ಮುಂಬೈ: ದುಬೈನಿಂದ ಭಾರತಕ್ಕೆ ಸುಮಾರು 18 ಕೋಟಿ ರೂ.ಮೌಲ್ಯದ 25 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಅಫ್ಘಾನಿಸ್ಥಾನದ ಕಾನ್ಸುಲ್ ಜನರಲ್ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಭಾರತದಲ್ಲಿನ ಅತ್ಯಂತ ಹಿರಿಯ ಅಫ್ಘಾನ್ ರಾಜತಾಂತ್ರಿಕರಾಗಿರುವ ಝಕಿಯಾ ವಾರ್ಡಕ್ ಅವರು ತಮ್ಮ ನಿರ್ಧಾರದ ಬಳಿಕ ಪ್ರತಿಕ್ರಿಯೆ ನೀಡಿದ್ದು ‘ಇದು ವೈಯಕ್ತಿಕ ದಾಳಿ ಮತ್ತು ಮಾನನಷ್ಟ. ಈ ವ್ಯವಸ್ಥೆಯೊಳಗಿನ ಏಕೈಕ ಮಹಿಳಾ ಪ್ರತಿನಿಧಿಯನ್ನು ಅನ್ಯಾಯವಾಗಿ ಗುರಿಯಾಗಿಸುವ ಸಾರ್ವಜನಿಕ ನಿರೂಪಣೆ” ಎಂದು ಆರೋಪಿಸಿದ್ದಾರೆ.
ಏಪ್ರಿಲ್ ಕೊನೆಯ ವಾರದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್‌ನಿಂದ ಎಂಎಸ್ ವಾರ್ಡಕ್ ಅವರನ್ನು ಭಾರೀ ಚಿನ್ನ ಸಹಿತ ತಡೆಯಲಾಗಿತ್ತು. ಚಿನ್ನವನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ ಆದರೆ ರಾಜತಾಂತ್ರಿಕ ವಿನಾಯಿತಿ ಹೊಂದಿರುವ ಕಾರಣ ಆಕೆಯನ್ನು ಬಂಧಿಸಲಾಗಿಲ್ಲ.
ವಾರ್ಡಕ್ (58) ತನ್ನ ಪುತ್ರನೊಂದಿಗೆ ದುಬೈನಿಂದ ಆಗಮಿಸಿದ್ದರು. ಜ್ಯಾಕೆಟ್, ಲೆಗ್ಗಿನ್ಸ್, ಕ್ಯಾಪ್ ಮತ್ತು ಸೊಂಟದ ಬೆಲ್ಟ್ ನಲ್ಲೂ ಚಿನ್ನ ಅಡಗಿಸಲಾಗಿತ್ತು.
ರಾಜತಾಂತ್ರಿಕರನ್ನು ಅಫ್ಘಾನಿಸ್ಥಾನದಲ್ಲಿ ಹಿಂದಿನ ಅಶ್ರಫ್ ಘನಿ ಸರ್ಕಾರವು ನೇಮಿಸಿತ್ತು, 2021 ರಲ್ಲಿ ತಾಲಿಬಾನ್‌ನಿಂದ ಬದಲಾಯಿಸಲಾಗಿತ್ತಾದರೂ ಭಾರತ ಹಳೆ ನೇಮಕಗೊಂಡವರೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.