Advertisement

ಮುನ್ನೆಚ್ಚರಿಕೆ ಕ್ರಮ ಪಾಲಿಸಿದಲ್ಲಿ ಜಾನುವಾರುಗಳ ರಕ್ಷಣೆ ಸಾಧ್ಯ

12:10 AM Dec 22, 2022 | Team Udayavani |

ರಾಜ್ಯದಲ್ಲಿ ಜಾನುವಾರುಗಳನ್ನು ಚರ್ಮಗಂಟು ರೋಗ ವ್ಯಾಪಕವಾಗಿ ಬಾಧಿಸುತ್ತಿದ್ದು ಹೈನುಗಾರರನ್ನು ಹೈರಾಣಾಗಿಸಿದೆ. ಇದೇನು ಹೊಸ ರೋಗ­ವಲ್ಲವಾದರೂ ಇಷ್ಟೊಂದು ಪ್ರಮಾಣದಲ್ಲಿ ರಾಜ್ಯದಲ್ಲಿ ಜಾನುವಾರು­ಗಳಿಗೆ ಹರಡಿರುವುದು ಇದೇ ಮೊದಲು.

Advertisement

ರಾಜ್ಯದಲ್ಲಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕಳೆದ ಮೂರ್‍ನಾಲ್ಕು ತಿಂಗಳುಗಳಿಂದೀಚೆಗೆ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿ­ಕೊಂಡಿದೆ. ಆರಂಭದಲ್ಲಿ ಈ ಕಾಯಿಲೆಯ ಬಗೆಗೆ ಮಾಹಿತಿ ಕೊರತೆಯಿಂ­ದಾಗಿ ಹೈನುಗಾರರು ತಮ್ಮ ಹಸು, ರಾಸುಗಳನ್ನು ಕಳೆದುಕೊಂಡು ನಷ್ಟ ಅನುಭವಿಸುವಂತಾಗಿತ್ತು. ಅಷ್ಟು ಮಾತ್ರವಲ್ಲದೆ ರಾಜ್ಯ ಸರಕಾರವಾಗಲಿ, ಸ್ಥಳೀಯಾಡಳಿತವಾಗಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಕಾರಣ ಈ ಸೋಂಕು ಈ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುವಂತಾಯಿತು.

ಸದ್ಯ ಚರ್ಮಗಂಟು ರೋಗದಿಂದ ಜಾನುವಾರುಗಳನ್ನು ರಕ್ಷಿಸಲು ಸರಕಾರ ಕ್ರಮಗಳನ್ನು ಕೈಗೊಂಡಿದ್ದರೂ ರೋಗವಿನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಈಗಾಗಲೇ ಸೋಂಕುಪೀಡಿತ ಜಾನುವಾರುಗಳಿಗೆ ಇಲಾಖೆಯ ನಿರ್ದೇಶನದಂತೆ ಸೂಕ್ತ ಚಿಕಿತ್ಸೆ ಕೊಡಿಸಿದಲ್ಲಿ ಮತ್ತು ಜಾನುವಾರುಗಳನ್ನು ಕಟ್ಟುವ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಂಡಲ್ಲಿ ಬಾಧಿತ ಜಾನು ವಾರುಗಳನ್ನು ರೋಗಮುಕ್ತಗೊಳಿಸಬಹುದು. ಅಷ್ಟು ಮಾತ್ರವಲ್ಲದೆ ಈ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆಯಾಗಿ ಪ್ರತಿಯೊಂದೂ ಜಾನು ವಾರಿಗೂ ನಿಗದಿತ ಪ್ರಮಾಣದಲ್ಲಿ ಲಸಿಕೆ ನೀಡಿದ್ದೇ ಆದಲ್ಲಿ ಇವುಗಳನ್ನು ಕೂಡ ಚರ್ಮಗಂಟು ರೋಗದಿಂದ ರಕ್ಷಿಸಬಹುದು.

ಚರ್ಮಗಂಟು ರೋಗದಿಂದ ಜಾನುವಾರುಗಳಿಗೆ ರಕ್ಷಣೆ ಒದಗಿಸಲು ನೀಡಲಾಗುವ ಲಸಿಕೆ ಪರಿಣಾಮ ಬೀರಲು ಕನಿಷ್ಠ 2 ವಾರಗಳ ಕಾಲಾವಕಾಶ ಅಗತ್ಯವಿರುವುದರಿಂದ ಲಸಿಕೆ ನೀಡಿದಾಕ್ಷಣ ಆ ಜಾನು ವಾರು ಚರ್ಮಗಂಟು ರೋಗದಿಂದ ಪಾರಾಗಿದೆ ಎಂದು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಒಂದು ವೇಳೆ ಲಸಿಕೆ ನೀಡಿದ್ದರೂ ಕೂಡ ಆ ಜಾನುವಾರನ್ನು ಸ್ವತ್ಛ ಸ್ಥಳದಲ್ಲಿ ಇರಿಸಬೇಕು. ಸುತ್ತಮುತ್ತ ಕೆಸರು ಅಥವಾ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ರೋಗಕ್ಕೆ ಕಾರಣವಾಗಿರುವ ವೈರಸ್‌ಗಳು ಜಾನುವಾರುಗಳನ್ನು ಅತಿಯಾಗಿ ಕಾಡುವ ಸೊಳ್ಳೆ, ಉಣ್ಣೆ, ನೊಣಗಳಿಂದ ಹರಡುತ್ತವೆಯಾದ್ದರಿಂದ ಇವುಗಳಿಂದ ಜಾನುವಾರು­ಗಳನ್ನು ರಕ್ಷಿಸುವುದು ಅತೀ ಮುಖ್ಯವಾಗಿದೆ. ಇನ್ನು ಈಗಾಗಲೇ ರೋಗ ಪೀಡಿತವಾಗಿರುವ ಜಾನುವಾರುಗ­ಳೊಂದಿಗೆ ಇತರ ಹಸು, ರಾಸುಗಳನ್ನು ಕಟ್ಟುವುದಾಗಲಿ, ಮೇಯಲು ಬಿಡುವುದಾಗಲಿ ಸಲ್ಲದು. ಹಸು ಮತ್ತು ರಾಸುಗಳಲ್ಲಿ ರೋಗದ ಯಾವುದೇ ಲಕ್ಷಣ ಕಂಡುಬಂದರೂ ಆತಂಕಕ್ಕೊಳಗಾಗದೆ ಮತ್ತು ಲಸಿಕೆ ಕುರಿತ ವದಂತಿಗಳಿಗೆ ಕಿವಿಗೊಡದೆ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ. ಸರಕಾರ ಚರ್ಮಗಂಟು ರೋಗದ ನಿಯಂತ್ರಣ ಕ್ಕಾಗಿ ಪಶುಸಂಗೋ­ಪನ ಇಲಾಖೆ ಮೂಲಕ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಲು ಆಯಾ ಗ್ರಾಮಗಳ ಪಶು ಚಿಕಿತ್ಸಾಲಯಗಳಲ್ಲಿ ವ್ಯವಸ್ಥೆ ಮಾಡಿದೆ. ಹೈನುಗಾರರು ಇದನ್ನು ಬಳಸಿಕೊಳ್ಳಬೇಕು.

ಇವೆಲ್ಲದರ ನಡುವೆ ರಾಜ್ಯದ ಹಲವೆಡೆ ಅದರಲ್ಲೂ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು, ಸಿಬಂದಿ ಮತ್ತು ಲಸಿಕೆಯ ಕೊರತೆ ಇರುವ ಬಗೆಗೆ ಹೈನುಗಾರರು ಅಳಲು ತೋಡಿಕೊಳ್ಳತೊಡಗಿದ್ದಾರೆ. ಇತ್ತ ಸರಕಾರ ತುರ್ತು ಗಮನ ಹರಿಸಿ ಈ ಕೊರತೆಗಳನ್ನು ನಿವಾರಿಸಿ ಜಾನುವಾರುಗಳ ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next