Advertisement

ಗೇರುಬೀಜ ಕಾರ್ಖಾನೆಯ ಕಾರ್ಮಿಕೆಯ ಮಗಳ ಸಾಧನೆ: ಕನ್ನಡ ಮಾಧ್ಯಮದಲ್ಲಿ ಶ್ರೀಯಾಗೆ 617 ಅಂಕ

12:55 AM May 10, 2023 | Team Udayavani |

ಕಾರ್ಕಳ: ಗೇರು ಬೀಜ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುವ ಇಲ್ಲಿನ ನಾರಾಯಣ ಗುರು ಜನತಾ ಕಾಲನಿ ನಿವಾಸಿ ಬೇಬಿ ಅವರ ಪುತ್ರಿ, ದುರ್ಗ ತೆಳ್ಳಾರು ಶ್ರೀ ಬಿ.ಎಂ. ಪೈ ಸ್ಮಾರಕ ಸರಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ಶ್ರೀಯಾ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ 617 ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ.

Advertisement

ಕಾರ್ಖಾನೆಯಲ್ಲಿ ಕೆಲಸ ಮಾಡಿ, ಹೆಣ್ಣು ಮಕ್ಕಳಿಬ್ಬರನ್ನು ಸಾಕಿ ಅವರಿಗೂ ಮನೆಕೆಲಸದೊಂದಿಗೆ ಜೀವನ ಶಿಕ್ಷಣ ಕಲಿಸುತ್ತ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ ಬೇಬಿ. ನಾನು ಕಲಿತದ್ದು ಏಳನೇ ತರಗತಿ, ಆದರೆ ಮಕ್ಕಳು ನನ್ನಂತೆ ಕಷ್ಟ ಪಡಬಾರದು, ಚೆನ್ನಾಗಿ ಕಲಿತು ಉತ್ತಮ ಉದ್ಯೋಗ ಪಡೆಯಬೇಕು ಎಂಬುದು ತಾಯಿಯ ಆಶಯ. ಅದನ್ನು ಈಡೇರಿಸುವತ್ತ ಪುತ್ರಿ ಶ್ರಮಿಸುತ್ತಿದ್ದಾರೆ.

ಕಾಲ್ನಡಿಗೆಯಲ್ಲೂ ಕಲಿಯುವ ಹುಮ್ಮಸ್ಸು
ಶ್ರೀಯಾ ಪ್ರಾಥಮಿಕ ಶಿಕ್ಷಣವನ್ನು ಬೆದ್ರಪಲ್ಕೆಯಲ್ಲಿ ಪಡೆದಿದ್ದಾರೆ. ಕಾಲನಿಯಿಂದ ಶಾಲೆಗೆ ಸುಮಾರು 2 ಕಿ.ಮೀ. ದೂರವಿದ್ದು ಬಸ್ಸಿನ ವ್ಯವಸ್ಥೆ ಕಡಿಮೆಯಾಗಿರುವುದರಿಂದ ಅನೇಕ ಸಲ ಕಾಲ್ನಡಿಗೆಯಲ್ಲೇ ಶಾಲೆಗೆ ಹೋಗುವ ಅನಿವಾರ್ಯ ಅವರದಾಗಿತ್ತು. ನಸುಕಿನಲ್ಲಿ 4ಕ್ಕೆ ಎದ್ದು ರಾತ್ರಿ 10.30ರ ವರೆಗೂ ಓದುತ್ತಿದ್ದೆ ಎನ್ನುವ ಆಕೆ, ಅಮ್ಮ ಕಷ್ಟ ಪಟ್ಟು ದುಡಿದು ಸಾಕುತ್ತಿದ್ದಾರೆ. ಚಿಕ್ಕಮ್ಮ ಬೆಂಬಲವೂ ಇದೆ ಎನ್ನುತ್ತಾರೆ. ಜತೆಗೆ ಶಿಕ್ಷಕರ ಮಾರ್ಗದರ್ಶನವನ್ನು ನೆನಪಿಸಿಕೊಳ್ಳುತ್ತಾರೆ.

ಪ್ರತಿಭಾನಾನ್ವಿತೆ
ಶ್ರೀಯಾ ರಾಷ್ಟ್ರೀಯ ಮತದಾನ ದಿನದ ರಸಪ್ರಶ್ನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಚಂದನ ವಾಹಿನಿಯ ರಸಪ್ರಶ್ನೆ ಯಲ್ಲಿ ಭಾಗವಹಿಸಿದ್ದಾರೆ. ಮೈಸೂರಿ ನಲ್ಲಿ ನಡೆದ ವಿಭಾಗ ಮಟ್ಟದ ಆಲೂರು ವೆಂಕಟರಾಯರ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪ್ರಥಮ, ಎನ್‌ ಎಂಎಂಎಸ್‌ ಪರೀಕ್ಷೆಯಲ್ಲಿ ಜಿಲ್ಲೆಗೆ 3ನೇ ರ್‍ಯಾಂಕ್‌ ಪಡೆದ ಸಾಧಕಿಯಾಗಿದ್ದು ಸ್ಥಳೀಯರು ಗ್ರಾಮೀಣ ಪ್ರತಿಭೆಯ ಸಾಧನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಅಪ್ಪನಿಲ್ಲದ ಕೊರಗು
ಶ್ರೀಯಾ ಹುಟ್ಟಿದ 22ನೇ ದಿನಕ್ಕೆ ತಂದೆ ಗುಣಕರ ಪೂಜಾರಿ ನಿಧನ ಹೊಂದಿದ್ದರು. ಅಂದಿನಿಂದ ಅಮ್ಮನೇ ಸರ್ವಸ್ವ. ಅಕ್ಕ ಪಿಯುಸಿ ಕಲಿಯುತ್ತಿದ್ದು ಇಬ್ಬರ ಶಿಕ್ಷಣದ ಜತೆಗೆ ಎಲ್ಲದಕ್ಕೂ ಅಮ್ಮನ ಗೇರು ಬೀಜ ಫ್ಯಾಕ್ಟರಿ ದುಡಿಮೆಯೇ ಆಧಾರ. ಐದು ಸೆಂಟ್ಸ್‌ ಕಾಲನಿಯಲ್ಲಿ ಆಶ್ರಯ.

Advertisement

ಐಪಿಎಸ್‌ ಅಧಿಕಾರಿ ಆಗುವಾಸೆ
ತಂದೆ ಕಾಲವಾಗಿದ್ದರೂ ಅಮ್ಮನೇ ಕೂಲಿ ಮಾಡಿ ನಮ್ಮಿಬ್ಬರನ್ನು ಚೆನ್ನಾಗಿ ಓದಿಸಿದ್ದಾರೆ. ಇಬ್ಬರು ಹೆಣ್ಣುಮಕ್ಕಳೂ ಸಾಧನೆ ಮಾಡಿ ಅಮ್ಮನ ಶ್ರಮಕ್ಕೆ ಪ್ರತಿಫ‌ಲ ನೀಡಲು ನಿರ್ಧರಿಸಿದ್ದೇವೆ. ಮುಂದೆ ವಿಜ್ಞಾನ ಆಯ್ಕೆ ಮಾಡಿಕೊಂಡು ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್‌ ಅಧಿಕಾರಿ ಆಗುವಾಸೆ ಇದೆ ಎಂದು ಶ್ರೀಯಾ ಮನದಿಂಗಿತ ಹಂಚಿಕೊಂಡಿದ್ದಾರೆ.

ಮಗಳ ಸಾಧನೆಯಿಂದ ಖುಷಿಯಾಗಿದೆ. ನನ್ನ ಶ್ರಮಕ್ಕೆ ಬೆಲೆ ಸಿಕ್ಕಿದೆ. ಮುಂದೆ ಮತ್ತಷ್ಟೂ ದುಡಿದು ಅವರ ಕಲಿಕೆಯ ಆಸೆಯನ್ನು ಪೂರೈಸಲು ನೆರವಾಗುವೆ
– ಬೇಬಿ, ತಾಯಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next