Advertisement

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

12:12 AM May 16, 2024 | Team Udayavani |

ಮಂಗಳೂರು: ದಿನಕ್ಕೊಂದು ವಂಚನೆ ತಂತ್ರ ಅನುಸರಿಸುತ್ತಿರುವ ಸೈಬರ್‌ ವಂಚಕರು ಈಗ “ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಗಾಳ ಹಾಕಲಾರಂಭಿಸಿದ್ದಾರೆ. ವಂಚಕರು ಮೊದಲು “ಪಾರ್ಸೆಲ್‌’ ಕತೆ ಕಟ್ಟುತ್ತಾರೆ. ಪೊಲೀಸ್‌ ಅಧಿಕಾರಿಗಳೆಂದು ಪರಿಚಯಿಸಿ ಕೊಂಡು ಬಂಧಿಸುವುದಾಗಿ ಬೆದರಿಸುತ್ತಾರೆ. ಹಣ ನೀಡಿದರೆ ಬಂಧನದಿಂದ ತಪ್ಪಿಸಿಕೊಳ್ಳ ಬಹುದೆನ್ನುತ್ತಾರೆ. ಬುದ್ಧಿ ಮಂಕಾಗುವಂತೆ ಮಾಡಿ ತತ್‌ಕ್ಷಣವೇ ಹಣವನ್ನು ವರ್ಗಾಯಿಸುವಂತೆ ಪೀಡಿಸುತ್ತಾರೆ.

Advertisement

ಪಾರ್ಸೆಲ್‌ನಲ್ಲಿ ಡ್ರಗ್ಸ್‌
ಇತ್ತೀಚೆಗೆ ಫೆಡೆಕ್ಸ್‌ ಹೆಸರಿನಲಿ ನಗರದ ಮರ್ಚೆಂಟ್‌ ನೇವಿಯ ನಿವೃತ್ತ ಚೀಫ್ ಎಂಜಿ ನಿಯರ್‌ ಅವರನ್ನು ವಂಚಿಸಿ 1.60 ಕೋ.ರೂ. ಹಣವನ್ನು ಸೈಬರ್‌ ವಂಚಕರು ದೋಚಿದ್ದರು. ಅವರ ಇಬ್ಬರು ಮಕ್ಕಳು ವಿದೇಶದಲ್ಲಿ ಕಲಿ ಯುತ್ತಿದ್ದು ಅದೇ ವಿಷಯವನ್ನು ಬಳಸಿ ವಂಚಿಸಲಾಗಿದೆ. ತನ್ನನ್ನು ರಾಜೇಶ್‌ ಕುಮಾರ್‌ ಎಂದು ಪರಿಚಯಿಸಿಕೊಂಡ ವಂಚಕ “ನಿಮ್ಮ ಹೆಸರಿನಲ್ಲಿ ಮುಂಬಯಿಯಿಂದ ಥೈಲ್ಯಾಂಡ್‌ಗೆ ಒಂದು ಪಾರ್ಸೆಲ್‌ ಬಂದಿದ್ದು ಅದರಲ್ಲಿ ಅಫ್ಘಾನ್‌ ಮತ್ತು ಕಿನ್ಯಾ ದೇಶದವರ ಪಾಸ್‌ಪೋರ್ಟ್‌ಗಳು, ಕ್ರೆಡಿಟ್‌ ಕಾರ್ಡ್‌ಗಳು, ಎಂಡಿಎಂಎ ಡ್ರಗ್ಸ್‌, ಬಟ್ಟೆಗಳು, ಲ್ಯಾಪ್‌ಟಾಪ್‌ ಇವೆ. ಇದರ ಬಗ್ಗೆ ಮುಂಬಯಿ ಸೈಬರ್‌ ಕ್ರೈಂ ಬ್ರಾಂಚ್‌ ತನಿಖೆ ನಡೆಸುತ್ತಿದೆ. ಕೂಡಲೇ ಸೈಬರ್‌ ಕ್ರೈಂ ಪೊಲೀಸ್‌ ಅಧಿಕಾರಿ ಜತೆ ಮಾತನಾಡಿ’ ಎಂದು ಕರೆಯನ್ನು ವರ್ಗಾಯಿಸಿದ. ಕೂಡಲೇ ಆ ಅಧಿಕಾರಿ ಮಾತನಾಡಿ ಸಿಬಿಐ ಅಧಿಕಾರಿ ರುದ್ರ ರಾಥೋಡ್‌ ಎಂಬವರನ್ನು ಇ-ಮೇಲ್‌ ಮೂಲಕ ಸಂಪರ್ಕಿಸಲು ತಿಳಿಸಿದ. ಕೂಡಲೇ ರುದ್ರ ರಾಥೋಡ್‌ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕರೆ ಮಾಡಿ “ಈ ಪ್ರಕರಣದಲ್ಲಿ ಹಲವು ಮಕ್ಕಳನ್ನು ಕೊಲೆಮಾಡಿದ ತಂಡ ಶಾಮೀಲಾಗಿದೆ. ನಮಗೆ ಸಹಕರಿಸದಿದ್ದಲ್ಲಿ ಇಂಟರ್‌ಪೋಲ್‌ ಮೂಲಕ ವಿದೇಶದಲ್ಲಿರುವ ಮಗ ಮತ್ತು ಮಗಳನ್ನು ಬಂಧಿಸಬೇಕಾದೀತು ಎಂದು ಭಯ ಹುಟ್ಟಿಸಿದರು. ಕೂಡಲೇ ಸ್ಕೈಪ್‌ ಅಕೌಂಟ್‌ ತೆರೆಯುವಂತೆ ಸೂಚಿಸಿ, ಆ ನಿರಂತರ ಸಂಪರ್ಕದಲ್ಲಿರಲು ಸೂಚಿಸಿದರು. ಬಳಿಕ ಸಿಬಿಐ ಇಲಾಖೆಗೆ ಸಂಬಂಧಪಟ್ಟ ನೋಟಿಸ್‌ಗಳೆಂದು ಕೆಲವು ದಾಖಲೆಗಳನ್ನು ಕಳುಹಿಸಿದರು. ಬಾಂಡ್‌ ರೂಪ ದಲ್ಲಿ ಹಣ ಪಾವತಿಸಬೇಕು. ಪ್ರಕರಣ ಮುಗಿದ ಕೂಡಲೇ ಹಣ ವಾಪಸು ನೀಡುತ್ತೇವೆ’ ಎಂದರು. ಆಗ ಅವರು ತಮ್ಮ ಮಕ್ಕಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಒಟ್ಟು 1.60 ಕೋ.ರೂ. ವರ್ಗಾಯಿಸಿದರು.

ವಿವಿಧೆಡೆ ಫೆಡೆಕ್ಸ್‌ ಗುಮ್ಮ!
ಕಳೆದೊಂದು ವಾರದಲ್ಲಿ ಬೆಂಗಳೂರು ಸೇರಿ ದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಫೆಡೆಕ್ಸ್‌ ಪಾರ್ಸೆಲ್‌ ಹೆಸರಿನ ವಂಚನೆ ಪ್ರಕರಣಗಳು ನಡೆದಿವೆ. ಈ ಮೂಲಕ ಕೋಟ್ಯಂತರ ರೂ. ಸೈಬರ್‌ ವಂಚಕರ ಪಾಲಾಗಿದೆ.

ಮಹಿಳೆಯ ಅಳುವಿಗೆ ಮರುಗಿದ ವಂಚಕ!
ಮತ್ತೊಂದು ಪ್ರಕರಣದಲ್ಲಿ ಮಹಿಳೆಗೂ ಇದೇ ರೀತಿ ಕರೆ ಬಂದಿತ್ತು. ತಾನು ಯಾವುದೇ ಪಾರ್ಸೆಲ್‌ ಕಳುಹಿಸಿಲ್ಲ ಎಂದಾಗ, ಕರೆ ಮಾಡಿದವರು “ಹಾಗಾದರೆ ಮುಂಬಯಿ ಸೈಬರ್‌ ಕ್ರೈಂಗೆ ದೂರು ದಾಖಲಿಸಿ’ ಎಂದರು. ಕೂಡಲೇ ಓರ್ವ ಕರೆ ಮಾಡಿ ಮುಂಬಯಿ ಸೈಬರ್‌ ಕ್ರೈಂ ವಿಭಾಗದವನೆಂದು ಪರಿಚಯಿಸಿಕೊಂಡು “ನಿಮ್ಮ ದೂರು ದಾಖಲಿಸಿ. ಸ್ಕೈಪ್‌ ಮೂಲಕ ಕೆಮರಾದಲ್ಲಿ ಮಾತನಾಡಿ’ ಎಂದ. ಮಹಿಳೆ ನಿರಂತರವಾಗಿ ಅಳಲು ಆರಂಭಿಸಿದಾಗ ಆತ ಕರೆಯನ್ನು ಕೊನೆಗೊಳಿಸಿದ. ತಾನೋರ್ವ ವಂಚಕ ಎಂದೂ ಒಪ್ಪಿದ!

ಹಿರಿಯರನ್ನು ಜಾಗೃತಗೊಳಿಸಿ
ಫೆಡೆಕ್ಸ್‌ ಕೊರಿಯರ್‌ ಕಂಪೆನಿ ಹೆಸರಿನಲ್ಲಿ ಕರೆ ಮಾಡಿ ವಂಚಿಸುವ ಪ್ರಕರಣ ರಾಜ್ಯಾದ್ಯಂತ ನಡೆದಿದೆ. ಸ್ಕೈಪ್‌ ಮೂಲಕ ವೀಡಿಯೋ ಕಾಲ್‌ ಮಾಡುತ್ತಾರೆ. ಯುನಿಫಾರಂ ಹಾಕಿದ ಪೊಲೀಸರೇ ಮಾತ ನಾಡುವುದರಿಂದ, ಅವರು ನಮ್ಮ ಮನೆ ವಿಳಾಸ, ಮೇಲ್‌ ಐಡಿ, ಆಧಾರ್‌ ಸಂಖ್ಯೆ ಎಲ್ಲವನ್ನೂ ಸರಿಯಾಗಿ ಹೇಳುವುದರಿಂದ ಶೇ. 90 ರಷ್ಟು ಜನ ನಂಬುತ್ತಾರೆ. ಇದರ ಬಗ್ಗೆ ಎಚ್ಚರ ಅವಶ್ಯ. ಮುಖ್ಯವಾಗಿ ಮನೆಯಲ್ಲಿರುವ ಹಿರಿಯರನ್ನು ಜಾಗೃತರನ್ನಾಗಿಸಬೇಕು.
ಕ್ರೈಂ ಬ್ರಾÂಂಚ್‌ನವರು ಪೋನ್‌ನಲ್ಲಿ ಸಂಪರ್ಕಿಸುವುದಿಲ್ಲ. ಪಾರ್ಸೆ ಲ್‌ ಕಳುಹಿಸದೇ ಇದ್ದರೆ ಹೆದರಬೇಕಿಲ್ಲ. ಪಾರ್ಸೆಲ್‌ ಕಳು ಹಿಸುವಾಗ ಸರಿಯಾಗಿ ಸೀಲ್‌ ಮಾಡಿ. ಇಂತಹ ಕರೆ ಬಂದರೆ ಯಾವುದೇ ಮಾಹಿತಿ ನೀಡಬೇಡಿ. ಸೈಬರ್‌ ಕ್ರೈಂ “ಸಹಾಯವಾಣಿ 1930’ಗೆ ಕರೆ ಮಾಡಿ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞ
ಡಾ| ಅನಂತ ಪ್ರಭು ಜಿ.

Advertisement

ಏನಿದು ಫೆಡೆಕ್ಸ್‌ ?
ಫೆಡೆಕ್ಸ್‌ ಎಂಬುದು ಕೊರಿಯರ್‌ ಮತ್ತು ಪಾರ್ಸೆಲ್‌ ಕಂಪೆನಿ. ದೇಶ-ವಿದೇಶದಲ್ಲಿ ಇದು ಪಾರ್ಸೆಲ್‌ ಸೇವೆ ಒದಗಿಸುತ್ತದೆ. ಇದು ಜನಪ್ರಿಯ ಸಂಸ್ಥೆಯಾದ ಕಾರಣ ಈ ಹೆಸರನ್ನೇ ವಂಚಕರು ಬಳಸುತ್ತಿದ್ದಾರೆ. ಫೆಡೆಕ್ಸ್‌ ಎಂದಾಗ ಜನ ಸುಲಭವಾಗಿ ವಂಚಿಸ ಬಹುದು ಎಂಬ ಲೆಕ್ಕಾಚಾರ ವಂಚಕರದ್ದು.

ಫೆಡೆಕ್ಸ್‌ ಹೆಸರಿನಲ್ಲಿ ವಂಚನೆ ಪ್ರಕರಣ ಗಳು ಮಂಗಳೂರು ಸಹಿತ ವಿವಿಧೆಡೆ ನಡೆದಿರುವುದು ವರದಿಯಾ ಗಿವೆ. ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ ತನಿಖೆ ತೀವ್ರಗೊಳಿಸಿದ್ದೇವೆ. ಅಪರಿಚಿತರ ಕರೆಗೆ ಸ್ಪಂದಿಸುವಾಗ ಜಾಗ್ರತೆ ಅವಶ್ಯ, ಪೊಲೀಸ್‌ ಅಥವಾ ಯಾವುದೇ ಇಲಾಖೆಯವರೆಂದು ಹೇಳಿದರೂ ಖಚಿತ ಪಡಿಸಿಕೊಳ್ಳದೆ ಮಾಹಿತಿ ನೀಡಬಾರದು. ಪೊಲೀಸರು ಹೀಗೆ ಮಾಹಿತಿ ಕೇಳುವುದಿಲ್ಲ.
-ಅನುಪಮ್‌ ಅಗರ್‌ವಾಲ್‌
ಪೊಲೀಸ್‌ ಆಯುಕ್ತರು, ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next