Advertisement

ಮೃಗವಧೆಯ ಮೃಷ್ಟಾನ್ನ

09:29 PM Feb 21, 2020 | Lakshmi GovindaRaj |

ಈಶ್ವರನು ಶನಿಕಾಟದಿಂದ ಮುಕ್ತನಾದ ಸ್ಥಳ ಮತ್ತು ಶ್ರೀರಾಮನು ಮಾರೀಚ ಮೃಗವಧೆ ಮಾಡಿದ ಸ್ಥಳ ಎಂಬುದಾಗಿ ಸ್ಥಳಪುರಾಣವನ್ನು ಹೊಂದಿ, ನಾಡಿನ ಮೂಲೆಮೂಲೆಯಿಂದ ಭಕ್ತರನ್ನು ಆಕರ್ಷಿಸುವ, ಪ್ರಕೃತಿಯ ಮಡಿಲಲ್ಲಿ ಇರುವ ಪುಣ್ಯಧಾಮ ಮೃಗವಧೆ…

Advertisement

ತೀರ್ಥಹಳ್ಳಿ ತಾಲೂಕಿನ ಪುಟ್ಟ ಗ್ರಾಮ ಮೃಗವಧೆ. ಈಶ್ವರನು ಶನಿಕಾಟದಿಂದ ಮುಕ್ತನಾದ ಸ್ಥಳ ಮತ್ತು ಶ್ರೀರಾಮನು ಮಾರೀಚ ಮೃಗವಧೆ ಮಾಡಿದ ಸ್ಥಳ ಎಂಬುದಾಗಿ ಸ್ಥಳಪುರಾಣ ಹೊಂದಿ, ನಾಡಿನ ಮೂಲೆಮೂಲೆಯಿಂದ ಭಕ್ತರನ್ನು ಆಕರ್ಷಿಸುವ ಪುಣ್ಯಧಾಮ ಇದು.

ತೀರ್ಥಹಳ್ಳಿಯಿಂದ 25, ಕೊಪ್ಪದಿಂದ 18, ಶಿವಮೊಗ್ಗದಿಂದ 50 ಕಿ.ಮೀ. ದೂರದಲ್ಲಿದೆ. ಸರಿಯಾದ ಬಸ್‌ ವ್ಯವಸ್ಥೆ ಹಾಗೂ ಹೋಟೆಲ್‌ಗ‌ಳು ಇಲ್ಲದ ಕಾರಣ, ಮಧ್ಯಾಹ್ನದ ಊಟಕ್ಕೆ ಭಕ್ತಾದಿಗಳು ಪರದಾಡುವುದನ್ನು ಕಂಡಂಥ ಗ್ರಾಮದ ಹಿರಿಯರ ಮನಸ್ಸಿನಲ್ಲಿ ಅನ್ನಸಂತರ್ಪಣೆಯ ಯೋಚನೆ ಹಲವಾರು ಬಾರಿ ಬಂದರೂ, ಅದನ್ನು ಆರಂಭಿಸಿದ್ದು ದಿ||ಅನಂತಪದ್ಮನಾಭ ಭಟ್ಟರು, ದಿ|| ಸುಬ್ರಹ್ಮಣ್ಯಭಟ್ಟರು.

ತಾವೇ ಅಡುಗೆ ಮಾಡಿ ಬಡಿಸುವ ಇವರ ಉತ್ಸಾಹವನ್ನು ನೋಡಿ, ಸಂಚಾಲಕರಾದ ಎ.ಆರ್‌. ಉದಯಶಂಕರ್‌ ಅವರಿಗೂ ಸ್ಫೂರ್ತಿ ದೊರೆಯಿತು. ಮಲ್ಲಿಕಾರ್ಜುನ ಅಕ್ಷಯ ನಿತ್ಯ ಅನ್ನದಾನ ಸಮಿತಿಯ ಸ್ಥಾಪನೆಯೂ ಆಯಿತು. ಜಿ.ಎಸ್‌. ಚಿದಂಬರ ಗೌಡರ ಅಧ್ಯಕ್ಷತೆಯಲ್ಲಿ ನಿರಂತರ 14 ವರ್ಷಗಳಿಂದ ಮಧ್ಯಾಹ್ನದ ಅನ್ನಸಂತರ್ಪಣೆ ನಡೆಯುತ್ತಿದೆ.

ನಿತ್ಯ ಅನ್ನಸಂತರ್ಪಣೆ: ಸಾಂಪ್ರದಾಯಿಕ ಕಟ್ಟಿಗೆ ಒಲೆ ಮತ್ತು ಸಿಲಿಂಡರ್‌ ಗ್ಯಾಸ್‌ ಬಳಸಿ ಅಡುಗೆ ಮಾಡಲಾಗುತ್ತದೆ. ಪ್ರತಿನಿತ್ಯವೂ 150-200 ಜನ, ಶನಿ, ಭಾನು, ಸೋಮವಾರ­ಗಳಲ್ಲಿ 300ರಿಂದ 500 ಭಕ್ತಾದಿಗಳು ಅನ್ನಪ್ರಸಾದ ಸವಿಯುತ್ತಾರೆ. ಶ್ರಾವಣ ಶನಿವಾರ, ಕಾರ್ತಿಕ ಸೋಮವಾರ ರಥೋತ್ಸವ ಇತ್ಯಾದಿಗಳಲ್ಲಿ 2000 ಜನರ ತನಕ ಮಧ್ಯಾಹ್ನದ ಭೋಜನ ಸವಿದಿದ್ದಾರೆ. ಇಲ್ಲಿನ ಶುದ್ಧ ಮಲೆನಾಡ ಶೈಲಿಯ ಊಟಕ್ಕೆ ಸಾಕಷ್ಟು ಪ್ರಶಂಸೆ ಇದೆ.

Advertisement

ಚುರುಕು ಅಡುಗೆ: “ಇದು ಸಾಮಾನ್ಯ ಹಳ್ಳಿ. ಬೆಳಗ್ಗೆ ಬಂದ ಭಕ್ತರು ಮಧ್ಯಾಹ್ನ ಊಟಕ್ಕೆ ನಿಲ್ಲುತ್ತಾರೆ ಎಂದು ಹೇಳಲಾಗದು. ಕೆಲವೊಮ್ಮೆ 12.30ರ ನಂತರ ಬರುವ ನಾಲ್ಕಾರು ಬಸ್ಸುಗಳಲ್ಲಿ, ಭಕ್ತರು ಬರುವುದೂ ಉಂಟು. ಹಾಗೆ ಊಟದ ಹೊತ್ತಿನಲ್ಲಿ ಬಂದರೂ, ಅಡುಗೆ ತಯಾರಿ ಕಷ್ಟವೇನೂ ಆಗಿಲ್ಲ. ಮತ್ತೆ ಅಡುಗೆ ಮಾಡಿ, ಬಡಿಸಿದ ಉದಾಹರಣೆಗಳು ಇಲ್ಲಿ ಸಾಕಷ್ಟಿವೆ’ ಎನ್ನುತ್ತಾರೆ, ಅಡುಗೆ ಉಸ್ತುವಾರಿ ನೋಡಿಕೊಳ್ಳುವ ಎ.ವಿ. ವೆಂಕಟೇಶ್‌.

“ಹಾಲಿ ಭೋಜನಶಾಲೆಯಲ್ಲಿ ಒಮ್ಮೆಗೆ 300 ಜನ ಊಟ ಮಾಡಬಹುದು. ಹೊಸದಾಗಿ ನಿರ್ಮಾಣವಾಗಿ ಪೂರ್ಣ­ಗೊಳ್ಳುವ ಹಂತದಲ್ಲಿರುವ ಭೋಜನಶಾಲೆಯಲ್ಲಿ 400 ಭಕ್ತರು ಕೂರಬಹುದು’ ಎನ್ನುತ್ತಾರೆ, ಸಿಬ್ಬಂದಿ ಸಿ.ವಿ. ರವಿ.

ಹಳ್ಳಿಯ ತಾಜಾ ತರಕಾರಿ: ಇಲ್ಲಿನ ಇನ್ನೊಂದು ವಿಶೇಷ, ಮೃಗವಧೆ ಗ್ರಾಮದ ಮಹಿಳೆಯರು ಊಟ ಬಡಿಸಲು ಕೈಜೋಡಿಸುವುದು. ಭಕ್ತಾದಿಗಳು ಅಕ್ಕಿ, ತರಕಾರಿ, ತೆಂಗಿನಕಾಯಿ ಜೊತೆಗೆ ಹಣಕಾಸಿನ ನೆರವನ್ನೂ ನೀಡುವು­ದರೊಂದಿಗೆ, ಈ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿರುವುದು ಸಂತಸದ ವಿಚಾರವೇ ಆಗಿದೆ.

ಸಂಖ್ಯಾ ಸೋಜಿಗ
20- ಕಿಲೊ ಅಕ್ಕಿಯಿಂದ ಅನ್ನ
30- ಕಿಲೊ ತರಕಾರಿ ಬಳಕೆ
200- ಮಂದಿಗೆ ನಿತ್ಯ ಭೋಜನ (ಸರಾಸರಿ)
400- ಜನರ ಸಾಮರ್ಥ್ಯದ ಹೊಸ ಭೋಜನಶಾಲೆ
2000- ಮಂದಿಗೆ ಜಾತ್ರೆ ವೇಳೆ ಭೋಜನ

* ಅಭಿನಂದನ್‌ ಮೃಗವಧೆ

Advertisement

Udayavani is now on Telegram. Click here to join our channel and stay updated with the latest news.

Next