Advertisement

ಹೆಬ್ಟಾಳ್ಕರ್‌-ನಿಂಬಾಳ್ಕರ್‌ ಕಲಹ; ಪರ್ಯಾಯ ಅಭ್ಯರ್ಥಿ ನಿರ್ಧಾರ

12:30 AM Mar 15, 2019 | |

 ಬೆಂಗಳೂರು: ಬೆಳಗಾವಿ ಕ್ಷೇತ್ರದ ಕಾಂಗ್ರೆಸ್‌ ನಾಯಕತ್ವಕ್ಕೆ ಇಬ್ಬರು ಮಹಿಳೆಯರ ನಡುವಿನ ಪಟ್ಟು-ಪ್ರತಿ ಪಟ್ಟುಗಳು, ಆಂತರಿಕ ಸಂಘರ್ಷಗಳು ಪರ್ಯಾಯ ಅಭ್ಯರ್ಥಿಯ ತಲಾಶೆಗೆ ಕಾರಣವಾಗಿದೆ. ಲಿಂಗಾಯತ, ಮರಾಠಾ ಎಂಬ ಜಾತಿ, ಪ್ರಾದೇಶಿಕ ಲೆಕ್ಕಾಚಾರವೂ ಈಕಾರಣದಿಂದ ಈಗ ಬದಲಾಗಿದೆ.

Advertisement

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಸಹೋದರನಿಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ಇಬ್ಬರೂ ಮಹಿಳೆಯರು ಪಕ್ಷ ಪ್ರಮುಖರ ಮೇಲೆ ಒತ್ತಡ ಹೇರಿದ್ದರು. ಕೆಲ ನಾಯಕರು ಬೆಂಬಲವನ್ನೂ ಸೂಚಿಸಿದ್ದರು. ಆದರೆ, ಈ ಆಂತರಿಕ ಸಂಘರ್ಷ ಈಗ ಹೊಸ ಅಭ್ಯರ್ಥಿಯ ಆಯ್ಕೆಗೆ ದಾರಿ ಮಾಡಿಕೊಟ್ಟಿದೆ.

ಗುರುವಾರ ದಿನೇಶ್‌ ಗುಂಡೂರಾವ್‌ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಇಬ್ಬರ ಗೊಂದಲಕ್ಕೆ ತೆರೆ ಎಳೆಯಲಾಗಿತ್ತು. ಇಬ್ಬರೂ ಮಹಿಳೆಯರ ಗೊಂದಲ ಕೈ ಬಿಟ್ಟು ಮಾಜಿ ಸಂಸದ ಎಸ್‌ .ಬಿ. ಸಿದ್ನಾಳ್‌ ಪುತ್ರ ಶಿವಕಾಂತ್‌ ಸಿದ್ನಾಳ್‌, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ವಿ.ಎಸ್‌. ಸಾಧೂನವರ್‌ ಹಾಗೂ ಮಾಜಿ ಶಾಸಕ ಅಶೋಕ್‌ ಪಟ್ಟಣ ಅವರಲ್ಲಿ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಮಾಡುವ ಕುರಿತು ಚರ್ಚೆನಡೆಸಲಾಗಿದೆ ಎಂದು ತಿಳಿದು ಬಂದಿದೆ.

ನಾರಿಯರ ಗುದ್ದಾಟ

ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ ನಿಂಬಾಳ್ಕರ್‌ ಪತ್ನಿ ಹಾಗೂಶಾಸಕಿ ಅಂಜಲಿ ನಿಂಬಾಳ್ಕರ್‌ ಅವರನ್ನೇ ಕಣಕ್ಕಿಳಿಸುವ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರು ಒಲವು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಲಕ್ಷ್ಮೀ ಹೆಬ್ಟಾಳ್ಕರ್‌ ತಮ್ಮ ಸಹೋದರ ಚನ್ನರಾಜ್‌ ಹಟ್ಟಿಹೊಳಿಗೆ ಟಿಕೆಟ್‌ ಕೊಡಿಸಲು ಕಸರತ್ತು ನಡೆಸಿದ್ದರು.

Advertisement

ಅಲ್ಲದೇ ಜಾತಿ ಲೆಕ್ಕಾಚಾರದಲ್ಲಿ ಮರಾಠರಿಗೆ ಕೊಡಬೇಕೆಂದರೆ, ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಹಲಗೇಕರ್‌ಗೆ ಟಿಕೆಟ್‌ ಕೊಡಿ ಎಂದಿದ್ದರು. ಈ ಗೊಂದಲದಿಂದ ಹೊರ ಬರಲು ನಾಯಕರು ಆಯ್ಕೆ ನಿರ್ಧಾರವನ್ನೇ ಬದಲಿಸಿದ್ದಾರೆ.

ಮಾರಾಠಾ ಜಾತಿ ಹಾಗೂ ಮಹಿಳೆಗೆ ಟಿಕೆಟ್‌ ಕೊಡಬೇಕೆನ್ನುವ ಲೆಕ್ಕಾಚಾರ ಬದಲಾಯಿಸಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು, ಲಿಂಗಾಯತ ಸಮುದಾಯದವರಿಗೆ ಟಿಕೆಟ್‌ ನೀಡುವಂತೆ ಸಲಹೆ ನೀಡಿದ್ದಾರೆ. ಅವರ ಸಲಹೆ ಮೇರೆಗೆ, ಮಾಜಿ ಸಂಸದ ಎಸ್‌.ಬಿ. ಸಿದ್ನಾಳ್‌ ಪುತ್ರ ಶಿವಕಾಂತ್‌ ಸಿದ್ನಾಳ್‌ ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ವಿ.ಎಸ್‌ ಸಾಧೂನವರ್‌ ಅವರ ಹೆಸರುಗಳನ್ನು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮಧ್ಯ ಪರವೇಶಿಸಿರುವ ಲಕ್ಷ್ಮೀ ಹೆಬ್ಟಾಳ್ಕರ್‌ ಲಿಂಗಾಯತರಿಗೆ ನೀಡುವುದಾದರೆ, ಮಾಜಿ ಶಾಸಕ ಅಶೋಕ್‌ ಪಟ್ಟಣ ಅವರಿಗೆ ಟಿಕೆಟ್‌ ನೀಡಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಪ್ರತ್ಯೇಕ ಅಭಿಪ್ರಾಯ: ಮೊದಲ ಸಭೆಯಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆ ಸಿದ್ದರಾಮಯ್ಯ ಎಲ್ಲರನ್ನೂ ಪ್ರತ್ಯೇಕವಾಗಿ ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದ್ದು, ಶಿವಕಾಂತ್‌ ಸಿದ್ನಾಳ್‌ ಹಾಗೂ ಅಶೋಕ್‌ ಪಟ್ಟಣ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ, ಅಶೋಕ್‌ ಪಟ್ಟಣ ಅವರಿಗೆ ಟಿಕೆಟ್‌ ಕೊಡಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ವಿರೋಧ ಇದೆ ಎನ್ನಲಾಗಿದೆ. ಜಿಲ್ಲಾ ಮುಖಂಡರಲ್ಲಿ ಒಮ್ಮತ ಮೂಡದಿದ್ದರೆ, ವಿ.ಎಸ್‌. ಸಾಧೂನವರ್‌ ಹೆಸರನ್ನೂ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ರಮೇಶ್‌ ಗೈರು
ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಸ್ಥಾನ ಕಳೆದುಕೊಂಡ ನಂತರ ಪಕ್ಷದ ನಾಯಕರ ವಿರುದ್ಧ ಬಂಡಾಯ ಸಾರಿರುವ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಮುಖಂಡರ ಸಭೆಗೆ ಗೈರಾಗುವ ಮೂಲಕ ಅಸಮಾಧಾನತೋರ್ಪಡಿಸಿದ್ದಾರೆ. ಆದರೆ, ಅವರೊಂದಿಗೆ ಗುರುತಿಸಿಕೊಂಡಿದ್ದ ಅಥಣಿ ಶಾಸಕ ಮಹೇಶ್‌ ಕುಮಠಳ್ಳಿ ಸಭೆಗೆ ಹಾಜರಾಗಿದ್ದರು.

ಬೆಳಗಾವಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಭೆ ಮಾಡಿ, ಆಕಾಂಕ್ಷಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾರು ಅಭ್ಯರ್ಥಿ ಆಗುತ್ತಾರೆಂದು ಬಹಿರಂಗಗೊಳಿ ಸಲು ಆಗುವುದಿಲ್ಲ. ರಮೇಶ್‌ ಜಾರಕಿಹೊಳಿ ಸಭೆಗೆ ಬಂದಿಲ್ಲ. ಅವರ ಜತೆ ಗುರುತಿಸಿಕೊಂಡಿದ್ದ ಮಹೇಶ್‌ ಕುಮಠಳ್ಳಿ ಬಂದಿದ್ದರು.
● ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ

ಕಳೆದ ಬಾರಿ ಪಕ್ಷದ ಕೆಸಲ ಮಾಡಿ ಲೋಕಸಭಾ ಟಿಕೆಟ್‌ ಪಡೆದು ಕೊಂಡಿದ್ದೆ. ಮೋದಿ ಅಲೆಯಲ್ಲಿ ನಾಲ್ಕು ಲಕ್ಷ ಮತ ಪಡೆದಿದ್ದೆ. ಈಗ ಶಾಸಕಿಯಾಗಿ ದ್ದೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ನಾನಾಗಲೀ ನನ್ನ ತಮ್ಮನಾಗಲಿ ಹೈಕಮಾಂಡ್‌
ಹೇಳಿದಂತೆ ಕೇಳುತ್ತೇವೆ.
● ಲಕ್ಷ್ಮೀ ಹೆಬ್ಟಾಳ್ಕರ್‌, ಬೆಳಗಾವಿ ಗ್ರಾಮಾಂತರ ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next