Advertisement
ಆ.26ರಂದು ನಡೆದಿದ್ದ ವಿಚಾರಣೆ ವೇಳೆ, ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬರ ಇದೆ. ಹೀಗಾಗಿ, ತಮಿಳುನಾಡಿಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣ ತಗ್ಗಿಸದೆ ವಿಧಿಯಿಲ್ಲ ಎಂದು ಹೇಳಿತ್ತು. ಆದರೆ, ತಮಿಳುನಾಡು 24 ಸಾವಿರ ಕ್ಯುಸೆಕ್ ನೀರು ಬೇಕೇ ಬೇಕು ಎಂದು ಪಟ್ಟುಹಿಡಿದಿತ್ತು. ವಾದಗಳನ್ನು ಆಲಿಸಿದ್ದ ನ್ಯಾಯಪೀಠ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿ, ವಿಚಾರಣೆಯನ್ನು ಮುಂದೂಡಿತ್ತು.
ಈ ನಡುವೆ, ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರು ಇದ್ದರೂ, ಮಳೆ ಕೊರತೆ ಮುಂದಿಟ್ಟುಕೊಂಡು ಸರಿಯಾದ ಪ್ರಮಾಣದ ನೀರು ಬಿಡುಗಡೆ ಮಾಡಿಲ್ಲವೆಂದು ತಮಿಳುನಾಡು ಆರೋಪಿಸಿದೆ. ಸುಪ್ರೀಂಕೋರ್ಟ್‌ಗೆ ಹೊಸತಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಜೂನ್, ಜುಲೈ, ಆಗಸ್ಟ್‌ನಲ್ಲಿ 80 ಟಿಎಂಸಿ ನೀರು ಬಿಡಬೇಕಾದಲ್ಲಿ ಕೇವಲ 30 ಟಿಎಂಸಿ ನೀರು ಬಿಡುಗಡೆ ಮಾಡಿದ್ದಾರೆ ಎಂದು ನೆರೆಯ ರಾಜ್ಯ ದೂರಿದೆ. ವಾಸ್ತವಾಂಶ ಪರಿಶೀಲಿಸಿ:
ಇದೇ ವೇಳೆ, ನವದೆಹಲಿಯಲ್ಲಿ ಜಲಸಂಪನ್ಮೂಲ ಸಚಿವ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಪರ ವಕೀಲರು ಮತ್ತು ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ರಾಜ್ಯದ ಅಣೆಕಟ್ಟುಗಳಲ್ಲಿನ ನೀರಿನ ಪ್ರಮಾಣ ಎಷ್ಟು ಇದೆ ಎಂಬ ಬಗ್ಗೆ ಪರಿಶೀಲನೆ ನಡೆಸುವ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲೂéಎಂಎ)ದವರಿಗೆ ಮನವಿ ಮಾಡಲಾಗಿದೆ. ಆಗ ಅವರಿಗೆ ನಮ್ಮ ಪರಿಸ್ಥಿತಿಯ ನೈಜಾಂಶ ಅರ್ಥವಾಗಲಿದೆ ಎಂದು ಹೇಳಿದ್ದಾರೆ.
Related Articles
ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿ ನೀರು ಇರುತ್ತಿದ್ದರೆ, ತಮಿಳುನಾಡಿಗೆ ನೀರು ಬಿಡಲು ಯಾವುದೇ ಯಾವುದೇ ಅಭ್ಯಂತರ ಇರುತ್ತಿರಲಿಲ್ಲ ಎಂದರು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ಕೈಗೊಂಡ ನಿರ್ಧಾರಗಳನ್ನು ಗೌರವಿಸಿ ನೀರು ಹರಿಸಿದ್ದೇವೆ. ಪ್ರಾಧಿಕಾರದ ಅಧಿಕಾರಿಗಳು ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ವಾಸ್ತವಾಂಶವನ್ನು ಕಣ್ಣಾರೆ ನೋಡಿ ಪರಿಶೀಲನೆ ನಡೆಸಲಿ ಎಂದು ಆಹ್ವಾನ ನೀಡಿದ್ದೇವೆ. ಆಗ ಕರ್ನಾಟಕದಲ್ಲಿ ನೀರಿನ ಸಮಸ್ಯೆಯ ತೀವ್ರತೆ ಅರಿವಾಗಲಿದೆ. ಪ್ರಾಧಿಕಾರದವರು ನಮ್ಮ ಮನವಿ ಪುರಸ್ಕರಿಸಿ, ನಮ್ಮ ರಾಜ್ಯ ಹಾಗೂ ರೈತರ ಹಿತ ಕಾಯುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.
Advertisement
ಸವಾಲಿನ ವಿಚಾರ:ರಾಜ್ಯ ಸರ್ಕಾರದ ಅಧಿಕಾರಿಗಳ ಹೋರಾಟದ ಫಲವಾಗಿ ತಮಿಳುನಾಡಿಗೆ ಕಡಿಮೆ ನೀರು ಹರಿಸುವ ಆದೇಶ ಸಿಕ್ಕಿದೆ. ಆದರೂ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಪ್ರತಿನಿತ್ಯ 5 ಸಾವಿರ ಕ್ಯುಸೆಕ್ ನೀರು ನೀರು ಹರಿಸುವುದು ಸಾವಾಲಿನ ವಿಚಾರ. ಹೀಗಾಗಿ ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಪರ ವಾದ ಮಾಡುತ್ತಿರುವ ಅಡ್ವೊಕೇಟ್ ಜನರಲ್, ಕಾನೂನು ತಜ್ಞರ ತಂಡ, ಅಧಿಕಾರಿಗಳು, ಕರ್ನಾಟಕ ಪ್ರತಿನಿಧಿಗಳು ಸೇರಿ ಚರ್ಚೆ ನಡೆಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. “ತಮಿಳುನಾಡು ಸರ್ಕಾರ 24 ಸಾವಿರ ಕ್ಯುಸೆಕ್ ನೀರು ಕೇಳಿತ್ತು. ನಮ್ಮ ಅಧಿಕಾರಿಗಳು ವಾಸ್ತವಾಂಶಗಳ ದಾಖಲೆ ಮಂಡಿಸಿದ ಪರಿಣಾಮ ಆ ರಾಜ್ಯಕ್ಕೆ ಹರಿಸುವ ನೀರಿನ ಪ್ರಮಾಣ 5 ಸಾವಿರ ಕ್ಯೂಸೆಕ್ ಗೆ ಇಳಿಸಲಾಗಿದೆ. ರಾಜ್ಯದಲ್ಲಿ ಮಳೆಯ ಕೊರತೆ, ಆಣೆಕಟ್ಟುಗಳಿಗೆ ಒಳಹರಿವಿನ ಪ್ರಮಾಣ ಕುಸಿದಿರುವ ಕಾರಣ, ಈ ಪ್ರಮಾಣದ ನೀರನ್ನು ಬಿಡುವುದು ಕಷ್ಟಕರವಾಗಿದೆ. ನಾವು ತಮಿಳುನಾಡಿನ ಹಕ್ಕಿನ ನೀರಿನ ಬಳಕೆ ಬಗ್ಗೆ ನಾವು ಪ್ರಶ್ನಿಸಲು ಸಾಧ್ಯವಿಲ್ಲ. ನಾವು ಎಷ್ಟು ನೀರು ಬಿಟ್ಟಿದ್ದೇವೆ ಎಂಬುದಕ್ಕೆ ಬಿಳಿಗುಂಡ್ಲುವಿನಲ್ಲಿ ಲೆಕ್ಕ ಇದೆ’ ಎಂದರು. ಮೇಲ್ಮನವಿಗೆ ಸಿದ್ಧತೆ:
ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆ ನಡೆಯುವ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. “ನಮ್ಮ ರಾಜ್ಯದ ರೈತರ ಹಿತ ಕಾಯುವುದು ನಮ್ಮ ಮೊದಲ ಆದ್ಯತೆ. ಶುಕ್ರವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಯಲಿದ್ದು, ಈ ವಿಚಾರಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ನಮ್ಮ ಕಾನೂನು ಪ್ರತಿನಿಧಿಗಳ ಜತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು. ಈ ಎಲ್ಲಾ ಯೋಜನೆಗಳಿಗೆ ಮೇಕೆದಾಟು ಯೋಜನೆಯೊಂದೇ ಪರಿಹಾರ. ಮೇಕೆದಾಟು ಆಣೆಕಟ್ಟು ಇದ್ದಿದ್ದರೆ ಸಂಕಷ್ಟದ ಸೂತ್ರದ ಮೂಲಕ ತಮಿಳುನಾಡಿಗೆ ನೀರು ಬಿಡಬಹುದಾಗಿತ್ತು. ಮೇಕೆದಾಟು ಯೋಜನೆ ತಮಿಳುನಾಡಿನ ಹಿತವನ್ನು ಕಾಯಲಿದೆ. ಹೀಗಾಗಿ ನಾವು ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸುತ್ತೇವೆ ಎಂದರು ಡಿಸಿಎಂ ಶಿವಕುಮಾರ್. ಬಿರುಸಿನ ಪ್ರತಿಭಟನೆ:
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯದಲ್ಲಿ ಗುರುವಾರ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿ ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಲಾಯಿತು. ಶ್ರೀರಂಗಪಟ್ಟಣದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಗುರುವಾರ 2ನೇ ದಿನಕ್ಕೆ ಕಾಲಿರಿಸಿದೆ. ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಮುಖಂಡರು ಘೋಷಣೆ ಕೂಗಿದ್ದಾರೆ. ಇದೇ ವೇಳೆ, ಶ್ರೀರಂಗಪಟ್ಟಣದಲ್ಲಿ ರೈತ ಮುಖಂಡರು ಕಾವೇರಿ ನದಿಗೆ ಇಳಿದು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.