Advertisement

32 ವರ್ಷಗಳ ಸುದೀರ್ಘ ಪಯಣ ಮುಗಿಸಿದ ನಾಗಿ!

01:27 PM Jan 11, 2022 | Suhan S |

ಸಾಗರ: ಹಸುಗಳ ಜಾತಿಯಲ್ಲಿ ಅತಿ ಹೆಚ್ಚಿನ ಆಯುಷ್ಯ ಹೊಂದಿರುವ ಹಳ್ಳಿಕಾರು ದನ ಗರಿಷ್ಠವೆಂದರೆ 22 ವರ್ಷ ಬದುಕುತ್ತದೆ ಎಂದು ಪಶು ವೈದು ಸಂಶೋಧನೆಗಳು ಹೇಳುವಾಗ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಕ್ರೆ ಸಮೀಪದ ಅನೆಗೊಳಿಯಲ್ಲಿನ ಒಂದು ದನ 32 ವರ್ಷದ ತುಂಬು ಬಾಳು ಕಂಡು ಭಾನುವಾರ ಇಹಲೋಕ ತ್ಯಜಿಸಿದೆ.

Advertisement

ಇಲ್ಲಿನ ಪರಿಸರ ಕಾರ್ಯಕರ್ತ ಅನೆಗೊಳಿ ಸುಬ್ರಾವ್ ಅವರ ಮನೆಯ ನಾಗಿ ಎಂಬ ಮಲೆನಾಡು ಗಿಡ್ಡ ದನ ತನ್ನ ವಯಸ್ಸಿನ ಜರ್ಜರಿತ ಕಾರಣದಿಂದ ಕೊನೆಯುಸಿರೆಳೆದಿದೆ. ವಿಚಿತ್ರ ಎಂದರೆ ಶನಿವಾರವಷ್ಟೇ ದನದ ಚಿಕಿತ್ಸೆಗೆ ಬಂದಿದ್ದ ಪಶು ವೈದ್ಯರು, ಈ ಸಂದರ್ಭದಲ್ಲೂ ನಾಗಿಯ ಒಂದೇ ಒಂದು ಹಲ್ಲು ಬೀಳದಿರುವುದನ್ನು ಕಂಡು ಅಚ್ಚರಿಗೊಳಗಾಗಿದ್ದರು.

32 ವರ್ಷಗಳಲ್ಲಿ 24 ಕರುಗಳನ್ನು ಹಾಕಿದ್ದ ನಾಗಿ ಸುಬ್ಬಣ್ಣ ಅವರ ಮನೆಯಲ್ಲಿಯೇ ಹುಟ್ಟಿದಂತದು. ಅದರ ತಾಯಿ ಮಂಜಿಯನ್ನು ಸುಬ್ರಾವ್ ಖರೀದಿಸಿ ತಂದ ಮೇಲೆ ನಾಗಿ ಜನನವಾಗಿತ್ತು. ‘ನಾಗಿ ಮಲೆನಾಡು ಗಿಡ್ಡ ಜಾತಿಯ ದನಗಳಲ್ಲಿ ಅಪರೂಪದ ತೀರಾ ಸಾತ್ವಿಕ ಗುಣ ಹೊಂದಿತ್ತು. ಬೇಲಿಗಳನ್ನು ಹಾರಿ ಹುಲ್ಲು ಮೇಯುವುದಿರಲಿ, ಮುಖ ಹಾಕುವ ಜಾಗ ಕಂಡರೂ ಹಸಿರು ಕದಿಯುವಂತದ್ದಾಗಿರಲಿಲ್ಲ. ಹಳ್ಳಿಕಾರು ಜಾತಿಯಲ್ಲಿ ಹಾಲು ಇಳುವರಿ ಕಡಿಮೆಯಾದರೂ, ನಾಗಿ ಮೂರೂವರೆ ಲೀಟರ್ ಹಾಲು ಕೊಡುತ್ತಿತ್ತು. ಒಂದು ತಿಂಗಳ ಹಿಂದೆ ಕೊಟ್ಟಿಗೆಯಲ್ಲಿ ಕಾಲು ಜಾರಿ ಬಿದ್ದು ಸಮಸ್ಯೆಗೊಳಗಾಗಿತ್ತು. ಆದರೆ ಚಿಕಿತ್ಸೆಯ ನಂತರ ಸುಧಾರಿಸಿಕೊಂಡಿತ್ತು. ನಿನ್ನೆಯಿಂದ ತಿಂಡಿ ತಿನ್ನುವುದನ್ನು ಬಿಟ್ಟದ್ದು ಹಾಗೆಯೇ ಜೀವ ಬಿಟ್ಟಿದೆ’ ಎಂದು ಅನೆಗೊಳಿ ಸುಬ್ರಾವ್ ನೆನಪಿಸಿಕೊಂಡರು. ನಾಗಿ ತಂಗಿ ಕೂಡ 27 ವರ್ಷಗಳ ಕಾಲ ಬದುಕಿ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next