Advertisement

ವೀಡಿಯೋ ಕಾಲ್‌ ಮೂಲಕವೇ ಜಾನುವಾರು ಚಿಕಿತ್ಸೆ!

12:16 AM Nov 05, 2022 | Team Udayavani |

ಬೆಂಗಳೂರು: ಚರ್ಮಗಂಟು ರೋಗ ಸಹಿತ ಜಾನುವಾರುಗಳಿಗೆ ಒಂದಿಲ್ಲೊಂದು ರೋಗ ಹರಡುತ್ತಿದೆ. ಮತ್ತೊಂದೆಡೆ ಹಳ್ಳಿಗಳಲ್ಲಿ ಪಶುವೈದ್ಯರಿಲ್ಲ ಎಂಬ ಕೊರಗಿದೆ. ರೈತರ ಈ ಕೊರಗನ್ನು ನೀಗಿಸಲು ಪಶುವೈದ್ಯರು ವೀಡಿಯೋ ಮೂಲಕ ಚಿಕಿತ್ಸೆ ನೀಡುವ ಯೋಜನೆ ಆರಂಭವಾಗಿದೆ.

Advertisement

ಇದಕ್ಕಾಗಿ ಪ್ರತಿಷ್ಠಿತ ಹೈದರಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) ಮತ್ತು ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎನ್‌ಐಟಿ)ಯಲ್ಲಿ ವ್ಯಾಸಂಗ ಪೂರೈಸಿರುವ ಇಬ್ಬರು ತಂತ್ರಜ್ಞರು ಸ್ಟಾರ್ಟ್‌ ಅಪ್‌ ಆರಂಭಿಸಿದ್ದು, ಅದರಡಿ “ಡಾಕ್ಟರ್‌ ಪಶು’. ಆ್ಯಪೊಂದನ್ನು ಅಭಿವೃದ್ಧಿಪಡಿಸಿ ದ್ದಾರೆ. ಇದರ ಮುಖ್ಯ ಉದ್ದೇಶ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವುದಾಗಿದೆ.

ಹೇಗೆ ಚಿಕಿತ್ಸೆ?
ದೇಶದ ಯಾವುದೇ ಮೂಲೆಯಲ್ಲಿ ರುವ ರೈತರು ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಜಾನುವಾರುಗಳ ಫೋಟೋ ಅಪ್‌ಲೋಡ್‌ ಮಾಡಿ ಕರೆ ಮಾಡಿದರೆ ಸಾಕು, ಪಶುವೈದ್ಯರು ವೀಡಿಯೋ ಕಾಲ್‌ ಮೂಲಕ ಸಂಬಂಧಪಟ್ಟ ರೈತರ ಸಂಪರ್ಕಕ್ಕೆ ಬರುತ್ತಾರೆ. ಆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ಮಾಡುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಶೀಘ್ರದಲ್ಲೇ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳಿಗೆ ಔಷಧಗಳನ್ನು ಕೂಡ ಹೋಂ ಡೆಲಿವರಿ ಮಾಡುವ ವ್ಯವಸ್ಥೆಯನ್ನು “ಡಾಕ್ಟರ್‌ ಪಶು’ ಪರಿಚಯಿಸಲು ಸಿದ್ಧತೆ ನಡೆಸಿದೆ.

ಈಗಾಗಲೇ ಸುಮಾರು 12 ಸಾವಿರ ರೈತರು ಉಚಿತವಾಗಿ ಡಾಕ್ಟರ್‌ ಪಶು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಅಂದಾಜು 20 ಪಶುವೈದ್ಯರು “ಲಿಂಕ್‌’ ಆಗಿದ್ದಾರೆ. ಪ್ರಸ್ತುತ ಕನ್ನಡ, ಮರಾಠಿ, ತಮಿಳು, ತೆಲಗು, ಅಸ್ಸಾಂ, ಬಂಗಾಳಿ ಸಹಿತ ಎಂಟು ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳಿಗೆ ಇದನ್ನು ವಿಸ್ತರಿಸುವ ಉದ್ದೇಶವನ್ನು ಸ್ಟಾರ್ಟ್‌ಅಪ್‌ ಹೊಂದಿದೆ.

ವೈದ್ಯರ ಕೊರತೆ
ನಿವಾರಣೆಗೆ ಕ್ರಮ
“ಸಾಮಾನ್ಯವಾಗಿ ಮನುಷ್ಯರು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಜಾನು ವಾರುಗಳ ವಿಚಾರದಲ್ಲಿ ತದ್ವಿರುದ್ಧ. ಅವುಗಳಿದ್ದಲ್ಲಿಯೇ ವೈದ್ಯರು ಬರಬೇಕಾಗುತ್ತದೆ. ಹೀಗೆ ಬಂದು-ಹೋಗಲು ನೂರಾರು ರೂಪಾಯಿ ಕನ್ಸಲ್ಟೆàಷನ್‌ ಶುಲ್ಕ ಪಾವತಿಸಬೇಕು. ಇದಕ್ಕಿಂತ ಹೆಚ್ಚಾಗಿ ಸಮಯ ವ್ಯಯ ಆಗುತ್ತದೆ. ಇನ್ನು ಕರ್ನಾಟಕ ಸಹಿತ ದೇಶದಲ್ಲಿ ಪಶುವೈದ್ಯರ ಕೊರತೆ ಇದ್ದು, ಹಳ್ಳಿಗಳಲ್ಲಿ ಈ ಸಮಸ್ಯೆ ತುಂಬಾ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ “ಡಾಕ್ಟರ್‌ ಪಶು’ ನೆರವಿಗೆ ಧಾವಿಸಲಿದೆ’ ಎಂದು ಡಾಕ್ಟರ್‌ ಪಶು ಟೆಕ್ನಾಲಜೀಸ್‌ ಸ್ಟಾರ್ಟ್‌ಅಪ್‌ನ ಸಹಸಂಸ್ಥಾಪಕ ಬಿ.ಎಂ. ಕುಮಾರ್‌ ತಿಳಿಸುತ್ತಾರೆ.

Advertisement

ಯಾವುದಕ್ಕೆಲ್ಲ ಚಿಕಿತ್ಸೆ?
“ಂಪ್ರಿಲ್‌ನಲ್ಲಿ ಈ ಆ್ಯಪ್‌ ಅನ್ನು ಪರಿಚಯಿಸಲಾಗಿದೆ. ಆ್ಯಪ್‌ ಡೌನ್‌ಲೋಡ್‌ ಉಚಿತವಾಗಿದ್ದು, ಮೊದಲ ಕರೆ ಕೇವಲ 29 ರೂ. ನಿಗದಿಪಡಿಸಲಾಗಿದೆ. ಅನಂತರದ ಪ್ರತಿ ಕರೆಗೆ 99 ರೂ. ಆಗುತ್ತದೆ. ಹಸು, ಎಮ್ಮೆ, ಕುರಿ, ಮೇಕೆ, ಕೋಳಿ, ಹಂದಿ, ಬೆಕ್ಕು ಮತ್ತು ನಾಯಿಗಳಿಗೆ ಈ ವೇದಿಕೆ ಅಡಿ ಚಿಕಿತ್ಸೆ ಒದಗಿಸಲಾಗುತ್ತಿದೆ. ದಕ್ಷಿಣ ಭಾರತಕ್ಕೆ ನಾವು ಹೆಚ್ಚು ಫೋಕಸ್‌ ಆಗಿ ಕೆಲಸ ಮಾಡುತ್ತಿದ್ದೇವೆ. ಆದಾಗ್ಯೂ ಗುಜರಾತ್‌, ರಾಜಸ್ಥಾನ ಸಹಿತ ನಾನಾ ಭಾಗಗಳಿಂದ ಕರೆಗಳು ಬರುತ್ತಿವೆ’ ಎಂದು ಹೇಳಿದರು.

“ಜಾನುವಾರುಗಳಲ್ಲಿ ಹೊಸ ತರಹದ ಕಾಯಿಲೆ ಕಾಣಿಸಿಕೊಂಡರೆ, ನೋಂದಣಿ ಮಾಡಿಕೊಂಡ ಎಲ್ಲ ರೈತರಿಗೂ ಆ ಬಗ್ಗೆ ಮುನ್ನೆಚ್ಚರಿಕೆ ಸಂದೇಶ ನೀಡಲಾಗುತ್ತದೆ. ಈ ಮೂಲಕ ಇನ್ನೂ ಕಾಯಿಲೆ ಹರಡಿರದ ಭಾಗಗಳಲ್ಲಿನ ರೈತರು ಜಾಗೃತರಾಗಿ ಅಗತ್ಯ ಕ್ರಮ ಕೈಗೊಳ್ಳಲು ಸಹಕಾರಿ ಆಗುತ್ತದೆ ‘ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಈಗಾಗಲೇ “ಕೃಷಿ ಕ್ಲಿನಿಕ್‌’ ಇದೆ. ಅದಕ್ಕೆ ಪೂರಕವಾಗಿ “ಡಾಕ್ಟರ್‌ ಪಶು’ ಜತೆ ಸರಕಾರ ಕೈಜೋಡಿಸಿದರೆ ಮತ್ತಷ್ಟು ಪರಿಣಾಮಕಾರಿಯಾಗಿ ಸೇವೆ ಕಲ್ಪಿಸಬಹುದು. ಅಥವಾ ಪಶು ಸಂಗೋಪನೆ ಇಲಾಖೆಯೊಂದಿಗೂ ಇದನ್ನು ಲಿಂಕ್‌ ಮಾಡಬಹುದು. ಅದರಲ್ಲೂ ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗದಂತಹ ಸಂದರ್ಭಗಳಲ್ಲಿ ವ್ಯಾಪಕವಾಗಿ ಮುನ್ನೆಚ್ಚರಿಕೆ ಕ್ರಮಗಳು, ಚಿಕಿತ್ಸೆಗಳನ್ನು ನೀಡಲು ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ತಂತ್ರಜ್ಞರದ್ದಾಗಿದೆ.

– ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next