Advertisement

ಕೃಷ್ಣೆ ನೀರಿಗೆ ಕಾವೇರಿ ಪ್ರಾಧಿಕಾರ ಮಾರ್ಗದರ್ಶನ!

12:30 PM May 13, 2019 | Team Udayavani |

ಬಾಗಲಕೋಟೆ: ಮುಳುಗಡೆ ನಗರಿ ಬಾಗಲಕೋಟೆಯ ಜನತೆಗೆ ಕೃಷ್ಣೆಯ ನೀರು ಕುಡಿಯಲು ಪೂರೈಸಲು ಕಾವೇರಿ ಪ್ರಾಧಿಕಾರದ ಮಾರ್ಗದರ್ಶನ ಪಡೆದರೂ, ಯೋಜನೆ ಮಾತ್ರ ಕಾರ್ಯಗತವಾಗಿಲ್ಲ…

Advertisement

ಹೌದು, 72 ಕೋಟಿ ರೂ. ವೆಚ್ಚದ ಹೆರಕಲ್ ಕುಡಿಯುವ ನೀರು ಪೂರೈಕೆ ಯೋಜನೆ, ಯಶಸ್ವಿಯಾಗಿ ಪೂರ್ಣಗೊಳಿಸಲು, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಕೆಬಿಜೆಎನ್‌ಎಲ್ ಮೂಲಕ, ಕಾವೇರಿ ಅಭಿವೃದ್ಧಿ ಪ್ರಾಧಿಕಾರದ ಸಲಹೆ-ಮಾರ್ಗದರ್ಶನ ಹಾಗೂ ಅಲ್ಲಿನ ಯೋಜನೆಗಳ ಅಧ್ಯಯನ ಮಾಡಿದರೂ, ನಮ್ಮ ಯೋಜನೆ ಪೂರ್ಣಗೊಂಡಿಲ್ಲ. ಅದೂ ದುಂದುವೆಚ್ಚದ ಯೋಜನೆ ಮಾಡಿದೆ ಹೊರತು, ಜನರ ಬಾಯಿಗೆ ಹನಿ ನೀರು ಕೊಡಲು ಮುಂದಾಗಿಲ್ಲ.

ಏನದು ಕಾವೇರಿ ಮಾರ್ಗದರ್ಶನ: ಬೀಳಗಿ ತಾಲೂಕು ಹೆರಕಲ್ದಿಂದ ಗದ್ದನಕೇರಿ ಕ್ರಾಸ್‌ ವರೆಗೆ ಪೈಪ್‌ಲೈನ್‌ ಅಳವಡಿಸಿ, ಬಾಗಲಕೋಟೆಯ ಜನತೆಗೆ ಕುಡಿಯುವ ನೀರು ಕೊಡಲು ರೂಪಿಸಿದ ಈ ಯೋಜನೆಗೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಲವು ಸಮಸ್ಯೆ ಎದುರಾಗಿವೆ. ಹೆರಕಲ್ದಿಂದ ಗದ್ದನಕೇರಿ ಕ್ರಾಸ್‌ವರೆಗೆ ಪೈಪ್‌ ಅಳವಡಿಸುವ ವೇಳೆ ಸುಮಾರು 4 ಕಿ.ಮೀಯಷ್ಟು ಹಿನ್ನೀರ ಪ್ರದೇಶ (ಘಟಪ್ರಭಾ ನದಿ) ದಾಟಬೇಕು. ಅಲ್ಲಿ ಯಾವ ರೀತಿ ಪೈಪ್‌ಲೈನ್‌ ಅಳವಡಿಸಬೇಕು ಎಂಬುದಕ್ಕೆ ಬಿಟಿಡಿಎ, ಕಾವೇರಿ ಅಭಿವೃದ್ಧಿ ಪ್ರಾಧಿಕಾರದ ಮಾರ್ಗದರ್ಶನ ಪಡೆದಿತ್ತು ಎಂದು ಬಿಟಿಡಿಎ ಖಚಿತ ಮೂಲಗಳು ತಿಳಿಸಿವೆ.

ಕಾವೇರಿ ನದಿಯಿಂದ ಬೆಂಗಳೂರು ಮಹಾನಗರಕ್ಕೆ ನೀರು ಪೂರೈಕೆ ಯೋಜನೆ ಕಾರ್ಯಗತ ಸ್ಥಳದಲ್ಲೂ ಕೆಲವೆಡೆ ನದಿ ಮತ್ತು ಹಿನ್ನೀರ ಪ್ರದೇಶದಲ್ಲಿ ಪೈಪ್‌ಲೈನ್‌ ಅಳವಡಿಸಬೇಕಿತ್ತು. ಅಂತಹ ಸ್ಥಳಗಳಲ್ಲಿ ಸೇತುವೆ ನಿರ್ಮಿಸಿ, ಪೈಪ್‌ಲೈನ್‌ ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಅನಗವಾಡಿ ಸೇತುವೆ ಬಳಿ, ಘಟಪ್ರಭಾ ನದಿಯಲ್ಲಿ ಪ್ರತ್ಯೇಕ ಸೇತುವೆ ನಿರ್ಮಿಸಿ, ಅದರ ಮೇಲೆ ಪೈಪ್‌ಲೈನ್‌ ಹಾಕಿಕೊಂಡು, ಹಿನ್ನೀರ ಪ್ರದೇಶ ದಾಟಲು ಪ್ರತ್ಯೇಕ ಯೋಜನೆ ಕೈಗೊಳ್ಳಲು ಸಲಹೆ ಪಡೆದಿತ್ತು.

72 ಕೋಟಿ ಯೋಜನೆಗೆ 75 ಕೋಟಿ ಸೇತುವೆ: ಅಟ್ಟಿದ್ದೆಲ್ಲ ಹುಟ್ಟಿಗೆ ಎಂಬ (ಬೇಯಿಸಿದ ಅಡುಗೆಯಲ್ಲ ರುಬ್ಬುವ ಹುಟ್ಟಿಗೆ ಹತ್ತಿ ಹಾಳಾದಂತೆ) ಎಂಬ ಗಾದೆ ಮಾತು, ಉತ್ತರ ಕರ್ನಾಟದಲ್ಲಿ ಜನಜನಿತ. ಈ ಯೋಜನೆಯಲ್ಲೂ ಬಿಟಿಡಿಎ ಕೂಡ ಅದೇ ಮಾರ್ಗ ಅನುಸರಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಹೆರಕಲ್ನಿಂದ ಪೈಪ್‌ಲೈನ್‌ ಅಳವಡಿಸುವ ವೇಳೆ ಘಟಪ್ರಭಾ ನದಿ ದಾಟಬೇಕು. ನದಿಯಲ್ಲಿ (ಹಿನ್ನೀರ ಪ್ರದೇಶ) ಹೇಗೆ ಯೋಜನೆ ಕೈಗೊಳ್ಳಬೇಕು ಎಂಬುದರ ಕುರಿತು, ಕೆಬಿಜೆಎನ್‌ಎಲ್ ಸಲಹೆ ಕೇಳಿದಾಗ, ಕಾವೇರಿ ನೀರು, ಬೆಂಗಳೂರಿಗೆ ಪೂರೈಸಲು ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬದನ್ನು ಪರಿಶೀಲಿಸಿ, ಸಲಹೆ ಪಡೆಯಲು ತಿಳಿಸಲಾಗಿತ್ತು. ಆ ಪ್ರಕಾರ ಕಾವೇರಿ ನಿಗಮದ ಅಧಿಕಾರಿಗಳು, ನದಿಯಲ್ಲಿ ಸೇತುವೆ ನಿರ್ಮಿಸಿ, ಪೈಪ್‌ಲೈನ್‌ ಅಳವಡಿಸಲು ತಿಳಿಸಿದ್ದರು. ಅದೇ ಪ್ರಕಾರ, ಅನಗವಾಡಿ ಸೇತುವೆ ಬಳಿ, ಪೈಪ್‌ಲೈನ್‌ಗಾಗಿ ಪ್ರತ್ಯೇಕ ಸೇತುವೆ ನಿರ್ಮಿಸಲು 75 ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಿ, ಕೆಬಿಜೆಎನ್‌ಎಲ್ಗೆ ಸಲ್ಲಿಸಲಾಗಿದೆ.

•ಎಸ್‌.ಐ. ಇದ್ದಲಗಿ, ಕಾರ್ಯ ನಿರ್ವಾಹಕ ಅಭಿಯಂತರ, ಬಿಟಿಡಿಎ

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next