ಚಡಚಣ: ಹೊರ್ತಿ ರೇವಣಸಿದ್ದೇಶ್ವರ ಜಾತ್ರೆಯಲ್ಲಿ ಜಾನುವಾರುಗಳ ಜಾತ್ರೆಯೂ ನಡೆಯುತ್ತಿದೆ. ಗ್ರಾಮದ ಇಂಚಗೇರಿ ರಸ್ತೆ ಮೈದಾನದಲ್ಲಿ ಸಮಾವೇಶಗೊಂಡ ಜಾನುವಾರುಗಳು ಎರಡು ದಿನ ಮುಂಚಿತವಾಗಿಯೇ ತಮ್ಮ ತಮ್ಮ ಸ್ಥಳದಲ್ಲಿ ಠಿಕಾಣಿ ಹೂಡಿವೆ.
ಜಾತ್ರಾ ಕಮಿಟಿಯವರು ಜಾನುವಾರುಗಳಿಗೆ ಸಕಲ ಸೌಲಭ್ಯ ಕಲ್ಪಿಸಿದ್ದಾರೆ. ಸುಮಾರು 15000ಕ್ಕೂ ಹೆಚ್ಚು ಜಾನುವಾರುಗಳು ಭಾಗಿಯಾಗಿ ಜಾತ್ರೆಗೆ ಮೆರುಗು ತಂದಿವೆ. ಆದರೆ ಮಾರಾಟ ಮಂದಗತಿಯಲ್ಲಿದ್ದು. ಮಾಲಿಕರಿಗೆ ಸಂಕಷ್ಟಕ್ಕೀಡು ಮಾಡಿದೆ.
ಈ ಸಲ ಅತಿವೃಷ್ಟಿಯಿಂದ ಜಾನುವಾರುಗಳಿಗೆ ಮೇವಿನ ಕೊರತೆಯಿದ್ದು ಮಾರಾಟ ಮಾಡಿ ನಿಶ್ಚಿಂತೆಯಿಂದ ಇರಬೇಕೆಂದ ರೈತನಿಗೆ ವ್ಯಾಪಾರವೇ ಇಲ್ಲದಂತಾಗಿದೆ. ಗ್ರಾಹಕರ ದಾರಿ ನೊಡುವ ಪರಿಸ್ಥಿತಿ ಎದುರಾಗಿದೆ. ಜಾತ್ರೆಯಲ್ಲಿ ಖರೀದಿದಾರರ ಕೊರತೆ ಎದ್ದು ಕಾಣುತ್ತಿದೆ. ಗೋಕಾಕ, ಮೂಡಲಗಿ, ಮುಂಬೆ, ಆಂಧ್ರಪ್ರದೇಶ, ರಾಯಚೂರು ಮುಂತಾದವುಗಳ ಕಡೆಯಿಂದ ಆಗಮಿಸುತ್ತಿದ್ದ ಗ್ರಾಹಕರು ಜಾತ್ರೆಯಲ್ಲಿ ಎದ್ದು ಕಾಣುತ್ತಿಲ್ಲ. ಹೀಗಾಗಿ ವ್ಯಾಪಾರ ಅಷ್ಟಕಷ್ಟೇ ಇದೆ. ಜಾತ್ರೆಯಲ್ಲಿ ನೀಳವಾದ ಶುಭ್ರವಾದ ಎರಡು ಹಲ್ಲಿನ ಹೋರಿಗಳಿಗೆ ಬೇಡಿಕೆ ಇದೆ. ಜೋಡಿಗೆ 1.30 ಲಕ್ಷ ರೂ.ಗೆ ಮಾರಾಟವಾಗಿ ಬೆರಗು ಮೂಡಿಸಿದೆ.
ಇದರಂತೆ ಉತ್ತಮ ತಳಿಯ ಎತ್ತುಗಳು ಜೋಡಿಗೆ 70 ಸಾವಿರ ಮಾರಾಟವಾಗಿವೆ. ಖೀಲಾರಿ ಆಕಳುಗಳು ಜೋಡಿಗೆ 30ರಿಂದ 35 ಸಾವಿರಕ್ಕೆ ಮಾರಾಟವಾಗಿ ಒಡೆಯನಿಗೆ ಸಂತೋಷ ತಂದಿವೆ. ಹಲ್ಲಿಲ್ಲದ ಹೋರಿಗಳು 15 ರಿಂದ 20 ಸಾವಿರಕ್ಕೆ ಮಾರಾಟವಾಗುತ್ತಿವೆ.
ಜಾತ್ರೆಯಲ್ಲಿ ವಿದ್ಯುತ್ ನೀರು, ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೊರೊನಾ ಹಿನ್ನೆಲೆ ಮೂಡಲಗಿ, ಗೋಕಾಕ, ಮುಂಬೈ, ಪ್ರಸಿದ್ಧ ವ್ಯಾಪಾರಿಗಳು ಖರೀದಿಗೆ ಬಂದಿಲ್ಲ. ವ್ಯಾಪಾರವೂ ಮಂದಗತಿಯಲ್ಲಿದೆ. ಎಲ್ಲರೂ ಶಾಂತತೆ ಕಾಪಾಡಿಕೊಂಡು ಜಾತ್ರೆಯನ್ನು ಯಶಸ್ವಿಗೊಳಿಸಬೇಕು.
-ಅಣ್ಣಪ್ಪ ಖೈನೂರ ಜಾತ್ರಾ ಕಮಿಟಿ ಅಧ್ಯಕ್ಷ
ಜಾನುವಾರುಗಳನ್ನು ಮಾರಾಟ ಮಾಡಲಿಕ್ಕೆ ಜಾತ್ರೆಗೆ ಬಂದಿದ್ದೇವೆ. ಆದರೆ ವ್ಯಾಪಾರ ಮಂದಗತಿಯಲ್ಲಿದ್ದು ನಮಗೆ ತೊಂದರೆಯಾಗುತ್ತಿದೆ. ಜಾತ್ರೆಯಲ್ಲಿ ಜಾನುವಾರುಗಳು ಅಪಾರ ಸಂಖ್ಯೆಯಲ್ಲಿ ಕೂಡಿದ್ದರೂ ವ್ಯಾಪಾರದ ಕೊರತೆ ಎದ್ದು ಕಾಣುತ್ತಿದೆ.
-ಮಲ್ಲಿಕಾರ್ಜುನ ದೇಗಿನಾಳ, ರೈತ