Advertisement

ಜಾತಿ ಗಣತಿ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ

10:19 PM Sep 08, 2021 | Team Udayavani |

ಬೆಂಗಳೂರು: ‘ಎಲೆಕ್ಷನ್‌’ ಬಂದಾಗ ಯಾವುದೋ ಒಂದು ವಿಷಯದ ಆಯ್ಕೆ ಮಾಡಿಕೊಂಡು ಪ್ರಚಾರ ಗಿಟ್ಟಿಸುವುದು ಸರಿಯಲ್ಲ. ಅಧಿಕಾರ ಇದ್ದಾಗಲೇ ಸಲ್ಲಿಕೆಯಾಗಿದ್ದ ಈ ವರದಿಯನ್ನು ಬಿಡುಗಡೆ ಮಾಡಲು ನಿರ್ಲಕ್ಷ್ಯ ತೋರಿದ್ದು ಯಾಕೆ ಎಂದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಸಂಬಂಧ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕುಟುಕಿದ್ದಾರೆ.

Advertisement

ಸರಣಿ ಟ್ವೀಟ್‌ಗಳನ್ನು ಮಾಡಿದ ಅವರು, ಕುದುರೆ ಇದ್ದಾಗಲೇ ಏರಲಿಲ್ಲ, ಇನ್ನೊಬ್ಬರು ಕುದುರೆ ಮೇಲಿದ್ದಾಗ ಅವರನ್ನು ಕೆಳಕ್ಕೆ ಕೆಡವಲು ಏಕೀ ಕೆಟ್ಟ ಉತ್ಸಾಹ? ರಾಜಕಾರಣದಲ್ಲಿ ಕ್ಷಣಕ್ಕೊಂದು ಬಣ್ಣ ಬದಲಿಸಿಕೊಂಡು ಓಡಾಡುವವರ ಬಗ್ಗೆ ನನಗೆ ಗೊತ್ತಿದೆ. ಇವರು ರಾಜಕೀಯ ಊಸರವಳ್ಳಿಗಳು, ಜನರ ಪಾಲಿನ ಮಗ್ಗುಲ ಮುಳ್ಳುಗಳು! ಮುಳ್ಳನ್ನು ಹೇಗೆ ತೆಗೆಯಬೇಕು ಎಂಬುದು ಜನರಿಗೆ ಗೊತ್ತಿದೆ, ಆ ಕಾಲವೂ ಹತ್ತಿರದಲ್ಲೇ ಇದೆ ಎಂದು ಹೇಳಿದ್ದಾರೆ.

ಇವರು ಅಧಿಕಾರದಲ್ಲಿದ್ದಾಗಲೇ ಕಾಂತರಾಜು ಆಯೋಗದ ವರದಿಯು ಬಂದಿತ್ತು ಆಗಲೇ ಅಂಗೀಕರಿಸಿ ಬಿಡುಗಡೆ ಮಾಡಬಹುದಿತ್ತಲ್ಲ? ಹಾಗೆ ಮಾಡಲಿಲ್ಲ, ಯಾಕೆ? ಅವಕಾಶ ಇದ್ದಾಗ ಮಾಡದೇ ಈಗ ಆಷಾಢಭೂತಿತನ ಏಕೆ? ಜನರಿಗೆ ಅರ್ಥವಾಗದೆಂಬ ಅತಿಬುದ್ಧಿವಂತಿಕೆಯೇ? ಅತಿ ಬುದ್ಧಿವಂತರೆಲ್ಲ ಆಮೇಲೆ ಏನಾದರು ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

“ಸಹಿ ಇಲ್ಲದ ವರದಿ ಸಲ್ಲಿಸಲಾಗಿದೆ’ ಎಂದು ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ಸಹಿಯೇ ಇಲ್ಲದ ವರದಿ ಅಧಿಕೃತ ಹೇಗಾಗುತ್ತದೆ? ಐದು ವರ್ಷ‌ ಆಡಳಿತ ನಡೆಸಿದವರಿಗೆ, ಸಂವಿಧಾನದ ಬಗ್ಗೆ ಹಾದಿಬೀದಿಯಲ್ಲಿ ನಿಂತು ಪಾಠ ಮಾಡುವವರಿಗೆ ಈ ಮಟ್ಟಿಗೆ ಜ್ಞಾನ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Advertisement

ಎಲ್ಲದರಲ್ಲೂ ಸಿದ್ಧಹಸ್ತರಾದರೆ ಉಪಯೋಗವೇನು? ಸತ್ಯ ಹೇಳುವುದಕ್ಕೂ ಗುಂಡಿಗೆ ಬೇಕು. ಇನ್ನೊಬ್ಬರ ಎದೆಗಾರಿಕೆ ಪ್ರಶ್ನಿಸುವ ಮಹಾನುಭಾವರು, ತಮ್ಮ ಅವಧಿಯಲ್ಲಿ ಈ ವರದಿನ್ನೇಕೆ ಕುರ್ಚಿ ಕೆಳಗೆ ಹಾಕಿಕೊಂಡು ಕೂತಿದ್ದರು ಎಂಬುದಕ್ಕೆ ಉತ್ತರ ನೀಡಲಿ. ಸಹಿ ಇಲ್ಲದ ಕಾಗದ ಪತ್ರಕ್ಕೆ ಬೆಲೆ ಇಲ್ಲ. ಅಪ್ಪ ಅಮ್ಮನಿಲ್ಲದ ಕೂಸು ಅನಾಥ. ಹಾಗಾದರೆ, ಸಹಿ ಇಲ್ಲದ ವರದಿ ಸ್ವೀಕಾರ ಮಾಡಿ, ಆಗ ಸುಮ್ಮನಿದ್ದು, ಈಗ ಹಾಹಾಕಾರ ಮಾಡಿದರೇನು ಪ್ರಯೋಜನ? ಊಸರವಳ್ಳಿ ಉಸಾಬರಿ ಎಂದರೆ ಇದೇ ಇರಬೇಕು ಎಂದು ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next