Advertisement

ಆರ್ಥಿಕವಾಗಿ ಸಶಕ್ತರಾದರೆ ಜಾತಿ ವಿನಾಶ

12:38 PM Mar 24, 2019 | Lakshmi GovindaRaju |

ಬೆಂಗಳೂರು: ಎಲ್ಲ ಸಮುದಾಯಗಳೂ ಆರ್ಥಿಕವಾಗಿ ಸಬಲರಾದಾಗ ಜಾತಿಯ ವಿನಾಶ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಶನಿವಾರ ನಗರದ ಗಾಂಧಿ ಭವನದಲ್ಲಿ ಡಾ.ರಾಮಮನೋಹರ ಲೋಹಿಯಾ ಸಮತಾ ವಿಶ್ವವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಗಾಂಧಿ ಅಧ್ಯಯನ ಕೇಂದ್ರ ವತಿಯಿಂದ ಆಯೋಜಿಸಿದ್ದ “ಲೋಹಿಯಾ ದಿನಾಚರಣೆ ಹಾಗೂ ಇಂದಿಗೂ ಬೇಕಾದ ಲೋಹಿಯಾ ಪುಸ್ತಕ ಬಿಡುಗಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತಿ ಚಲನೆಯಿಲ್ಲದ ವ್ಯವಸ್ಥೆಯಾಗಿದೆ. ಮುಖ್ಯವಾಗಿ ದಲಿತ, ಹಿಂದುಳಿದ ಹಾಗೂ ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಈ ವ್ಯವಸ್ಥೆ ನಾಶವಾಗುತ್ತದೆ ಎಂದರು.

ರಾಮಮನೋಹರ ಲೋಹಿಯಾ ತಮ್ಮ ಬದುಕಿನಲ್ಲಿ ದೇಶಕ್ಕೆ ಬೇಕಾದ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಸಿದ್ಧಾಂತಗಳನ್ನು ಜನರ ಮುಂದಿಟ್ಟಿದ್ದಾರೆ. ಜಾತಿ, ವರ್ಗ, ಲಿಂಗ ತಾರತಮ್ಯ, ರೈತರು, ಮಹಿಳೆಯರು ಹೀಗೆ ಎಲ್ಲ ವಿಧಾನಗಳಲ್ಲಿಯೂ ಸಮಗ್ರವಾದ, ಆಳವಾದ ಅಧ್ಯಯನ ನಡೆಸಿ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ಕಾಡುತ್ತಿರುವ ಹಲವು ಸಮಸ್ಯೆಗಳ ನಿವಾರಣೆಗೆ ತಮ್ಮದೇ ಆದ ಸಿದ್ಧಾಂತಗಳ ಮೂಲಕ ಪರಿಹಾರ ಕಂಡುಕೊಳ್ಳಲು ನೆರವಾದ ಅಪರೂಪದ ರಾಜಕಾರಣಿ. ಲೋಹಿಯಾ ಚಿಂತನೆಗಳು ಇಂದಿನ ಸರಕಾರದ ಆಡಳಿತಕ್ಕೂ ಪೂರ್ವಕವಾಗಿದೆ ಎಂದು ಹೇಳಿದರು.

Advertisement

ಇಂದು ಕೆಳವರ್ಗದವರಂತೆ ಮೇಲ್ವರ್ಗದಲ್ಲಿನ ಹೆಣ್ಣು ಮಕ್ಕಳೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರಿಗೆ ಸಮಾನವಾದ ಮೀಸಲಾತಿ ಅಗತ್ಯವಿದೆ. ಪಂಚಾಯತ್‌ ಚುನಾವಣೆಯಲ್ಲಿ ಶೇ.50 ರಷ್ಟು ಮೀಸಲಾತಿಯಿದೆ. ಅದೇ ರೀತಿ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮೀಸಲಾತಿ ನೀಡುವ ಸಂಬಂಧ 1996-97 ರಲ್ಲಿ ಕಾಯ್ದೆ ಮಾಡಿದ್ದರೂ, ಅದು ಜಾರಿಯಾಗದಿರುವುದು ದುರಂತ ಎಂದರು.

ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್‌, ಬರಹಗಾರ ನಟರಾಜ್‌ ಹುಳಿಯಾರ್‌, ಸಚಿವ ಬಿ.ಝಡ್‌.ಜಮೀರ್‌ ಅಹಮದ್‌ ಖಾನ್‌, ನೆಲಸಿರಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಬಸವರಾಜು, ಸಮತಾ ವಿದ್ಯಾಲಯ ಅಧ್ಯಕ್ಷ ಪ್ರೊ. ಕೆ. ದೊರೈರಾಜು ಮತ್ತಿತರರು ಉಪಸ್ಥಿತರಿದ್ದರು.

ಅಧಿಕಾರಿಗಳ ವಿರುದ್ಧ ಹೋರಾಟಕ್ಕಿಳಿಯುವೆ: ಭೂ ಸುಧಾರಣಾ ಕಾಯ್ದೆ ಸರಿಯಾಗಿ ಜಾರಿಯಾಗಿಲ್ಲ. ಇವತ್ತಿಗೂ ರೈತರಿಗೆ ಭೂಮಿ ಪಹಣಿ ಲಭ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಈ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿಂದೆ ನಾನು ಮಂತ್ರಿಯಾಗಿದ್ದ ವೇಳೆ ಕಡ್ಡಾಯ ಕ್ರಮವಹಿಸಿದ್ದೆ. ಆದರೆ, ಇಂದು ವ್ಯವಸ್ಥೆ ಅದಗೆಟ್ಟಿದೆ. ಭಾಷಣದಿಂದ ಏನೂ ಮಾಡೋಕೆ ಆಗಲ್ಲ ಎಂದ ಅವರು ಹೋರಾಟವೇ ಎಲ್ಲದಕ್ಕೂ ಪರಿಹಾರವಾಗಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next