ಕಾರ್ಕಳ: ದಲಿತರಿಗೆ ಜಾತಿನಿಂದನೆ ಮಾಡಿರುವ ಬಗ್ಗೆ ಹಾಗೂ ಸಾರ್ವಜನಿಕ ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಕೆ ಒಡ್ಡಿದ ಕುರಿತು ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಪ್ರತಿಭಾ ರಾಣೆ ನೀಡಿದ ದೂರಿನಂತೆ ಕಾರ್ಕಳ ಕಸಬಾ ನಿವಾಸಿ ರಮಿತಾ (41) ಅವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರ್ಮಿಕ ಕಾರ್ಯಕ್ರಮವೊಂದರ ಸ್ವಯಂ ಸೇವಕಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ರಮಿತಾರವರು ಎಸ್‌ಸಿ/ಎಸ್‌ಟಿ ಅವರಿಗೆ ಊಟ ಬಡಿಸಲು ಬಿಡಬೇಡಿ, ಅವರನ್ನು ಒಳಗೆ ಬಿಟ್ಟರೆ ಮೈಲಿಗೆ ಎಂದು ಹೇಳಿ ಸಾರ್ವಜನಿಕವಾಗಿ ನಿಂದಿಸಿದ್ದು ಅಲ್ಲದೆ ಇದೇ ವಿಚಾರವಾಗಿ ದೂರುದಾರೆಗೆ ಸಾರ್ವಜನಿಕ ಪುರಸಭೆ ರಸ್ತೆಯಲ್ಲಿ ಅಡ್ಡಗಟ್ಟಿ ಬೈದು ನಿಂದಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿತ ಮಹಿಳೆ ವಿವಿಧ ಸಾಮಾಜಿಕ ಸೇವಾ ಜಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಸಂಘಟನೆ ಖಂಡನೆ
ದಲಿತ ಸಮುದಾಯದ ಬಗ್ಗೆ ಜಾತಿ ನಿಂದನೆ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡ ಮಹಿಳೆಯ ಕೃತ್ಯವನ್ನು ದಲಿತ ಒಕ್ಕೂಟ ಐಕ್ಯತಾ ಸಮಿತಿಯ ಅಣ್ಣಪ್ಪ ನಕ್ರೆ ತೀವ್ರವಾಗಿ ಖಂಡಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸುವಂತೆ ಅವರು ಆಗ್ರಹಿಸಿದ್ದಾರೆ.