ಹಳಿಯಾಳ: ಅಂಧತ್ವ ನಿವಾರಣೆಯಲ್ಲಿ ರೋಟರಿ ಆಸ್ಪತ್ರೆ ಶಿಬಿರಗಳನ್ನು ಆಯೋಜಿಸಿ ಬಡವರಿಗೆ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯ ಸೌಲಭ್ಯ ಒದಗಿಸುತ್ತಾ ಬಂದಿದೆ ಹಾಗೂ ಇಂತಹ ಶಿಬಿರಗಳ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬೇಕು ಎಂದು ವಿಶ್ವ ಸೇವಾ ಸಮಿತಿ ರೋಟರಿ ಚಾರಿಟೇಬಲ್ ಆಸ್ಪತ್ರೆಯ ಸಂಯೋಜಕ ಗಿರೀಶ ಧಾರೇಶ್ವರ ಹೇಳಿದರು.
ಡಾ|ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಮತ್ತು ವಿಶ್ವ ಸೇವಾ ಸಮಿತಿ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ ಇವರ ಸಹಯೋಗದಲ್ಲಿ ಪಟ್ಟಣದಲ್ಲಿ ನಡೆದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಡಾ| ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.
ವಿ.ಆರ್.ಡಿಎಮ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಮೂಲಕ ಇದೇ ರೀತಿಯ ಶಿಬಿರಗಳನ್ನು ಆಯೋಜಿಸಿ 350 ಕ್ಕೂ ಹೆಚ್ಚು ಜನರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಸೌಲಭ್ಯ ಉಚಿತವಾಗಿ ಒದಗಿಸಲಾಗಿದೆ. ಶಿಬಿರಕ್ಕೆ ಶಿರಸಿಯ ವಿಶ್ವ ಸೇವಾ ಸಮಿತಿ ರೋಟರಿ ಆಸ್ಪತ್ರೆ ಸಹಕಾರ ನೀಡುತ್ತಾ ಬಂದಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನೇತ್ರ ತಜ್ಞರಾದ ಡಾ|ಎ.ಜಿ. ವಸ್ತ್ರದ, ನೇತ್ರ ತಜ್ಞರು, ನೇತ್ರಾಧಿಕಾರಿಗಳಾದ ತಾಜೂದ್ಧೀನ ಬಳ್ಳಾರಿ, ಸಿಬಿಡಿ ಆರೆÕಟಿಯ ಯೋಜನಾ ಸಂಯೋಜಕ ವಿನಾಯಕ ಚವ್ವಾಣ ಇದ್ದರು. ಆರ್ಸೆಟಿಯ ಉಪನ್ಯಾಸಕ ಮಂಜುನಾಥ ಲಕಮನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ 50 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಶಸ್ತ್ರ ಚಿಕಿತ್ಸೆಗಾಗಿ 20 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದವರಿಗೆ ಶಿರಸಿ ರೋಟರಿ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡಲಾಗುವುದು.