Advertisement

Cast Census: ಕಾಯ್ದೆ ಪ್ರಕಾರ ಸರಕಾರ ಜಾತಿಗಣತಿ ವರದಿ ಒಪ್ಪಬೇಕು

04:35 AM Oct 09, 2024 | Team Udayavani |

ಉದಯವಾಣಿ ಸಂದರ್ಶನ- ನೇರಾ ನೇರ

Advertisement

ಜಾತಿ ಗಣತಿ ವರದಿ ಮಾತ್ರವಲ್ಲ, ಯಾವುದೇ ಆಯೋಗ ನೀಡುವ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಅಂತ ಕಾಯ್ದೆಯೇ ಹೇಳುತ್ತದೆ. ತಿರಸ್ಕರಿಸುವ ಅಧಿಕಾರವೂ ಸರ್ಕಾರಕ್ಕೆ ಇರಬಹುದು. ಆದರೆ, ಅದಕ್ಕೆ ಸಕಾರಣಗಳನ್ನು ನೀಡಬೇಕಾಗುತ್ತದೆ. ಜಾತಿ ಗಣತಿ ವಿಚಾರದಲ್ಲಿ ಹೇಳುವುದಾದರೆ, ಸರ್ಕಾರ ತಿರಸ್ಕರಿಸುವಂತಹ ಯಾವ ಅಂಶಗಳೂ ಆ ವರದಿಯಲ್ಲಿಲ್ಲ.

– ರಾಜ್ಯಾದ್ಯಂತ ಈಗ ಚರ್ಚೆಯ ಕೇಂದ್ರಬಿಂದು ಆಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯ ಕತೃì, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್‌.ಕಾಂತರಾಜು ಅವರ ನೇರ ನುಡಿಗಳಿವು.

ಒಂದೆಡೆ ಮುಡಾ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಅಹಿಂದ ನಾಯಕರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟುಹಿಡಿದಿವೆ. ಮತ್ತೂಂದೆಡೆ ಆಡಳಿತಾರೂಢ ಕಾಂಗ್ರೆಸ್‌ ವಲಯದಲ್ಲೇ ದಲಿತ ಸಿಎಂ ಚರ್ಚೆ ಕಾವು ಪಡೆದುಕೊಳ್ಳುತ್ತಿವೆ. ಈ ಹೊತ್ತಿನಲ್ಲೇ ದಶಕದ ಹಿಂದೆ ಕೈಗೆತ್ತಿಕೊಂಡ ಜಾತಿ ಗಣತಿಯ ವರದಿ ಜಾರಿಗೆ ಒತ್ತಡಗಳು ಕೇಳಿಬರುತ್ತಿವೆ.

ಹಾಗಿದ್ದರೆ, ವರದಿ ಜಾರಿಯ ಹಿಂದೆ ನಿಜವಾದ ಹಿಂದುಳಿದ ವರ್ಗಗಳ ಬಗೆಗಿನ ಕಳಕಳಿ ಇದೆಯೇ? ಅಥವಾ ಇದೊಂದು ವಿಷಯಾಂತರದ ತಂತ್ರಗಾರಿಕೆಯೇ? ಸಿಎಂ ಕುರ್ಚಿ ಅಲ್ಲಾಡುತ್ತಿರು­ವುದರಿಂದ ತರಾತುರಿ ಮಾಡಲಾಗುತ್ತಿದೆಯೇ? ಇಂತಹ ಹಲವು ಗೊಂದಲಗಳಿಗೆ ಒಂದು ದಿನದ ಹಿಂದಷ್ಟೇ ನಿಯೋಗದೊಂದಿಗೆ ಖುದ್ದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದ ಕಾಂತರಾಜು “ಉದಯವಾಣಿ’­ಯೊಂದಿಗೆ ನೇರಾ-ನೇರ ಮಾತುಕತೆಯಲ್ಲಿ ಉತ್ತರಿಸಲು ಪ್ರಯತ್ನಿಸಿದ್ದಾರೆ.

1. ನೀವೂ ವರದಿ ಕೊಟ್ಟಿರಿ. ನಿಮ್ಮದಾದ ಮೇಲೆ ಜಯಪ್ರಕಾಶ ಹೆಗ್ಡೆ ಕೂಡ ಇದೇ ಸಮೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ವರದಿ ಕೊಡುತ್ತಾರೆ. ಇದರಲ್ಲಿ ಸರ್ಕಾರ ಯಾವುದನ್ನು ಪರಿಗಣಿಸಬೇಕು? ಇವೆರಡರ ನಡುವಿನ ವ್ಯತ್ಯಾಸ ಏನು?
ಆಗಿದ್ದೇನು ಹೇಳ್ತೀನಿ ಕೇಳಿ. 2019ರ ಸೆಪ್ಟೆಂಬರ್‌ 21ರಂದು ನಮ್ಮ ಆಯೋಗದ ಅವಧಿ ಮುಗಿಯಿತು ಅಂತ ಆದೇಶ ಬಂತು. ನಾವು ಅಲ್ಲಿಯವರೆಗೂ ಸರ್ಕಾರಕ್ಕೆ ಈ ವರದಿ ಕೊಟ್ಟು ಹೋದರಾಯ್ತು ಅಂತ ಅಂದುಕೊಂಡಿದ್ದೆವು. ಆದರೆ, ಅಂದಿನ ಸರ್ಕಾರ ವರದಿ ಸ್ವೀಕರಿಸಲಿಲ್ಲ. ಬದಲಿಗೆ ನಿಮ್ಮ ಅವಧಿ ಮುಗಿದಿದೆ ಅಂತ ಹೇಳಿದ್ರು. ಹಾಗೆ ಹೇಳಿದ ತಕ್ಷಣ ಒಂದು ಕ್ಷಣವೂ ಇರಬಾರದು ಅಂತ ಅಂದಿನ ಸದಸ್ಯ ಕಾರ್ಯದರ್ಶಿಗೆ ಕೊಟ್ಟು ಬಂದುಬಿಟ್ಟೆವು.

Advertisement

ನಮ್ಮ ನಂತರದಲ್ಲಿ ಜಯಪ್ರಕಾಶ ಹೆಗ್ಡೆ ಅವರನ್ನು ನೇಮಿಸಲಾಯಿತು. ಸರ್ಕಾರದ ಸೂಚನೆಯಂತೆ ಅವರೂ ವರದಿ ಕೊಟ್ಟಿದ್ದಾರೆ. ಆದರೆ, ಅವರು ಯಾವುದೇ ಸಮೀಕ್ಷೆ ಮಾಡಿಲ್ಲ. ಬದಲಾವಣೆಗಳನ್ನು ಮಾಡಿ ಅಂತಾನೂ ಹೇಳಿಲ್ಲ. ನಾವು ಕೊಟ್ಟ ವರದಿಯಲ್ಲಿನ ಅಂಶಗಳು ಕ್ರಮಬದ್ಧವಾಗಿದ್ದು, ಸ್ವೀಕರಿಸಬೇಕು ಎಂದು ಸಹಮತದ ಮುದ್ರೆ ಒತ್ತಿದ್ದಾರೆ.

2. ಇದುವರೆಗೆ ಕೋಲ್ಡ್‌ಸ್ಟೋರೇಜ್‌ ಸೇರಿದ್ದ ಜಾತಿ ಗಣತಿ ವರದಿ ಮತ್ತೆ ಮುನ್ನೆಲೆಗೆ ಬಂದಿದೆ. ಈಗ ಏಕಾಏಕಿ ಒತ್ತಡ ಹಾಕಲು ಕಾರಣ ಏನು? ಸಿಎಂ ಕುರ್ಚಿ ಅಲ್ಲಾಡುತ್ತಿರುವುದರ ಸುಳಿವು ಸಿಕ್ಕಿದೆಯೇ?
ನನ್ನ ಪ್ರಕಾರ ಒತ್ತಡ ಇದೆ ಅಂತ ಅನಿಸುವುದಿಲ್ಲ. ಯಾಕೆಂದರೆ, ಅದು ಸರ್ಕಾರದ ಅಥವಾ ಆಡಳಿತಾರೂಢ ಕಾಂಗ್ರೆಸ್‌ನ ಅಜೆಂಡಾದಲ್ಲಿ ಇದ್ದೇ ಇತ್ತು. ಅದನ್ನು 2023ರ ಫೆಬ್ರವರಿಯಲ್ಲೇ ಹೇಳಿದ್ದರು. ಅದರ ಉದ್ದೇಶ ಕೂಡ ಜಾರಿಗೆ ತರುವುದೇ ಆಗಿತ್ತು. ಹಾಗಾಗಿ, ಈಗ ಅದು ಮುನ್ನೆಲೆಗೆ ಬಂದಿದೆ ಅಥವಾ ಒತ್ತಡ ಹಾಕಲಾಗುತ್ತಿದೆ ಅಂತ ನನಗೆ ಅನಿಸುವುದಿಲ್ಲ. ಈ ವಿಚಾರದಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಅಂತಾನೂ ಅನಿಸುವುದಿಲ್ಲ. ಸೋಮವಾರವಷ್ಟೇ ಸಿಎಂ ಭೇಟಿ ವೇಳೆ ವರದಿಯನ್ನು ತೆಗೆದುಕೊಳ್ಳುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.

3. ಭರವಸೆ ನೀಡಿರಬಹುದು, ಆದರೆ ಒಂದು ವರ್ಗ ಮಾತ್ರ ವರದಿ ಪರವಾಗಿದೆ. ಹಲವು ವರ್ಗಗಳು ಇದಕ್ಕೆ ವಿರುದ್ಧವಾಗಿವೆ. ಅಷ್ಟೇ ಯಾಕೆ, ಸರ್ಕಾರದ ಒಂದು ಬಣವೇ ಇದರ ವಿರುದ್ಧ ಸಹಿ ಸಂಗ್ರಹಿಸಿ ಸಿಎಂಗೆ ಮನವಿ ಕೊಟ್ಟಿದೆ. ಹೀಗಿರುವಾಗ, ವರದಿಗೆ ಎಲ್ಲಿ ಮಹತ್ವ ಉಳಿಯಿತು?
ಇದೊಂದೇ ಅಲ್ಲ. ಯಾವುದೇ ವರದಿಗಳಿಗೆ ಪರ-ವಿರೋಧಗಳು ಇದ್ದೇ ಇರುತ್ತವೆ. ಬಹುಶಃ ವಿರೋಧಿಸುವವರು ಆ ಸಮೀಕ್ಷೆಯ ವಿವರಗಳನ್ನು ನೋಡಿದ ನಂತರ ತಮ್ಮ ಅಭಿಪ್ರಾಯಗಳನ್ನು ನೀಡಲಿ. ನನ್ನ ಪ್ರಕಾರ ಯಾರೂ ಇನ್ನೂ ಆ ವರದಿ ಓದಿಯೇ ಇಲ್ಲ.

4. ವರದಿಯ ಅಂಶಗಳ ಸೋರಿಕೆಯೇ ಇಂದಿನ ರಾದ್ಧಾಂತಕ್ಕೆ ಕಾರಣ. ಆ ರಾದ್ಧಾಂತದ ರೂವಾರಿ ನೀವೇ ಅಂತೆ?
ಇಲ್ಲ, ನನ್ನ ಅಭಿಪ್ರಾಯದಲ್ಲಿ ವರದಿಯ ಯಾವ ಅಂಶಗಳೂ ಸೋರಿಕೆ ಆಗಿಲ್ಲ. ಅದು ತಯಾರಾದ ತಕ್ಷಣ ಸರ್ಕಾರಕ್ಕೆ ಕೊಡುವ ವ್ಯವಸ್ಥೆ ಮಾಡಿಕೊಂಡೆವು. ಅಷ್ಟಕ್ಕೂ ಸೋರಿಕೆಯಾಗಿದೆ ಎಂದರೂ ಎಲ್ಲ ವಿವರಗಳನ್ನೂ ಅದರಲ್ಲಿ ಹೇಳಲು ಆಗುವುದಿಲ್ಲ. ಅಂದಾಜಿನ ಮೇಲೆ ಕೆಲವು ಅಭಿಪ್ರಾಯಗಳನ್ನು ಹೇಳಿರಬಹುದಷ್ಟೇ. ಆದರೆ ಒಟ್ಟಾರೆಯಾಗಿ ಹೇಳುವುದಾದರೆ, ಸೋರಿಕೆ ಎನ್ನುವುದು ಸತ್ಯಕ್ಕೆ ದೂರವಾದುದು. ವಿರೋಧಿಸುವವರು ಹಾಗೆ ಹೇಳುತ್ತಿರಬಹುದು.

5.ಕಾಂಗ್ರೆಸ್‌ಗೆ ಅಥವಾ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾದಾಗೆಲ್ಲಾ ಜಾತಿ ಗಣತಿ ವರದಿ ಮುನ್ನೆಲೆಗೆ ಬರುತ್ತದೆ. ಹಾಗಿದ್ದರೆ, ಇದೊಂದು ಆಪತ್ಕಾಲದ ಅಸ್ತ್ರವೇ?
ನೋಡಿ ಇದು ಇವತ್ತಿನ ಕಾರ್ಯಕ್ರಮ ಅಲ್ಲ. 2014ರಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗಿದೆ. ಅದಕ್ಕೆ ಬೇಕಾದ ಬಜೆಟ್‌, ಸಿಬ್ಬಂದಿ ಮತ್ತಿತರ ಸವಲತ್ತುಗಳನ್ನು ಅಂದೇ ಸರ್ಕಾರ ಒದಗಿಸಿದೆ. ಇದರ ಜತೆಗೆ ದೇಶದಲ್ಲಿ 1872ರಲ್ಲಿ ಮೊದಲ ಜನಗಣತಿ ಆಗಿತ್ತು. 1931ರವರೆಗೆ ಗಣತಿಯಲ್ಲಿ ಜಾತಿ ವಿವರಗಳು ಬರುತ್ತಿದ್ದವು. ಅದರ ನಂತರ ಯಾವ ರಾಜ್ಯಗಳೂ ಈ ಪ್ರಯತ್ನಕ್ಕೆ ಕೈಹಾಕಲಿಲ್ಲ. ಆ ಪ್ರಯೋಗ ಕರ್ನಾಟಕದಲ್ಲಿ ಮೊದಲ ಬಾರಿಗೆ ಆಯ್ತು. ಜಾತಿಗಳ ನಡುವಿನ ಏರುಪೇರು ನಿರ್ಮೂಲನೆಗೆ ಇದಕ್ಕೆ ಕೈಹಾಕಲಾಯಿತು. ಕೇಂದ್ರದಲ್ಲಿ ಕೂಡ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಮಾಡುವುದಾಗಿ ಆ ಪಕ್ಷದ ನಾಯಕರು ಹೇಳಿದ್ದಾರೆ. ಹಾಗಾಗಿ, ಹೊಸದಾಗಿ ಇದನ್ನು ಕೈಗೆತ್ತಿಕೊಂಡಿದ್ದಲ್ಲ.

6.ಕೆಲ ನಿರ್ದಿಷ್ಟ ಸಮುದಾಯಗಳಿಗೆ ಮಾತ್ರ ಅನುಕೂಲ ಆಗುವಂತೆ ವರದಿ ಸಿದ್ಧಪಡಿಸಲಾ­ಗಿದೆ ಎಂಬ ಆರೋಪ ಇದೆಯಲ್ಲಾ?
ಇರಬಹುದು, ಅವರು ಮಾತನಾಡುವಂಥದ್ದೂ ಇರಬಹುದು. ಆದರೆ, ಮೊದಲು ಕಾಯ್ದೆಯಲ್ಲಿ ಇದ್ದಂತೆ ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡಬೇಕು ಅಂತ ಇತ್ತು. ಅದನ್ನು ತಿದ್ದುಪಡಿ ಮಾಡಿ, ರಾಜ್ಯದಲ್ಲಿರುವ ಸರ್ವಜನಾಂಗವನ್ನೂ ಸಮೀಕ್ಷೆ ಮಾಡಬೇಕು ಎಂದು ಮಾಡಲಾಯಿತು. ಅದರಂತೆ ಇಲ್ಲಿ ಯಾರನ್ನೂ ಬಿಟ್ಟಿಲ್ಲ. ಎಲ್ಲ ವರ್ಗಗಳನ್ನೂ ಸಮೀಕ್ಷೆಗೆ ಒಳಪಡಿಸಿದ್ದೇವೆ.

7. ದಶಕದ ಹಿಂದಿನ ವರದಿ ಇದಾಗಿದ್ದು, ಈ ಅವಧಿಯಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಈಗ ವರದಿ ಪ್ರಸ್ತುತ ಅಂತ ನಿಮಗೆ ಅನಿಸುತ್ತಾ?
ಸುಪ್ರೀಂಕೋರ್ಟ್‌ ಕೂಡ 10 ವರ್ಷ ಮೀರಬಾರದು ಅಂತಾನೇ ಹೇಳುತ್ತದೆ. ಅದರೊಳಗೇ ಜಾರಿ ಮಾಡಬೇಕು ಎನ್ನುತ್ತದೆ. ಮೊದಲನೆಯದಾಗಿ ಈ ವರದಿಗೆ ಇನ್ನೂ 10 ವರ್ಷ ತುಂಬಿಲ್ಲ. ಎರಡನೆಯದಾಗಿ ಅಂದಿಗೂ-ಇಂದಿಗೂ ಸ್ವಲ್ಪ ವ್ಯತ್ಯಾಸ ಇರುತ್ತದೆ. ಇಲ್ಲ ಅಂತ ನಾನು ಹೇಳುವುದಿಲ್ಲ. ವರದಿ ಅಂಶಗಳನ್ನು ಸರ್ಕಾರ ಪರಿಗಣಿಸಿ, ಪ್ರೊಜೆಕ್ಷನ್‌ ಅಂತ ಮಾಡಿ ಇವತ್ತಿಗೆ ಅನ್ವಯ ಆಗುವಂತೆ ಮಾಡಿಕೊಳ್ಳಬಹುದು. ಅದು ಸರ್ಕಾರಕ್ಕೆ ಬಿಟ್ಟ ವಿಷಯ. ಆದರೆ, ಈಗ ವರದಿ ಪಡೆದುಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಹಾಗೆ ನೋಡಿದರೆ, 2021ರಲ್ಲೇ ಜನ ಗಣತಿ ಆಗಬೇಕಿತ್ತು. ಇನ್ನೂ ಆಗಿಲ್ಲ. ಅದನ್ನು ಹೇಗೆ ಮಾಡುತ್ತಾರೆ?

8.ಸಚಿವ ಸಂಪುಟದಲ್ಲಿ ವ್ಯತಿರಿಕ್ತವಾಗಿ ಸರ್ಕಾರ ತೀರ್ಮಾನಗಳನ್ನು ಕೈಗೊಂಡರೆ…?
ಸಂಪುಟದಲ್ಲಿ ಮುಂದಿಟ್ಟು ಅಲ್ಲಿ ತೀರ್ಮಾನ ಕೈಗೊಂಡು ಮುಂದಿನ ಕ್ರಮ ವಹಿಸಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಇನ್ನು ವ್ಯತಿರಿಕ್ತವಾಗಿ ತೀರ್ಮಾನಗಳು ಬಂದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸು­ವುದಾದರೆ, ಸಾಮಾನ್ಯವಾಗಿ ಯಾವುದೇ ಆಯೋಗಗಳು ನೀಡುವ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಅಂತ ಕಾಯ್ದೆಯೇ ಹೇಳುತ್ತದೆ. ಹಾಗಾದರೆ, ಕೊಟ್ಟಿದ್ದನ್ನೆಲ್ಲ ಒಪ್ಪಿಕೊಳ್ಳಬೇಕೆಂದೂ ಇಲ್ಲ. ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಾಗ ತಿರಸ್ಕರಿಸಬಹುದು.

9. ಆಗ ನಿಮ್ಮ ನಡೆ ಏನಾಗಿರುತ್ತದೆ?
ಹಾಗಲ್ಲ, ಒಂದು ವೇಳೆ ತಿರಸ್ಕರಿಸಬೇಕು ಎಂದಾಗಲೂ ಸರ್ಕಾರ ಸಕಾರಣಗಳನ್ನು ನೀಡಬೇಕಾಗುತ್ತದೆ. ಅದು ಬಹಳ ಮುಖ್ಯವಾದುದು. ಸಾಮಾನ್ಯವಾಗಿ ಒಪ್ಪಿಕೊಳ್ಳಬೇಕು ಅಂತ ಕಾಯ್ದೆ ಹೇಳುತ್ತದೆ. ಏಕೆಂದ ರೆ, ಇದಕ್ಕೆ ಪ್ರಯತ್ನಗಳನ್ನು ಮಾಡಿರುತ್ತೇವೆ. ಜನರ ಹಣ ಖರ್ಚಾಗಿರುತ್ತದೆ. ಈ ಹಿಂದೆ ತಿರಸ್ಕರಿಸಿದ ಉದಾಹರಣೆಗಳೂ ಇವೆ. ನಾಗನಗೌಡ ಸಮಿತಿ ತಿರಸ್ಕರಿಸಲಾಗಿತ್ತು. ಆದರೆ, ಅದು ಬರೀ ಜಾತಿಯನ್ನು ಅವಲಂಬಿಸಿತ್ತು. ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದಲ್ಲ, ತಿರಸ್ಕರಿಸುವಾಗ ಸಕಾರಣಗಳನ್ನು ಕೊಡಬೇಕಾಗುತ್ತದೆ.

10. ಇದನ್ನು ಸಮೀಕ್ಷೆ ಅಂತೀರಾ ಅಥವಾ ಗಣತಿ ಎನ್ನುವುದು ಸೂಕ್ತ ಅಂತೀರಾ?
ನಾವು ಮಾಡಿದ್ದು ಗಣತಿಯೇ ಆಗಿದೆ. ಆದರೆ, ಸರ್ಕಾರ ಈ ಕಾರ್ಯಕ್ರಮಕ್ಕೆ ಸಮೀಕ್ಷೆ ಎಂದು ಕರೆದಿರುವುದರಿಂದ ಅದೇ ಸೂಕ್ತ.

11.ಹಾಗಿದ್ದರೆ, ಈ ವರದಿ ಆಧರಿಸಿ ರಾಜ್ಯದಲ್ಲಿ ಇಂತಹ ಜಾತಿ ಅಥವಾ ಸಮುದಾಯದವರು ಇಂತಿಷ್ಟೇ ಜನ ಇದ್ದಾರೆ ಅಂತ ನಿಖರವಾಗಿ ಹೇಳಬಹುದಾ?
ಖಂಡಿತ ಹೇಳಬಹುದು. ಒಂದು ಪ್ರದೇಶದಲ್ಲಿ ನೂರು ಮನೆಗಳಿದ್ದರೆ, ಆ ನೂರು ಮನೆಗಳೂ ಈ ಸಮೀಕ್ಷೆ­ಗೊಳಪಟ್ಟಿವೆ.

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next