ಚಿಕ್ಕಬಳ್ಳಾಪುರ: ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಜಿಲ್ಲಾದ್ಯಂತ ಗೆಲುವಿಗಾಗಿ ನಾನಾ ರೀತಿಯ ತಂತ್ರ, ಪ್ರತಿ ತಂತ್ರಗಳನ್ನು ಹೆಣೆಯುತ್ತಿರುವುದು ಒಂದೆಡೆಯಾದರೆ, ಕಣದಲ್ಲಿ ಜಾತಿ ಲೆಕ್ಕಾಚಾರದ ರಾಜಕಾರಣ ಸದ್ದಿಲ್ಲದೇ ತಾರಕಕ್ಕೇರಿದೆ.
ಹೇಳಿ ಕೇಳಿ ಜಿಲ್ಲೆಯು ಅಹಿಂದ ವರ್ಗದ ಪ್ರಾಬಲ್ಯ ಹೊಂದಿದ್ದು, ಉತ್ತರ ಕರ್ನಾಟಕ ಮಾದರಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಪ್ರಾಬಲ್ಯ ಇಲ್ಲಿ ಇಲ್ಲವೇ ಇಲ್ಲ. ಒಕ್ಕಲಿಗರು, ಬಲಿಜಿಗರು, ದಲಿತ ಹಾಗೂ ಮುಸ್ಲಿಂ ಸಮುದಾಯ ಸೇರಿದಂತೆ ಹಿಂದುಳಿದ ಜಾತಿಗಳೇ ಇಲ್ಲಿ ಅಭ್ಯರ್ಥಿಗಳ ಅಣೆ ಬರಹವನ್ನು ಪ್ರತಿ ಚುನಾವಣೆಯಲ್ಲಿ ಬರೆಯಲಿವೆ.
ಚುನಾವಣಾ ಅಖಾಡಕ್ಕೆ ಟಿಕೆಟ್ ಕೊಡುವಾಗಲೇ ರಾಜಕೀಯ ಪಕ್ಷಗಳು ಪ್ರಬಲ ಜಾತಿಗಳಿಗೆ ಜಿಲ್ಲೆಯಲ್ಲಿ ಮಣೆ ಹಾಕಿರುವುದು ಎದ್ದು ಕಾಣುತ್ತಿದ್ದು, ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಎಲ್ಲವೂ ಸಾಮಾನ್ಯ ವರ್ಗದ ಕ್ಷೇತ್ರಗಳಾದ ಕಾರಣ ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪೈಪೋಟಿ ಸಾಕಷ್ಟು ಕಗ್ಗಂಟು ಆಗಿ ಪರಿಣಮಿಸುವುದು ಮಾಮೂಲಿ ಆಗಿದೆ. ಈ ಬಾರಿ ಜೆಡಿಎಸ್ ಹೊರತುಪಡಿಸಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆ ಕ್ಷಣದವರೆಗೂ ಅಂತಿಮಗೊಂಡಿರಲಿಲ್ಲ.
ಕೈಗಿಂತ ಬಿಜೆಪಿ ತಂತ್ರಗಾರಿಕೆ ಹೆಚ್ಚು: ದಲಿತ, ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯಗಳ ವೋಟ್ ಬ್ಯಾಂಕ್ ಹೊಂದಿರುವ ಕಾಂಗ್ರೆಸ್, ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಬಲಿಜ ಸಮು ದಾಯಕ್ಕೆ ಮಣೆ ಹಾಕಿದೆ. ಇನ್ನೂ ಬಿಜೆಪಿ ಇದೇ ಮೊದಲ ಬಾರಿಗೆ ಜಿಲ್ಲಾದ್ಯಂತ ತನ್ನ ನೆಲೆ ವಿಸ್ತರಿಸಿ ಕೊಳ್ಳುವ ಪ್ರತಿಷ್ಠೆಯೊಂದಿಗೆ ಅಖಾಡಕ್ಕೆ ಇಳಿದಿದ್ದು, ಕಾಂಗ್ರೆಸ್‌ಗಿಂತ ಒಂದು ಹೆಜ್ಜೆ ಮುಂದೆ ಹೋಗಿ 5 ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡುವ ಮೂಲಕ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸುವ ತಂತ್ರಗಾರಿಕೆ ಮಾಡಿದೆ.
Related Articles
ಗೌರಿಬಿದನೂರಲ್ಲಿ ಬ್ರಾಹ್ಮಣರಿಗೆ, ಬಾಗೇಪಲ್ಲಿ ಬಲಿಜಿಗರಿಗೆ, ಚಿಂತಾಮಣಿ ಗಾಣಿಗ ಸಮುದಾಯಕ್ಕೆ ಹಾಗೂ ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಿದೆ. ಆದರೆ, ಜೆಡಿಎಸ್ ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಒಕ್ಕಲಿಗರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದು, ಗೌರಿಬಿದನೂರಲ್ಲಿ ಮಾತ್ರ ಹಿಂದೂ ಸಾದರ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡಿದೆ.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಸ್ಲಿಂ, ಅಹಿಂದ ವರ್ಗವನ್ನು ಸಾಕಷ್ಟು ನೆಚ್ಚಿಕೊಂಡರೆ, ಜೆಡಿಎಸ್ ಕ್ಷೇತ್ರದ ಪ್ರಭಾವಿ ಸಮುದಾಯವಾಗಿರುವ ಒಕ್ಕಲಿಗರನ್ನು ಹಾಗೂ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿಕೊಂಡು ಬರುತ್ತಿರುವ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿದೆ. ಇದೇ ಪರಿಸ್ಥಿತಿ ಚಿಂತಾಮಣಿಯಲ್ಲಿ ಕೂಡ ಇದೆ. ಕಳೆದ ಬಾರಿ ಮುಸ್ಲಿಮರು ಇಲ್ಲಿ ಜೆಡಿಎಸ್‌ಗೆ ಜೈ ಎಂದಿದ್ದರು. ಈ ಬಾರಿ ಡಾ.ಎಂ.ಸಿ.ಸುಧಾಕರ್ ಕಾಂಗ್ರೆಸ್ ಸೇರ್ಪಡೆಗೊಂಡು ಕಣಕ್ಕೆ ಇಳಿದಿದ್ದು, ಅಲ್ಪಸಂಖ್ಯಾತರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ದಲಿತ, ಹಿಂದುಳಿದ, ಮುಸ್ಲಿಂ ಮತಗಳನ್ನು ನೆಚ್ಚಿಕೊಂಡರೆ, ಬಿಜೆಪಿ ರಾಜಕೀಯವಾಗಿ ಬಲಿಷ್ಠವಾಗಿರುವ ಬಲಿಜ ಸಮಾಜವನ್ನು ನೆಚ್ಚಿಕೊಂಡಿದೆ. ಸಿಪಿಎಂ ದಲಿತ, ಹಿಂದುಳಿದ ಹಾಗೂ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದೆ.
ಇನ್ನೂ ಗೌರಿಬಿದನೂರಲ್ಲಿ ಎಸ್‌ಟಿ ಸಮುದಾಯ ಗೆಲುವಿನಲ್ಲಿ ಪ್ರಧಾನ ವಹಿಸಲಿದ್ದು ಕಾಂಗ್ರೆಸ್ ದಲಿತ, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರನ್ನು ನೆಚ್ಚಿಕೊಂಡಿದೆ. ಪಕ್ಷೇತರಾಗಿರುವ ಪುಟ್ಟಸ್ವಾಮಿಗೌಡ ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ಪಡೆಯುವ ಯತ್ನದಲ್ಲಿದ್ದಾರೆ. ಜೆಡಿಎಸ್‌ಗೆ ಅಲ್ಲಿ ಪ್ರಭಾವಿ ಅಭ್ಯರ್ಥಿ ಆಗಿರುವ ಹಿಂದೂ ಸಾದರ ಸಮುದಾಯದ ಬಲದ ಜೊತೆಗೆ ಅಲ್ಪಸಂಖ್ಯಾತರನ್ನು ನೆಚ್ಚಿಕೊಂಡಿದೆ.
ಒಟ್ಟಿನಲ್ಲಿ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಜಿಲ್ಲಾದ್ಯಂತ ಪಕ್ಷಗಳು ಕ್ಷೇತ್ರಗಳಲ್ಲಿ ಯಾವ ಯಾವ ಸಮುದಾಯದ ಮತಗಳು ಎಷ್ಟಿವೆ? ಯಾವ ಸಮುದಾಯ ಯಾರ ಕಡೆ ವಾಲಿದೆ? ಯಾವ ಸಮುದಾಯ ಸೆಳೆದರೆ ತಮ್ಮ ಅಭ್ಯರ್ಥಿ ಗೆಲುವಿಗೆ ರಹದಾರಿ ಆಗುತ್ತದೆ, ವಿಪಕ್ಷಗಳ ಕಡೆ ಗುರುತಿಸಿಕೊಂಡಿರುವ ಪ್ರಭಾವಿ ಸಮುದಾಯ ಯಾವುದು? ಎಂಬುದರ ಚಿಂತನ ಮಂಥನ ನಡೆಸುವ ಮೂಲಕ ಚುನಾವಣಾ ಕಣದಲ್ಲಿ ಜಾತಿ ಲೆಕ್ಕಾಚಾರ ತಾರಕಕ್ಕೇರುವಂತೆ ಮಾಡಿದೆ.
ಬಹುತೇಕ ಪ್ರಭಾವಿ ಸಮುದಾಯಕ್ಕೆ ಮಣೆ:
ಕಾಂಗ್ರೆಸ್: ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟದಲ್ಲಿ ಒಕ್ಕಲಿಗ, ಚಿಕ್ಕಬಳ್ಳಾಪುರದಲ್ಲಿ ಬಲಿಜಿಗ ಅಭ್ಯರ್ಥಿ ಜೆಡಿಎಸ್: ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗ, ಗೌರಿಬಿದನೂರಲ್ಲಿ ಹಿಂದೂ ಸಾದರ, ಬಾಗೇಪಲ್ಲಿ ಅಭ್ಯರ್ಥಿ ಹಾಕದೇ ಸಿಪಿಎಂಗೆ ಬೆಂಬಲ
ಬಿಜೆಪಿ: ಶಿಡ್ಲಘಟ್ಟ, ಚಿಕ್ಕಬಳ್ಳಾಪುರದಲ್ಲಿ ಒಕ್ಕಲಿಗ, ಬಾಗೇಪಲ್ಲಿಯಲ್ಲಿ ಬಲಿಜಿಗ, ಚಿಂತಾಮಣಿ-ಗಾಣಿಗ, ಗೌರಿಬಿದನೂರು ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿ
ಕುತೂಹಲ ಕೆರಳಿಸಿದ ಚಿಕ್ಕಬಳ್ಳಾಪುರ ಕ್ಷೇತ್ರ : ಅಭ್ಯರ್ಥಿಗಳ ಗೆಲುವಿಗೆ ಪ್ರಬಲ ಸಮುದಾಯಗಳೇ ನಿರ್ಣಾಯಕ ಪಾತ್ರ. ಪ್ರಸ್ತುತ ಚುನಾವಣೆ ಜಿಲ್ಲೆಯ ರಾಜಕಾರಣ ದಲ್ಲಿ ಜಾತಿ ಲೆಕ್ಕಾಚಾರವನ್ನು ತೀವ್ರ ಗೊಳಿ ಸಿದೆ. ಕಾಂಗ್ರೆಸ್ ಚಿಕ್ಕಬಳ್ಳಾಪುರದಲ್ಲಿ ಎಸ್‌ಸಿ, ಎಸ್‌ಟಿ, ಕುರುಬ, ಮುಸ್ಲಿಂ ಜೊತೆಗೆ ಬಲಿಜ ಸಮುದಾಯವನ್ನು ಬಹುವಾಗಿ ನೆಚ್ಚಿಕೊಂಡಿದೆ. ಜೆಡಿಎಸ್ ಒಕ್ಕಲಿಗ ಸಮುದಾಯದ ಮೇಲೆ ಹಿಡಿತ ಹೊಂದಿದ್ದು ಜೊತೆಗೆ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿದೆ. ಬಿಜೆಪಿ ಎಲ್ಲಾ ವರ್ಗದ ಜನರನ್ನು ಗುರಿ ಮಾಡಿದೆ.
–ಕಾಗತಿ ನಾಗರಾಜಪ್ಪ