Advertisement

ಎಲ್ಲ ಪಕ್ಷಗಳಿಗೂ ತಲೆನೋವಾದ ಜಾತಿವಾರು ಟಿಕೆಟ್‌ ಡಿಮ್ಯಾಂಡ್‌

01:14 AM Mar 08, 2023 | Team Udayavani |

ಬೆಂಗಳೂರು: ಅತ್ತ ರಾಜಕೀಯ ಪಕ್ಷಗಳಲ್ಲಿ ವಿಧಾನಸಭೆ ಚುನಾವಣೆ ಟಿಕೆಟ್‌ ಹಂಚಿಕೆ ಕಸರತ್ತಿನ ನಡುವೆಯೇ ಸಮುದಾಯವಾರು “ಡಿಮ್ಯಾಂಡ್‌’ ನಾಯಕರಿಗೆ ತಲೆಬಿಸಿಯುಂಟುಮಾಡಿದೆ.

Advertisement

ಪ್ರಮುಖ ಸಮುದಾಯಗಳು ಹೆಚ್ಚು ಟಿಕೆಟ್‌ ಬಯಸಿದರೆ ಸಣ್ಣ ಸಮುದಾಯಗಳಿಂದ ನಮ್ಮನ್ನೂ ಗುರುತಿಸಿ ಟಿಕೆಟ್‌ ನೀಡಿ ಎಂಬ ಬೇಡಿಕೆ ಸಾಮಾನ್ಯವಾಗಿದೆ. ಅದರಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯ ಈ ಬಾರಿ ಹೆಚ್ಚು ಟಿಕೆಟ್‌ಗೆ ಬೇಡಿಕೆ ಇಟ್ಟಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಸಮುದಾಯದವರು ಹೆಚ್ಚಾಗಿ ಗೆದ್ದಿದ್ದರೆ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಬಹುದು ಎಂಬ ದೂರಾಲೋಚನೆ ಇದಕ್ಕೆ ಕಾರಣ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳಲ್ಲಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಮೊದಲಿನಿಂದಲೂ ಸಮುದಾಯವಾರು ಬೇಡಿಕೆಗೂ ಆದ್ಯತೆ ನೀಡಲಾಗುತ್ತಿದೆಯಾದರೂ ಒಕ್ಕಲಿಗ, ಲಿಂಗಾಯತ, ಕುರುಬ ಸಮುದಾಯಕ್ಕೆ ಸಿಂಹಪಾಲು ಹೋಗುತ್ತಿದೆ ಎಂಬ ಆಕ್ಷೇಪವೂ ಇದೆ.

ಕಾಂಗ್ರೆಸ್‌ಗೆ ತಲೆನೋವು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಟಿಕೆಟ್‌ ಹಂಚಿಕೆ ಬಗ್ಗೆ ಅಷ್ಟೇನೂ ಸಮಸ್ಯೆ ಇಲ್ಲ. ಆದರೆ, ಕಾಂಗ್ರೆಸ್‌ಗೆ ಅದೇ ದೊಡ್ಡ ತಲೆನೋವಾಗಿದೆ.

ಪರಿಶಿಷ್ಟ ಜಾತಿಯಲ್ಲಿ ಎಡಗೈ ಮತ್ತು ಬಲಗೈ ನಡುವೆ ಟಿಕೆಟ್‌ಗಾಗಿ ಅದರಲ್ಲೂ ಗೆಲ್ಲುವ ಕ್ಷೇತ್ರಗಳ ಟಿಕೆಟ್‌ಗೆ ಗುದ್ದಾಟ ನಡೆದಿದೆ. 2018ರ ಚುನಾವಣೆಯಲ್ಲಿ ಎಡಗೈ ಸಮುದಾಯಕ್ಕೆ 7 ಟಿಕೆಟ್‌ ನೀಡಲಾಗಿತ್ತು, ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲುವಂತಾಯಿತು. ಬಲಗೈ ಸಮುದಾಯಕ್ಕೆ 14 ಟಿಕೆಟ್‌ ನೀಡಿದ್ದು ಐವರು ಗೆಲ್ಲುವಂತಾಯಿತು. ಗೆಲ್ಲುವ ಕ್ಷೇತ್ರಗಳಲ್ಲಿ ಬಲಗೈ ಪಂಗಡಕ್ಕೆ ಕೊಟ್ಟು ಸೋಲುವ ಕ್ಷೇತ್ರದ ಎಡಗೈ ಸಮುದಾಯಕ್ಕೆ ಕೊಡಲಾಗಿತ್ತು . ನಾವು ಗೆಲ್ಲುವ ಕಡೆ ಬೋವಿ ಸಮುದಾಯಕ್ಕೆ ಟಿಕೆಟ್‌ ಕೊಡಲಾಗುತ್ತಿದೆ ಎಂಬ ಆರೋಪವೂ ಇದೆ.

Advertisement

ಹೀಗಾಗಿ, ಈ ಬಾರಿ ಗೆಲ್ಲುವ ಅವಕಾಶ ಇರುವ ಗೆಲ್ಲುವ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡುವಂತೆ ಎಡಗೈ ಸಮುದಾಯದ ನಾಯಕರು ಪಟ್ಟು ಹಿಡಿದಿದ್ದಾರೆ. ಎಡಗೈ-ಬಲಗೈ ಬೇಡಿಕೆ ನಾಯಕರಿಗೆ ತಲೆನೋವು ತಂದಿಟ್ಟಿದೆ. ಇದರ ಜತೆಗೆ ಕುರುಬ ಸಮುದಾಯ 2018 ರಲ್ಲಿ 18 ಟಿಕೆಟ್‌ ನೀಡಿದ್ದು ಈ ಬಾರಿ 20 ಕ್ಷೇತ್ರಗಳಿಗೆ ಡಿಮ್ಯಾಂಡ್‌ ಇಟ್ಟಿದೆ.

ಮುಸ್ಲಿಂ ಸಮುದಾಯ 2018ರಲ್ಲಿ 15 ಟಿಕೆಟ್‌ ನೀಡಲಾಗಿದ್ದು ಈ ಬಾರಿ 20 ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದೆ. ಹಿಂದುಳಿದ ಸಮುದಾಯದ ಬಿಲ್ಲವ, ಈಡಿಗ, ಕೋಲಿ, ಉಪ್ಪಾರ, ಮಡಿವಾಳ, ಸವಿತಾ, ತಿಗಳ, ಮರಾಠ, ಕ್ಷತ್ರಿಯ ಸೇರಿ ಸಣ್ಣ ಪುಟ್ಟ ಸಮುದಾಯಗಳು ಟಿಕೆಟ್‌ಗೆ ಬೇಡಿಕೆ ಇಟ್ಟಿವೆ.

ಪ್ರಬಲ ಸಮುದಾಯಕ್ಕೆ ಹೆಚ್ಚು ಟಿಕೆಟ್‌: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಸಮುದಾಯ ವಾರು ನಾಯಕರು ಬೇಡಿಕೆ ಇಡುವುದು ಕಡಿಮೆ. ಆದರೆ, ಪ್ರಬಲ ಸಮುದಾಯಕ್ಕೆ ಸಹಜ ವಾಗಿ ಪ್ರತಿ ಚುನಾವಣೆಯಲ್ಲಿ ಟಿಕೆಟ್‌ ನೀಡಲಾಗುತ್ತಿದೆ.

ಆದರೆ, ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಹೆಚ್ಚು ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಇದ್ದು ಅದು ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಬಿಸಿತುಪ್ಪವಾಗಿಯೂ ಪರಿಣಮಿಸಿದೆ.

ಉಳಿದಂತೆ ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಬಿಜೆಪಿ ಗೆಲ್ಲುವ ಸಾಮರ್ಥ್ಯವನ್ನೇ ಮಾನದಂಡವಾಗಿ ಪರಿಗಣಿಸುವು ದರಿಂದ ಇಂತಹ ಸಮುದಾಯಕ್ಕೆ ಇಂತಿಷ್ಟೇ ನೀಡಬೇಕು ಎಂಬ ಬೇಡಿಕೆಗೆ ಮಣೆ ಹಾಕುವುದು ಕಡಿಮೆಯೇ ಎನ್ನಬಹುದು. 2018ರಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರು, ಬಂಟ್ಸ್‌ , ಈಡಿಗ- ಬಿಲ್ಲವ, ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ ನೀಡಲಾಗಿತ್ತು.

ಜೆಡಿಎಸ್‌ ತಂತ್ರ: ಜೆಡಿಎಸ್‌ನಲ್ಲಿ ಒಕ್ಕಲಿಗ ಸಮು ದಾಯಕ್ಕೆ ಹೆಚ್ಚು ಟಿಕೆಟ್‌ ನೀಡಲಾಗುತ್ತದೆಯಾದರೂ ಲಿಂಗಾಯತ ಹಾಗೂ ಹಿಂದುಳಿದ ಮತ್ತು ಮುಸ್ಲಿಂ ಸಮುದಾಯಕ್ಕೂ ಟಿಕೆಟ್‌ ನೀಡಲಾಗುತ್ತಿದೆ. ಈ ಬಾರಿ 20 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಇದೆ. ಮೊದಲ ಪಟ್ಟಿಯಲ್ಲಿ ಐದು ಮಂದಿಗೆ ಟಿಕೆಟ್‌ ಘೋಷಿಸಲಾಗಿದೆ.

ಕಾಂಗ್ರೆಸ್‌ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ಎಷ್ಟು ಟಿಕೆಟ್‌ ನೀಡುತ್ತದೆ ಎಂಬುದು ನೋಡಿಕೊಂಡು ಜೆಡಿಎಸ್‌ ಪೈಪೋಟಿ ಎಂಬಂತೆ ಆ ಸಮುದಾ ಯಕ್ಕೆ ಹೆಚ್ಚು ಟಿಕೆಟ್‌ ನೀಡಲು ಕಾರ್ಯತಂತ್ರ ರೂಪಿಸಿದೆ.

ಬಿಜೆಪಿಯಲ್ಲಿ 2018 ರಲ್ಲಿ ಲಿಂಗಾಯತರಿಗೆ 60 ಒಕ್ಕಲಿಗರು -ರೆಡ್ಡಿ ಸೇರಿ 30, ಬಂಟ್ಸ್‌-7, ಈಡಿಗ- ಬಿಲ್ಲವ-10, ಟಿಕೆಟ್‌ ನೀಡಲಾಗಿತ್ತು. ಒಕ್ಕಲಿಗರು 9, ರೆಡ್ಡಿ-2 ಕಾಪು ರೆಡ್ಡಿ-2, ಕಮ್ಮ ರೆಡ್ಡಿ-1, ಲಿಂಗಾಯತ-2, ಪಂಚಮಸಾಲಿ-11, ಸಾದರ ಲಿಂಗಾಯತ-6, ಜಂಗಮ ಲಿಂಗಾಯತ-2, ನೊಣಬ ಲಿಂಗಾಯತ-2, ರೆಡ್ಡಿ ಲಿಂಗಾಯತ-5 ಗಾಣಿಗ ಲಿಂಗಾಯತ ಒಬ್ಬರು, ಬಂಟ್ಸ್‌- 5, ಈಡಿಗ, ಬಿಲ್ಲವ-ಮೊಗವೀರ- 6 , ಬ್ರಾಹ್ಮಣ- 5 ಮಂದಿ ಗೆದ್ದಿದ್ದರು.

-ಎಸ್‌.ಲಕ್ಷ್ಮೀನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next