Advertisement

Caste Census Report: ಇಂದು ಸಿಎಂಗೆ ಸಲ್ಲಿಕೆ

12:52 AM Feb 29, 2024 | Team Udayavani |

ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಸಲ್ಲಿಕೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಜಯಪ್ರಕಾಶ ಹೆಗ್ಡೆ ಈ ಬಗ್ಗೆ ಪ್ರತಿ ಕ್ರಿಯೆ ನೀಡಿ ಗುರುವಾರವೇ ವರದಿ ಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುತ್ತದೆ ಎಂದಿದ್ದಾರೆ. ಲೋಕ ಸಭೆ ಚುನಾವಣೆ ಘೋಷಣೆಯಾಗುವ ಸನಿಹದಲ್ಲಿಯೇ ಈ ಬೆಳವಣಿಗೆ ನಡೆಯ ಲಿರುವುದು ಮಹತ್ವ ಪಡೆದಿದೆ.

Advertisement

“ಉದಯವಾಣಿ’ ಜತೆ ಮಾತನಾಡಿದ ಜಯಪ್ರಕಾಶ್‌ ಹೆಗ್ಡೆ, ಸರಕಾರ ನಿಗದಿಪಡಿಸಿದ ಅವಧಿಯಲ್ಲಿ ವರದಿ ಸಿದ್ಧಪಡಿಸಲಾಗಿದೆ. ಗುರು ವಾರ ಮುಖ್ಯಮಂತ್ರಿಗೆ ಅದನ್ನು ಸಲ್ಲಿಸಲಾಗುತ್ತದೆ.

ಇದರೊಂದಿಗೆ ಆಯೋಗದ ಪ್ರಮುಖ ಜವಾಬ್ದಾರಿಯೊಂದು ಪೂರ್ಣಗೊಂಡಂತಾಗಲಿದೆ’ ಎಂದರು.
ಫೆ. 29ರಂದು ಆಯೋಗದ ಅವಧಿ ಪೂರ್ಣಗೊಳ್ಳಲಿದೆ. ಅದೇ ದಿನ ವರದಿ ಸಲ್ಲಿಕೆಗೂ ಕಾಲ ಕೂಡಿಬಂದಿದೆ. ಸದಸ್ಯ ಕಾರ್ಯದರ್ಶಿ ಸಹಿತ ಎಲ್ಲರೂ ಸಹಿ ಮಾಡಿದ್ದು, ಮುದ್ರಣಗೊಂಡ ವರದಿಯ ಪ್ರತಿಯನ್ನು ಈಗಾಗಲೇ ಪ್ಯಾಕಿಂಗ್‌ ಕೂಡ ಮಾಡಲಾಗಿದೆ. ವರದಿ ಸಲ್ಲಿಕೆ ಅನಂತರ ಅದನ್ನು ಸ್ವೀಕರಿಸುವುದು, ಬಿಡುವುದು ಸರಕಾರಕ್ಕೆ ಬಿಟ್ಟಿದ್ದು. ಕಾಂತರಾಜ ಆಯೋಗ ನೀಡಿದ ದತ್ತಾಂಶಗಳನ್ನು ಆಧರಿಸಿಯೇ ವರದಿ ಸಿದ್ಧಪಡಿಸಲಾಗಿದ್ದು, ಹಲವು ಮಹತ್ವದ ಅಂಶಗಳನ್ನು ಇದು ಒಳಗೊಂಡಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಮುಂದೇನು?
ವರದಿ ಕೈಸೇರಿದ ತತ್‌ಕ್ಷಣ ಕುತೂಹಲಕ್ಕೆ ತೆರೆಬೀಳುತ್ತದೆ ಎಂದಲ್ಲ. ಯಾಕೆಂದರೆ ಆ ವರದಿಯನ್ನು ಸ್ವೀಕರಿಸಿದ ಸರಕಾರ ಅದರ ಕೂಲಂಕಷ ಪರಿಶೀಲನೆಗೆ ಉಪಸಮಿತಿ ರಚಿಸಬಹುದು. ಆ ವರದಿ ಮೇಲೊಂದು ತಜ್ಞರ ವರದಿ ಕೇಳಬಹುದು. ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು ಅಥವಾ ವಿಧಾನಸಭೆಯಲ್ಲಿ ಮಂಡಿಸುವುದಾಗಿ ಹೇಳಬಹುದು. ಇದಾದ ಮೇಲೆ ವರದಿ ಬಿಡುಗಡೆ ಮಾಡಲು ತೀರ್ಮಾನಿಸಲಿದೆ. ಅನಂತರ ಅದನ್ನು ವಿವಿಧ ಕಾರ್ಯಕ್ರಮಗಳ ಉದ್ದೇಶಕ್ಕೆ ಬಳಸಬಹುದು. ಇದೆಲ್ಲದಕ್ಕೂ ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ವೀರಶೈವ-ಲಿಂಗಾಯತ ಹಾಗೂ ಒಕ್ಕಲಿಗರು ಜಾತಿ ಗಣತಿ ವರದಿ ಬಿಡುಗಡೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರೆ, ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ಸಮುದಾಯಗಳು ವರದಿ ಸ್ವೀಕರಿಸಬೇಕೆಂದು ಸರಕಾರದ ಮೇಲೆ ಒತ್ತಡ ಹೇರಿದ್ದವು. ಇವೆಲ್ಲದರ ನಡುವೆ ಅಂತಿಮವಾಗಿ ಗುರುವಾರ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಮುಂದಿನ ಬೆಳವಣಿಗೆಗಳು ಸಾಕಷ್ಟು ಕುತೂಹಲ ಕೆರಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next