Advertisement

ಕೊರೊನಾ ಸೋಂಕಿಗೆ ಗೋಮೂತ್ರ ಔಷಧವಲ್ಲ

08:19 PM Jul 21, 2021 | Team Udayavani |

ವಾಡಿ: ಕೊರೊನಾ ಸೋಂಕಿತ ರೋಗಿಯ ಪಾಲಿಗೆ ವೈದ್ಯರೇ ದೇವರು, ಲಸಿಕೆಯೇ ಪ್ರಸಾದ. ಬಾಬಾ ರಾಮದೇವ ಅವರ ಅವೈಜ್ಞಾನಿಕ ಮಾತು ನಂಬಿ ಗೋಮೂತ್ರವನ್ನೇ ಔಷಧವೆಂದು ಸೇವಿಸಿದರೆ ಮಸಣ ಸೇರುವುದು ಶತಸಿದ್ಧ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಎಚ್ಚರಿಸಿದರು.

Advertisement

ಪಟ್ಟಣದ ಸಾಹೇಬ ಫಂಕ್ಷನ್‌ ಹಾಲ್‌ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪೌರಾಡಳಿತ ಇಲಾಖೆಗಳ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಭಿವೃದ್ಧಿಗೆ ಬಿಡುಗಡೆಯಾದ 8.29 ಕೋಟಿ ರೂ. ಅನುದಾನಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಕೊರೊನಾ ಮೂರನೇ ಅಲೆ ವಿಶೇಷವಾಗಿ ಮಕ್ಕಳನ್ನು ಅಪ್ಪಳಿಸಲಿದೆ ಎಂದು ಸರಕಾರ ನೇಮಿಸಿರುವ ತಜ್ಞರೇ ಸ್ಪಷ್ಟಪಡಿಸಿದ್ದಾರೆ.

ಆದರೂ ರಾಜ್ಯ ಬಿಜೆಪಿ ಸರಕಾರದಿಂದ ಯಾವುದೇ ಪೂರ್ವಸಿದ್ಧತೆಯಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಡವರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಆರು ಸಾವಿರ ಮಕ್ಕಳು ಇಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಮಕ್ಕಳ ಆರೋಗ್ಯಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಇದು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುವ ಹೃದಯಹೀನ ಸರಕಾರ ಎಂದು ಹರಿಹಾಯ್ದರು. ಕಾಂಗ್ರೆಸ್‌ ಸರಕಾರ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿಯಲ್ಲಿ ಜಯದೇವ, ಕಿದ್ವಾಯಿ, ಇಎಸ್‌ಐಸಿ, ಜಿಮ್ಸ್‌ ಸೇರಿದಂತೆ ಇತರ ದೊಡ್ಡ ಆಸ್ಪತ್ರೆಗಳನ್ನು ಸ್ಥಾಪಿಸದಿದ್ದರೆ ಈ ಭಾಗದ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಿತ್ತು.

ಕಾಂಗ್ರೆಸ್‌ ಪಕ್ಷದಿಂದ ಜಿಲ್ಲಾಡಳಿತಕ್ಕೆ 600 ಬೆಡ್‌ಗಳನ್ನು ಕೊಟ್ಟಿದ್ದೇವೆ. ಚಿತ್ತಾಪುರದಲ್ಲಿ ರಾಜ್ಯದಲ್ಲೇ ಮಾದರಿ ಕೋವಿಡ್‌ ಕೇರ್‌ ಸೆಂಟರ್‌ ತೆರೆದಿದ್ದೇವೆ. ಜನರು ಉಸಿರುಗಟ್ಟಿ ಸಾಯುತ್ತಿದ್ದಾಗಲೂ ಈ ಸರಕಾರಕ್ಕೆ ಆಕ್ಸಿಜನ್‌ ಪೂರೈಸಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದರೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತದೆ. ಆದರೆ ಜನಸಾಮಾನ್ಯರಿಗೆ ಸೋಂಕು ತಗುಲಿದರೆ ಮಣ್ಣುಪಾಲೇ ಗತಿ ಎಂಬತಾಯಿತು. ಔಷಧ ಕೊಡುವ ಯೋಗ್ಯತೆಯಿಲ್ಲದ ಸರಕಾರ ಅಧಿ ಕಾರದಲ್ಲಿದ್ದು, ಮೂರನೇ ಅಲೆ ಎದುರಿಸಲು ಅಸಮರ್ಥವಾಗಿದೆ ಎಂದು ವಾಗ್ಧಾಳಿ ನಡೆಸಿದರು.

ಪುರಸಭೆ ಸದಸ್ಯ ದೇವೀಂದ್ರ ಕರದಳ್ಳಿ, ಕಾಂಗ್ರೆಸ್‌ ಮುಖಂಡ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ಉಮಾಕಾಂತ ಹಳ್ಳೆ, ಮುಖ್ಯಾಧಿ ಕಾರಿ ಚಿದಾನಂದ ಸ್ವಾಮಿ, ಜೆಇ ಅಶೋಕ ಪುಟ್‌ಪಾಕ್‌, ತಾಪಂ ಅಧ್ಯಕ್ಷ ಜಗಣ್ಣಗೌಡ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ, ಪುರಸಭೆ ವಿರೋಧ ಪಕ್ಷದ ನಾಯಕ ಬಿಜೆಪಿಯ ಭೀಮಶಾ ಜಿರೊಳ್ಳಿ, ಕಾಂಗ್ರೆಸ್‌ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ, ಟೋಪಣ್ಣ ಕೋಮಟೆ, ಅಬ್ದುಲ್‌ ಅಜೀಜ್‌ಸೇಠ, ಶಂಕ್ರಯ್ಯಸ್ವಾಮಿ ಮದರಿ, ರಮೇಶ ಮರಗೋಳ, ಮಲ್ಲಿಕಾರ್ಜುನ ಯಳಸಂಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next