Advertisement

ಬಿಜೆಪಿ ಹಿನ್ನಡೆಗೆ ಜಾತಿ ಸಂಘರ್ಷ ಕಾರಣ?

12:56 AM Jan 02, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈಚೆಗೆ ನಡೆದ ವಿವಿಧ ಚುನಾವಣೆಗಳಲ್ಲಿ ಆಡಳಿತ ಪಕ್ಷ ಬಿಜೆಪಿ ಹಿನ್ನಡೆ ಅನುಭವಿ
ಸಲು ವೀರಶೈವ ಲಿಂಗಾಯತ ಸಮುದಾಯದ ಒಳಜಾತಿಗಳ ನಡುವಿನ ಸಂಘರ್ಷ ಕಾರಣವೇ? ಇಂಥದ್ದೊಂದು ಚರ್ಚೆ ಈಗ ಬಿಜೆಪಿ ಪಡಸಾಲೆಯಲ್ಲಿ ದಟ್ಟವಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೆಲವು ಹಿರಿಯ ಸಚಿವರ ನಡುವೆ ಗಂಭೀರ ಚರ್ಚೆ ನಡೆದಿದೆ.

Advertisement

ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಹೊಸ ವರ್ಷದ ಶುಭಾಶಯ ಕೋರಲು ಮುಖ್ಯಮಂತ್ರಿ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಡಾ| ಅಶ್ವತ್ಥನಾರಾಯಣ ಸೇರಿದಂತೆ ಹಿರಿಯ ಸಚಿವರು ಅವರ ನಿವಾಸ ಕಾವೇರಿಗೆ ತೆರಳಿ ಶುಭಾಶಯ ಕೋರಿದ ಸಂದರ್ಭಲ್ಲಿ ಈ ಬಗ್ಗೆ ಪ್ರಸ್ತಾವವಾಗಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ನಡೆದ ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಚುನಾವಣೆ, ಆ ನಂತರ ನಡೆದ ಹಾನಗಲ್‌ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಹಾಗೂ ನಗರ ಸ್ಥಳೀಯ
ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿಸಿದಷ್ಟು ಸ್ಥಾನಗಳು ದೊರೆತಿಲ್ಲ ಎನ್ನುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:ತಿರುಮಲದ ಈ ಸೇವೆಗೆ 1.5 ಕೋಟಿ ರೂ.! ಇದು ಜಗತ್ತಿನಲ್ಲೇ ಅತ್ಯಂತ ದುಬಾರಿ ಸೇವೆ

ಫ‌ಲಿತಾಂಶ ಹೀಗೇಕಾಯ್ತು
ಯಡಿಯೂರಪ್ಪ ಅನೌಪಚಾರಿಕವಾಗಿ ಚುನಾವಣೆ ಫ‌ಲಿತಾಂಶದ ಕುರಿತು ಪ್ರಸ್ತಾವಿಸಿದರು ಎನ್ನಲಾಗಿದೆ. ಈ ಹಿಂದೆ ಲಿಂಗಾಯತ ಸಮುದಾಯ ಎಂದರೆ ಒಂದು ಎನ್ನುವ ಭಾವನೆ ಇತ್ತು. ಈಚೆಗೆ ಒಳ ಪಂಗಡಗಳ ಹೆಸರಿನಲ್ಲಿ ಮಠಗಳು ಸ್ಥಾಪನೆಯಾಗಿದ್ದು, ಆಯಾ ಪಂಗಡಗಳ ನಾಯಕರು ತಮ್ಮವರದೇ ನಾಯಕತ್ವಕ್ಕಾಗಿ ಸಮುದಾಯದಲ್ಲಿಯೇ ಪೈಪೋಟಿ ನಡೆಸುತ್ತಿದ್ದಾರೆ. ಇದರಿಂದ ಲಿಂಗಾಯತ ಮತಗಳು ವಿಭಜನೆಯಾಗುತ್ತಿವೆ ಎನ್ನಲಾಗಿದೆ. ಪಂಚಮಸಾಲಿ ಉಪ ಪಂಗಡಕ್ಕೆ 2ಎ ಮೀಸಲಾತಿ ಕಲ್ಪಿಸಲು ವಿಳಂಬವಾಗುತ್ತಿರುವುದರಿಂದ ಆ ಸಮುದಾಯ ಬಿಜೆಪಿಯಿಂದ ದೂರ ಸರಿಯುತ್ತಿದೆ ಎಂಬ ಅಭಿಪ್ರಾಯವೂ ಇದೆ. ಈ ಬೆಳವಣಿಗೆ ಉತ್ತರ ಕರ್ನಾಟಕ ಭಾಗದ ನಾಯಕತ್ವಕ್ಕೂ ಪೆಟ್ಟು ನೀಡಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ದಲಿತರದೂ ಇದೇ ಕಥೆ
ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಅನಂತರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತರೂ ಎಡ, ಬಲ ಎಂಬ ಒಳ ಪಂಗಡದಲ್ಲಿ ಹರಿದು ಹಂಚಿ ಹೋಗಿದ್ದು, ನಾಯಕನ ಪ್ರತಿಷ್ಠೆಯಿಂದಾಗಿ ದಲಿತ ಸಮುದಾಯ ಒಗ್ಗಟ್ಟು ಕಳೆದುಕೊಂಡಿದ್ದು, ಆ ಕಾರಣಕ್ಕಾಗಿ ರಾಜ್ಯದಲ್ಲಿ ದಲಿತ ನಾಯಕತ್ವಕ್ಕೆ ಬೆಲೆ ಸಿಗದಂತಾಗಿದೆ ಎಂಬ ಅಭಿಪ್ರಾಯವನ್ನು ಹಿರಿಯ ಸಚಿವರು ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next