Advertisement

Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ

12:46 AM Oct 18, 2024 | Team Udayavani |

ಬೆಂಗಳೂರು: ಜಾತಿಗಣತಿ ವರದಿ ಅನುಷ್ಠಾನಕ್ಕೆ ದೃಢ ಮನಸ್ಸು ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಈಗ ಪ್ರಬಲ ಜಾತಿಯ ನಾಯಕರು ಹಾಗೂ ಮುಖಂಡರ ಜತೆಗೆ ಚರ್ಚೆಗೆ ಮುಂದಾಗಿದ್ದು, ರವಿವಾರ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರ ಜತೆಗೆ ಮಹತ್ವದ ಸಭೆಯನ್ನು ಆಯೋಜಿಸಿದ್ದಾರೆ.

Advertisement

ಈ ಮಧ್ಯೆ ಜಾತಿಗಣತಿ ಅನುಷ್ಠಾನಕ್ಕೆ ಅಖೀಲ ಭಾರತ ವೀರಶೈವ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅ. 22ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ಆಯೋಜಿಸಿದೆ.

ಜಾತಿಗಣತಿ ವರದಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಇದೇ ತಿಂಗಳು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಹೀಗಾಗಿ ಎಲ್ಲ ಸಮುದಾಯ ದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ. ರವಿವಾರ ಬೆಳಗ್ಗೆ ಲಿಂಗಾಯತ ಸಚಿವರು ಹಾಗೂ ಶಾಸಕರ ಜತೆಗೆ ಸಂಜೆ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರ ಜತೆಗೆ ಅವರು ಸಭೆ ಆಯೋಜಿಸಿದ್ದಾರೆ. ಈ ಎರಡೂ ಸಮುದಾಯಗಳು ಜಾತಿಗಣತಿ ವರದಿ ಜಾರಿಗೆ ಈಗಾಗಲೇ ವಿರೋಧ ವ್ಯಕ್ತಪಡಿಸಿವೆ.ಹೀಗಾಗಿ ಸಿಎಂ ಕಚೇರಿಯಲ್ಲಿ ನಡೆಯುವ ಈ ಸಭೆಗೆ ಮಹತ್ವ ಲಭಿಸಿದೆ.

ವಿರೋಧ ಸ್ಫೋಟ
ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಅಖೀಲ ಭಾರತ ವೀರಶೈವ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯ ಘಟಕದ ಅಧ್ಯಕ್ಷ ಶಂಕರ ಮಹಾದೇವ ಬಿದರಿ ಜತೆಯಾಗಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ತೆರಳಿ ವರದಿ ಅನುಷ್ಠಾನದಿಂದ ಸಮುದಾಯದ ಮೇಲೆ ಆಗುವ ಪರಿಣಾಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಈ ವರದಿ ಅನುಷ್ಠಾನ ಬೇಡ ಎಂಬ ನಿಲುವಿಗೆ ಮಹಾಸಭಾ ಬಂದಿದೆ.

ಈ ಹಿನ್ನೆಲೆಯಲ್ಲಿ ಅ. 22ರಂದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದೆ. ಈ ವರದಿಯನ್ನು ಅವೈಜ್ಞಾನಿಕ ಎಂದು ಸಮುದಾಯ ಪರಿಗಣಿಸಿದ್ದು, ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಸಭೆಗೆ ಆಹ್ವಾನಿಸುವಂತೆ ಉಭಯ ನಾಯಕರಿಗೆ ಆಹ್ವಾನ ನೀಡಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರೂ ಆಗಿರುವ ಶಾಮನೂರು ಶಿವಶಂಕರಪ್ಪ ಜಾತಿಗಣತಿ ಅನುಷ್ಠಾನಕ್ಕೆ ವಿರುದ್ಧವಾದ ಹೋರಾಟದ ಮುಂಚೂಣಿಯಲ್ಲಿ ನಿಂತಿರುವುದರಿಂದ ಕುತೂಹಲ ಸೃಷ್ಟಿಯಾಗಿದೆ. ಕಾಂಗ್ರೆಸ್‌ನ ಒಕ್ಕಲಿಗ ಹಾಗೂ ಲಿಂಗಾಯತ ಶಾಸಕರು ಹೇಗೆ ಪ್ರತಿಕ್ರಿಯಿಸಲಿದ್ದಾರೆಂಬುದು ಮಹತ್ವ ಪಡೆದಿದೆ.

Advertisement

ಪಂಚಮಸಾಲಿಗಳ ಜತೆ ಇಂದು ಸಿಎಂ ಸಭೆ
2ಎ ಮೀಸಲು ಹೋರಾಟಕ್ಕೆ ಸಂಬಂಧಿಸಿ ಪಂಚಮಸಾಲಿ ಸಮುದಾಯದ ಶಾಸಕರು ಹಾಗೂ ಮುಖಂಡರ ನಿಯೋಗ ಶುಕ್ರವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದು, 11 ಗಂಟೆಗೆ ಸಭೆ ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next