Advertisement

Mangaluru: ಸಿಟಿ ಬಸ್‌ಗಳಲಿನ್ನು ನಗದು ರಹಿತ ಪ್ರಯಾಣ !

11:24 AM Jul 29, 2024 | Team Udayavani |

ಮಹಾನಗರ: ಮಂಗಳೂರು ನಗರದ ಬಸ್‌ಗಳಲ್ಲಿ ಪ್ರಯಾಣಿಸುವವರಿಗಿನ್ನು ಚಿಲ್ಲರೆಯ ಕಿರಿ ಕಿರಿ ಇಲ್ಲ. ಅಂಗಡಿಗಳಲ್ಲಿ ಮೊಬೈಲ್‌ ಮೂಲಕ ಯಾವ ರೀತಿ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುತ್ತೇವೋ ಅದೇ ರೀತಿ ಬಸ್‌ಗಳಲ್ಲಿಯೂ ಪಾವತಿ ಮಾಡಬಹುದು. ಈ ವಿನೂತನ ಮಾದರಿಯನ್ನು ಸಿಟಿ ಬಸ್‌ಗಳಲ್ಲಿ ಪರಿಚಯ ಮಾಡಲು ಸಿಟಿ ಬಸ್‌ ಮಾಲಕರ ಸಂಘ ಮುಂದಾಗಿದೆ.

Advertisement

ಖಾಸಗಿ ವಲಯದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಈ ಉಪಕ್ರಮ ಅಳವಡಿಸಲಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಸ್ಟೇಟ್‌ ಬ್ಯಾಂಕ್‌ನಿಂದ ಅತ್ತಾವರ – ಮಂಗಳಾದೇವಿ ನಡುವಣ ಸಂಚರಿಸುವ 27 ನಂಬರ್‌ನ 5 ಬಸ್‌ಗಳಲ್ಲಿ ಈ ಯೋಜನೆ ಈಗಾಗಲೇ ಜಾರಿಯಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಪ್ರಯಾಣಿಕರು ಯುಪಿಐ ಮೂಲಕವೇ ನಗದು ರಹಿತವಾಗಿ ಟಿಕೆಟ್‌ ಹಣ ಪಾವತಿ ಮಾಡುತ್ತಿದ್ದಾರೆ. ಒಂದು ವೇಳೆ ಆನ್‌ ಲೈನ್‌ ವ್ಯವಸ್ಥೆ ಇಲ್ಲದಿದ್ದರೆ ನಗದು ನೀಡಿಯೂ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹಣ ಪಾವತಿ ಹೇಗೆ?

ಬಸ್‌ ಕಂಡಕ್ಟರ್‌ ಕೈಯಲ್ಲಿ ಇಟಿಎಂ ಯಂತ್ರ ಇರುತ್ತದೆ. ಪ್ರಯಾಣಿಕರು ಎಲ್ಲಿಂದ-ಎಲ್ಲಿಗೆ ಪ್ರಯಾಣಿಸುತ್ತಾರೆ ಎಂದು ಹೇಳಿದಾಗ ಇಟಿಎಂನಲ್ಲಿ ದರ ನಮೂದು ಆಗುತ್ತದೆ. ಆ ವೇಳೆ ಟಿಕೆಟ್‌ ದರಕ್ಕೆ ಅನುಗುಣವಾಗಿ ನಗದು ಅಥವಾ ಯುಪಿಐ ಎಂಬ ಆಯ್ಕೆ ಸಿಗುತ್ತದೆ. ಅಲ್ಲಿ ಯುಪಿಐ ಒತ್ತಿದರೆ ಕ್ಯೂ ಆರ್‌ ಕೋಡ್‌ ಬರುತ್ತದೆ. ಅದನ್ನು ಸ್ಕ್ಯಾನ್ ಮಾಡಿ, ಗೂಗಲ್‌ ಪೇ, ಫೋನ್‌ ಪೇ ಅಥವಾ ಇತರ ಯಾವುದೇ ಸ್ಕ್ಯಾನರ್ ಮೂಲಕ ಹಣ ಪಾವತಿ ಮಾಡಬಹುದು. ಹಣ ಪಾವತಿಯಾಗಿದೆ ಎಂಬ ಸಂದೇಶ ನಿರ್ವಾಹಕನಿಗೆ ಬರುತ್ತದೆ. ಆಗ ಬಸ್‌ ಟಿಕೆಟ್‌ ಪ್ರಿಂಟ್‌ ಆಗುತ್ತದೆ. ಬಸ್‌ ಮಾಲಕ ದಿಲ್‌ರಾಜ್‌ ಆಳ್ವ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ನಮ್ಮ ಬಸ್‌ಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ನೂತನ ಉಪಕ್ರಮ ಜಾರಿಗೆ ತಂದಿದ್ದೇವೆ. ಪ್ರಯಾಣಿಕರಿಂದಲೂ ಉತ್ತಮ
ಪ್ರತಿಕ್ರಿಯೆ ಬರುತ್ತಿದೆ’ ಎನ್ನುತ್ತಾರೆ.

ಅಸಾಧ್ಯವಲ್ಲ, ಸವಾಲು !

Advertisement

ನಗರದಲ್ಲಿ ಸಂಚರಿಸುವ ಎಲ್ಲ ಬಸ್‌ಗಳಲ್ಲಿ ಕ್ಯೂ ಆರ್‌ ಕೋಡ್‌ ಆಧರಿಸಿ, ಹಣ ಪಾವತಿ ವಿಧಾನ ಜಾರಿ ಅಸಾಧ್ಯವೇನಲ್ಲ, ಆದರೆ ಸವಾಲು ಇದೆ. ಸದ್ಯ ಹೆಚ್ಚಿನ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ನಿರ್ವಾಹಕ ಬಸ್‌ ಟಿಕೆಟ್‌ ನೀಡುತ್ತಿಲ್ಲ ಎಂಬ ಆರೋಪ ಇದೆ.ಕೊರಳಿಗೆ ಇಟಿಎಂ ಯಂತ್ರವನ್ನೇ ಹಾಕುವುದಿಲ್ಲ. ಹೀಗಿದ್ದಾಗ ಯುಪಿಐ ಪಾವತಿ ಹೇಗೆ ಸಾಧ್ಯ ಎನ್ನುತ್ತಾರೆ ಸಾರ್ವಜನಿಕರು. ಆದರೂ ನಿರ್ವಾಹಕರ ಸಭೆ ನಡೆಸಿ, ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಸಹಕಾರದಿಂದ ಜಾರಿ ಮಾಡಿಯೇ ಸಿದ್ಧ ಎನ್ನುತ್ತಾರೆ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಅಜೀಜ್‌ ಪರ್ತಿಪ್ಪಾಡಿ.

ಪ್ರಾಯೋಗಿಕ ಜಾರಿ

ನಗರದ ಸಿಟಿ ಬಸ್‌ಗಳಲ್ಲಿ ಬಸ್‌ ಟಿಕೆಟ್‌ ದರ ಪಾವತಿಗೆ ಯುಪಿಐ ವ್ಯವಸ್ಥೆ ಜಾರಿಗೆ ತರಲಿದ್ದೇವೆ. ಸದ್ಯ ಪ್ರಾಯೋಗಿಕವಾಗಿ ಸ್ಟೇಟ್‌ಬ್ಯಾಂಕ್‌-ಮಂಗಳಾದೇವಿ ನಡುವೆ ಸಂಚರಿಸುವ 5 ಬಸ್‌ಗಳಲ್ಲಿ ಜಾರಿಯಾಗಿವೆ. ಪ್ರಯಾಣಿಕರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸದ್ಯದಲ್ಲೇ ಈ ವ್ಯವಸ್ಥೆಯನ್ನು ನಗರದ ಇನ್ನಷ್ಟು ಬಸ್‌ಗಳಲ್ಲಿ ಅಳವಡಿಸುತ್ತೇವೆ. ಚಿಲ್ಲರೆ ಸಮಸ್ಯೆ, ಪಾರದರ್ಶಕ ವ್ಯವಸ್ಥೆ ಇದರಿಂದ ಸಾಧ್ಯ.

– ಅಜೀಜ್‌ ಪರ್ತಿಪ್ಪಾಡಿ,

ಖಾಸಗಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

ಚಲೋ ಕಾರ್ಡ್‌ ಚಾಲ್ತಿಯಲ್ಲಿರಲಿದೆ

ಕೆಲವು ವರ್ಷಗಳ ಹಿಂದೆ ಮಂಗಳೂರು ಸಿಟಿ ಬಸ್‌ಗಳಲ್ಲಿ ಜಾರಿಯಾದ ಚಲೋ ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆ ಅದೇ ರೀತಿ ಮುಂದುವರಿಯಲಿದೆ. ಈಗಾಗಲೇ ಅನೇಕ ಮಂದಿ ಈ ವ್ಯವಸ್ಥೆಯನ್ನು ಬಳಕೆ ಮಾಡುತ್ತಿದ್ದು,ಚಲೋ ಕಾರ್ಡ್‌ ಖರೀದಿಸಿ, ಅದಕ್ಕೆ ರೀಚಾರ್ಜ್‌ ಮಾಡುವ ಮೂಲಕ ಟಿಕೆಟ್‌ಗೆ ಹಣ ನೀಡುವ ಬದಲು ಕಾರ್ಡ್‌ ಸ್ವೈಪ್ ಮಾಡುತ್ತಿದ್ದಾರೆ. ಆನ್‌ಲೈನ್‌ ಪಾವತಿ ವ್ಯವಸ್ಥೆಯನ್ನು ಕೂಡ ಚಲೋ ಸಂಸ್ಥೆ ವಹಿಸಿಕೊಂಡಿದ್ದು, ಇವೆರಡನ್ನು ಮುಂದುವರಿಸಲು ನಿರ್ಧಾರ ಮಾಡಿದೆ.

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next