Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತ್ಯೇಕ ಪ್ರತಿಭಟನೆ

12:47 PM Mar 04, 2017 | Team Udayavani |

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಹಾಗೂ ಭಾರತೀಯ ಕಿಸಾನ್‌ ಸಂಘದ ಸದಸ್ಯರು ಶುಕ್ರವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

Advertisement

ತೀರ್ಪು ಮರುಪರಿಶೀಲಿಸಿ: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಬಡ್ತಿ ಮೀಸಲಾತಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರು ಮೌನ ಪ್ರತಿಭಟನೆ ನಡೆಸಿದರು.

ಎಸ್‌ಸಿ, ಎಸ್‌ಟಿ ಸಮುದಾಯದ ನೌಕರರ ಮುಂಬಡ್ತಿ ವಿಚಾರವಾಗಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಈ ಸಮುದಾಯದ ನೌಕರರ ಪಾಲಿಗೆ ಮರಣಶಾಸನವಾಗಿದೆ. ಸುಪ್ರೀಂಕೋರ್ಟ್‌ನ ತೀರ್ಪುನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮೀಸಲಾತಿ ಸೌಲಭ್ಯ ರದ್ದುಪಡಿಸುವ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ಕಲ್ಪಿಸದೆ, ಸಂವಿಧಾನಬದ್ಧವಾದ ಬಡ್ತಿ ಮೀಸಲಾತಿ ಹಕ್ಕನ್ನು ಕಲ್ಪಿಸುವ ಬಗ್ಗೆ ಕಾನೂನು ಹೋರಾಟ ನಡೆಸಬೇಕು.

ಈ ನಿಟ್ಟಿನಲ್ಲಿ ಬಡ್ತಿ ಮೀಸಲಾತಿ ಮಸೂದೆ ಜಾರಿಗೊಳಿಸುವ ಜತೆಗೆ ಸುಪ್ರೀಂಕೋರ್ಟ್‌ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ರಾಜಾಧ್ಯಕ್ಷ ದ್ಯಾವಪ್ಪನಾಯಕ, ಜಿಲ್ಲಾಧ್ಯಕ್ಷ ಶ್ರೀಧರ್‌ ಚಾಮುಂಡಿಬೆಟ್ಟ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಹುಣಸೂರು, ಜಿಲ್ಲಾ ಕಾರ್ಯದರ್ಶಿ ಸುರೇಶ್‌ ಕುಮಾರಬೀಡು ಇನ್ನಿತರರು ಭಾಗವಹಿಸಿದ್ದರು.

ಸರ್ಕಾರಕ್ಕೆ ಹಣ ಸಂಗ್ರಹ: ಪಡಿತರ ಚೀಟಿದಾರರಿಗೆ ಸಕ್ಕರೆ ನೀಡುವುದು ಅಸಾಧ್ಯವೆಂದು ಹೇಳಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಾಗೂ ಸರ್ಕಾರಕ್ಕೆ ಹಣ ಸಂಗ್ರಹಿಸಿಕೊಡುವ ಸಲುವಾಗಿ ಭಾರತೀಯ ಕಿಸಾನ್‌ ಸಂಘದ ಸದಸ್ಯರು, ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಎದುರು ಭಿಕ್ಷಾಟನೆ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

Advertisement

ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಂತೆ 30 ರೂ.ಗೆ 30 ಕೆ.ಜಿ. ಅಕ್ಕಿ, ಒಂದು ಕೆ.ಜಿ. ಸಕ್ಕರೆ, ರಾಗಿ, ಗೋಧಿ, ಸೀಮೆಎಣ್ಣೆ, ತಾಳೆ ಎಣ್ಣೆ ನೀಡುತ್ತೇವೆ ಎಂದು ಹೇಳಿತ್ತು. ಆದರೆ, ಈಗ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಹೀಗಾಗಿ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಅದರಂತೆ ಮುಂದಿನ ತಿಂಗಳಿನಿಂದ ಸಕ್ಕರೆ ವಿತರಣೆ ಮಾಡುವುದಿಲ್ಲವೆಂದು ಹೇಳಿರುವ ಸರ್ಕಾರ ಆ ಮೂಲಕ ಬಡ ರೈತಾಪಿ ವರ್ಗಕ್ಕೆ, ಎಸ್ಸಿ ಮತ್ತು ಎಸ್ಟಿ, ಹಿಂದುಳಿದ ವರ್ಗದವರಿಗೆ ತೊಂದರೆಯುಂಟು ಮಾಡಿದೆ.

ಅಲ್ಲದೆ ಸರ್ಕಾರದಲ್ಲಿ ಹಣ ಇಲ್ಲದಿರುವುದರಿಂದ ಭಾರತೀಯ ಕಿಸಾನ್‌ ಸಂಘ ದೇಣಿಗೆಯನ್ನು ಸಂಗ್ರಹಿಸಿ ಸರ್ಕಾರದ ಖಜಾನೆ ತುಂಬಿಸಲು ಮತ್ತು ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಭಿಕ್ಷಾಟನೆಯ ಮೂಲಕ ಸರ್ಕಾರದ ನಿಲುವನ್ನು ವಿರೋಧಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.  ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತ್ತೂರು, ತಾಲೂಕು ಕಾರ್ಯದರ್ಶಿ ಸೋಮಶೇಖರ್‌ ನಟರಾಜು, ರಮ್ಮನಹಳ್ಳಿ ನಾಗರಾಜು, ಶಿವರಾಜ್‌, ಗಿರೀಶ್‌ ಮಾದಾಪುರ, ಷಣ್ಮುಖ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next