲವಾದ್ದರಿಂದ ಹೇಗೆ ಬಿಡಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಸುಪ್ರೀಂಗೆ ವಸ್ತುಸ್ಥಿತಿ ಮನವರಿಕೆ

ನಮ್ಮ ಮುಂದೆ ಎರಡು ದಾರಿ ಇದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮತ್ತೆ ಅರ್ಜಿ ಹಾಕುವುದು ಮೊದಲ ದಾರಿ. ನೀರು ಇಲ್ಲ ನಮ್ಮ ಬಳಿ ಎಂದು ಸುಪ್ರೀಂ ಕೋರ್ಟಿನ ಮೊರೆ ಹೋಗಿ ವಸ್ಥಸ್ಥಿತಿ ಮನವರಿಕೆ ಮಾಡುವುದು ಎರಡನೇ ಆಯ್ಕೆ. ಜಲಸಂಪನ್ಮೂಲ ಸಚಿವರು ದೆಹಲಿಗೆ ತೆರಳಿ ಜಲಶಕ್ತಿ ಸಚಿವರನ್ನು ಭೇಟಿಯಾಗಲಿ¨ªಾರೆ. ಜತೆಗೆ ಕಾನೂನು ತಜ್ಞರ ಜತೆ ಚರ್ಚೆ ನಡೆಸಿ ಮುಂದಿನ ನಡೆಯನ್ನು ನಿರ್ಧರಿಸಲಿದ್ದಾರೆ ಎಂದು ಸಿಎಂ ಹೇಳಿದರು.

ಪ್ರಯೋಜನವಿಲ್ಲ

ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಜತೆ ಮಾತುಕತೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟ ಸಿದ್ದರಾಮಯ್ಯ, ಡಿಎಂಕೆ ಐಎನ್‌ಡಿಐಎ ಮಿತ್ರಕೂಟದ ಭಾಗವಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಸಭೆಯಲ್ಲಿದ್ದವರು

ಡಿಸಿಎಂ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ, ಕಾನೂನು ಸಚಿವ ಎಚ್‌.ಕೆ.ಪಾಟೀಲ್‌, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ಸಂಸದ ಪ್ರತಾಪಸಿಂಹ, ಸುಮಲತಾ, ಪಿ.ಸಿ.ಮೋಹನ್‌,  ಲೆಹರ್‌ ಸಿಂಗ್‌, ಜಿ.ಸಿ.ಚಂದ್ರಶೇಖರ್‌, ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಎಂಎಲ್‌ಸಿ ದಿನೇಶ್‌ ಗೂಳಿಗೌಡ, ಗಾಲಿ ಜನಾರ್ದನ್‌ ರೆಡ್ಡಿ , ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಮೊದಲಾದವರು ಭಾಗವಹಿಸಿದ್ದರು. ಜೆಡಿಎಸ್‌ನವರು ಗೈರು ಹಾಜರಾಗಿದ್ದರು, ಬಿಜೆಪಿಯ ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ತೆರಳಿದ್ದರೆ, ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿದ್ದ ಕಾರಣ ಸಭೆಗೆ ಬಂದಿರಲಿಲ್ಲ.

ಮತ್ತೆ ಪ್ರಧಾನಿಗೆ ಪತ್ರ

ಕಾವೇರಿ ವಿಚಾರದಲ್ಲಿ ಯಾರೂ ಕೂಡಾ ಇದುವರೆಗೆ ರಾಜಕೀಯ ಮಾಡಿಲ್ಲ. ನೆಲ, ಜಲ, ಭಾಷೆಯ ವಿಚಾರ ಬಂದಾಗ ನಾವೆಲ್ಲರೂ ಒಟ್ಟಾಗಿಯೇ ಇರುತ್ತೇವೆ. ಸರ್ವಪಕ್ಷಗಳ ಸಭೆ ಬಗ್ಗೆ ರಾತ್ರಿ ಮಾಹಿತಿ ನೀಡಿದ್ದರಿಂದ ಹಿರಿಯ ನಾಯಕರಿಗೆ ಬರಲು ಸಾಧ್ಯವಾಗಿಲ್ಲ. ಆದಾಗಿಯೂ ಬಿಜೆಪಿ ನಿಯೋಗ ಸಭೆಗೆ ಹಾಜರಾಗಿತ್ತು. ಸಂಸತ್‌ ಕಲಾಪದಲ್ಲೂ ಈ ಬಗ್ಗೆ ಧ್ವನಿ ಎತ್ತುವುದಾಗಿ ಭರವಸೆ ನೀಡಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿಗಳಿಗೆ ಮತ್ತೂಮ್ಮೆ ಪತ್ರ ಬರೆಯಲಾಗುವುದು. ಅಗತ್ಯ ಬಿದ್ದರೆ ದಿಲ್ಲಿಗೆ ತೆರಳಿ ಮಾತುಕತೆ ನಡೆಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next