ದಾವಣಗೆರೆ: ಜಾತಿ ಹೋಗಬೇಕು ಎಂಬುದು ಆಶಯ. ಆದರೆ, ಯಾವುದೇ ಕಾರಣಕ್ಕೂ ಜಾತಿ ಎಂಬುದು ಹೋಗುವುದೇ ಇಲ್ಲ ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು.
ಭಾನುವಾರ ಬಾಪೂಜಿ ಇಂಜಿನಿಯರಿಂಗ್ ಕಾಲೇಜು (BIET)ನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನ ದಲ್ಲಿ ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ ಆಯೋಜಿಸಲಾಗಿದ್ದ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 75 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. ೮೦ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೇ ಶಿಕ್ಷಣವಂತ, ವ್ಯಾಪಾರ, ವಹಿವಾಟು, ಸರ್ಕಾರಿ ಹುದ್ದೆಯಲ್ಲಿದ್ದರೂ ಏನೇ ಆದರೂ ಜಾತಿ ಎಂಬುದು ಜತೆ ಜತೆಯಾಗಿಯೇ ಬರುತ್ತದೆ. ಜಾತಿ ಎಂಬುದು ಎಂದೆಂದಿಗೂ ಹೋಗುವುದೇ ಇಲ್ಲ ಎಂದರು.
ಇಂದಿನ ಸಮಾರಂಭದಲ್ಲಿ ಅನೇಕ ಮಕ್ಕಳು ಶೇ. 97 ರಷ್ಟು ಅಂಕ ಪಡೆದು, ಪ್ರತಿಭಾ ಪುರಸ್ಕಾರವನ್ನೂ ಪಡೆದಿ ದ್ದಾರೆ. ಅಂದ ಮಾತ್ರಕ್ಕೆ ಜಾತಿ ಹೋಗುತ್ತಾದಾ ಎಂಬ ಪ್ರಶ್ನೆ ಹಾಕಿಕೊಂಡರೆ ಹೋಗುವುದೇ ಇಲ್ಲ. ಶೇ. 97 ರಷ್ಟು ಅಂಕ ಪಡೆದಿದ್ದರೂ ಅವರನ್ನು ಛಲವಾದಿ…ಎಂದೇ ಗುರುತಿಸಲಾಗುತ್ತದೆ. ಜಾತಿ ಹೋಗುತ್ತದಾ, ಜಾತಿ ಹೋಗುವ ಬದಲಾವಣೆ ಆಗುತ್ತದೆ ಎಂಬ ನಂಬಿಕೆಯೇ ನನಗೆ ಹೊರು ಹೋಗಿದೆ ಎಂದು ಬೇಸರಿಸಿದರು.
ನಮ್ಮನ್ನು ಜಾತಿ ವ್ಯವಸ್ಥೆಯಲ್ಲಿ ಹೇಗೆ ಒಡೆದು ಹಾಕಿದ್ದಾರೆ. ಇತಿಹಾಸದಲ್ಲಿ ಇನ್ನೆಂದು ಒಂದಾಗದಷ್ಟು ಒಡೆದು ಹಾಕಿದ್ದಾರೆ. ಶಿಕ್ಷಣದಿಂದಲೇ ಬದಲಾವಣೆ, ಪ್ರಶ್ನಿಸುವ ಮನೋಭಾವ ಬರುತ್ತದೆ. ಹಾಗಾಗಿ ನಾವು ಶಿಕ್ಷಣಕ್ಕಾಗಿ ಹೊಡೆದಾಡಬೇಕು ಎಂದು ತಿಳಿಸಿದರು.
ಸರ್ಕಾರದ ಮಟ್ಟದಲ್ಲೂ ಬಹಳಷ್ಟು ಬದಲಾವಣೆ ಆಗಬೇಕು. ಇಡೀ ದೇಶದಲ್ಲೇ ಮೊದಲ ಬಾರಿಗೆ ಜನಸಂಖ್ಯೆ ಗೆ ಅನುಗುಣವಾಗಿ ಆಯ-ವ್ಯಯದಲ್ಲಿ ಶೇ. 24.1 ಭಾಗ ಅನುದಾನವನ್ನ ಮೀಸಲಿಡುವ, ಬಳಕೆ ಮಾಡುವ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಸಿದ್ದರಾಮಯ್ಯ ಅವರು ಮಾಡಿದ್ದಾರೆ.8-9 ಸಾವಿರ ಕೋಟಿ ಅನುದಾನ ಸಿಗು ತ್ತಿದ್ದ ಕಡೆ 42 ಸಾವಿರ ಕೋಟಿಯಷ್ಟು ಸಿಗುತ್ತಿದೆ. ಎಸ್‌ಸಿಪಿ, ಟಿಎಸ್‌ಪಿಯಡಿ7 ಸಿ ನಿಯಮದಡಿ ಬೇರೆ ಬೇರೆ ಇಲಾಖೆ ಅನುದಾನವನ್ನ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಕ್ಕೆ ಖರ್ಚು ಮಾಡಿದರೂ ಬಿಜೆಪಿಯವರು ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬೇರೆ ಕಡೆ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದರು.
ಹುದ್ದೆಗಳ ಬಡ್ತಿ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯವೇ ಮೀಸಲಾತಿಗೆ ಆದೇಶ ನೀಡಿದ್ದರೂ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಮೀಸಲಾತಿ ಆಧಾರದಲ್ಲಿ ಬಡ್ತಿ ನೀಡಲು ಒಪ್ಪಿಕೊಳ್ಳಲು ತಯಾರೇ ಇರಲಿಲ್ಲ. ಸರ್ಕಾರದ ಹಂತದಲ್ಲೂ ಒಂದಷ್ಟು ಬದಲಾವಣೆ ಆಗಬೇಕು ಎಂದು ಪ್ರತಿಪಾದಿಸಿದರು.
ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ
ಛಲವಾದಿ ಸಮಾಜದ ಚಿತ್ರದುರ್ಗದ ವೀರ ಮಹಿಳೆ ಒನಕೆ ಓಬವ್ವನ ಹೆಸರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾ ವೇಶವನ್ನ ಬೆಂಗಳೂರಿನಲ್ಲಿ ಅಕ್ಟೋಬರ್ ಇಲ್ಲವೇ ನವಂಬರ್‌ನಲ್ಲಿ ನಡೆಸಲಾಗುವುದು. ಇತಿಹಾಸದಲ್ಲೇ ಇನ್ನು ಎಂದೆಂದಿಗೂ ಆಗದಂತಹ ಅತೀ ದೊಡ್ಡ ಸಮಾವೇಶ ನಡೆಸಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು.