Advertisement

ಗೋಡಂಬಿ ಕಾರ್ಖಾನೆ ಕಾರ್ಮಿಕರ ಧರಣಿ

12:55 PM Sep 10, 2019 | Suhan S |

ಕುಮಟಾ: ಧಾರೇಶ್ವರದಲ್ಲಿರುವ ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿಯನ್ನು ಏಕಾಏಕಿ ಮುಚ್ಚಿದ ಹಿನ್ನೆಲೆಯಲ್ಲಿ ಅಲ್ಲಿನ ನೂರಾರು ಕಾರ್ಮಿಕರು ಫ್ಯಾಕ್ಟರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ಇಂಡಸ್ಟ್ರಿಯಲ್ಲಿ ಸುಮಾರು 750 ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದು, 24 ಗಂಟೆಯೂ ಇಲ್ಲಿ ಕೆಲಸ ನಡೆಯುತ್ತಿದೆ. 8 ಗಂಟೆಗಳ ಕಾಲಾವಧಿಯ ಪ್ರಕಾರ ದಿನದಲ್ಲಿ 3 ಪಾಳಿಗಳಲ್ಲಿ ದುಡಿಯುತ್ತಿದ್ದಾರೆ. ಈ ಭಾಗದ ಸುತ್ತಮುತ್ತಲಿನ ನೂರಾರು ಜನರು ಈ ಕಂಪನಿಯಿಂದಲೇ ಬದುಕುತ್ತಿದ್ದಾರೆ. ಏಕಾಏಕಿ ಕಂಪನಿ ಮುಚ್ಚಿರುವುದರಿಂದ ಕಾರ್ಮಿಕರು ಕಂಗಾಲಾಗಿದ್ದಾರೆ.

ಕೆಲ ದಿನಗಳಿಂದ ಆಡಳಿತ ಮಂಡಳಿಯವರು ದಿನದಲ್ಲಿ 2 ಪಾಳಿಯನ್ನು ನಡೆಸಲು ಚಿಂತನೆ ನಡೆಸಿದ್ದಾರೆ. ಅದಲ್ಲದೇ ದಿನದ ಸಂಬಳವನ್ನು ನೀಡದೇ, ಕೆ.ಜಿ ಲೆಕ್ಕದಲ್ಲಿ ಸಂಬಳವನ್ನು ನೀಡುವ ಬಗೆಗೆ ನೋಟಿಸ್‌ ಫಲಕದಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಒಳ್ಳೆಯ ಗೇರುಬೀಜಗಳನ್ನು ಯಂತ್ರ ಸುಲಿಯುತ್ತದೆ. ಆದರೆ ಯಂತ್ರದಿಂದಾಗದ ಬೀಜವನ್ನು ಕಾರ್ಮಿಕರೇ ಸುಲಿಯಬೇಕಾಗುತ್ತದೆ. ಒಳ್ಳೆಯ ಬೀಜಗಳನ್ನು ಕಾರ್ಮಿಕರ ಕೈಗೆ ನೀಡಿದ್ದಲ್ಲಿ ಕಂಪನಿ ನಿಗದಿಪಡಿಸಿದಷ್ಟು ಬೀಜವನ್ನು ಕಾರ್ಮಿಕರು ಸುಲಿಯಲು ಸಾಧ್ಯವಿದೆ. ಆದರೆ ಕೆಟ್ಟ ಬೀಜವನ್ನು ಕಾರ್ಮಿಕರ ಕೈಗೆ ನೀಡಿದಾಗ ಕಂಪನಿ ನಿಗದಿಪಡಿಸಿದಷ್ಟು ಬೀಜವನ್ನು ಸುಲಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರ್ಮಿಕರಿಗೆ ಸಿಗುವ ಸಂಬಳ ಕಡಿಮೆಯಾಗುತ್ತಿದೆ ಎಂಬುದು ಕಾರ್ಮಿಕರ ಅಳಲಾಗಿದೆ.

ನಂತರ ಮಾಧ್ಯಮದವರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕ್ಯಾಶ್ಯೂ ಇಂಡ‌ಸ್ಟ್ರಿ ಎಂಪ್ಲಾಯೀಸ್‌ ಯೂನಿಯನ್‌ ಅಧ್ಯಕ್ಷ ತಿಲಕ ಗೌಡ ಮಾತನಾಡಿ, ಆಡಳಿತ ವರ್ಗವು ತುಂಡು ಮೌಲ್ಯದ ಕೆಲಸ ಮತ್ತು 3 ಪಾಳಿಯ ಬದಲು 2 ಪಾಳಿ ಮಾಡಬೇಕೆಂದು ನೋಟಿಸ್‌ ಬೋರ್ಡಿಗೆ ಹಾಕಿರುವುದು ಸರಿಯಲ್ಲ. ಈ ವಿಷಯವು ಸಂಘದ ಗಮನಕ್ಕೆ ಬಂದ ತಕ್ಷಣ ಸಂಘದ ಮುಖಂಡರು ಆಡಳಿತ ವರ್ಗವನ್ನು ಸಂಪರ್ಕಿಸಿ, ವಿಷಯದ ಕುರಿತು ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಕೇಳಿಕೊಂಡರೂ, ಆಡಳಿತ ವರ್ಗ ಸ್ಪಂದಿಸುತ್ತಿಲ್ಲ. ಕಂಪನಿ ಮುಚ್ಚುವುದು ಸರಿಯಲ್ಲ. ಸಾಕಷ್ಟು ಜನರು ಇಲ್ಲಿನ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರು ಕೊಡುತ್ತಿರುವ ಸಂಬಳಕ್ಕೆ ದುಡಿಯಲು ಸಾಧ್ಯವಿಲ್ಲ. ಸರಕಾರದ ನಿಯಮದ ಪ್ರಕಾರ ಇಲ್ಲಿಯ ಕಾರ್ಮಿಕರು ಸಂಘವನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಆಡಳಿತ ಮಂಡಳಿಯು ಸಂಘದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರಬೇಕಾಗುತ್ತದೆ. ಸರಕಾರದ ನಿಯಮದ ಪ್ರಕಾರ ಕನಿಷ್ಠ ಕೂಲಿಯಾದರೂ ನೀಡಬೇಕು ಎಂದರು.

ನಾಳೆಯಿಂದಲೇ ಕಂಪನಿ ತೆರೆಯಲು ಸೂಚನೆ:

ಅಸಿಸ್ಟಂಟ್ ಲೇಬರ್‌ ಕಮಿಷನರ್‌ ಮೀನಾಕುಮಾರಿ ಪಾಟೀಲ್ ಅಧ್ಯಕ್ಷತೆಯಲ್ಲಿ ಆಡಳಿತ ವರ್ಗ ಹಾಗೂ ಕಾರ್ಮಿಕರ ನಡುವೆ ಸಂಧಾನ ಮಾತುಕತೆ ನಡೆಯಿತು. ಕಾರ್ಮಿಕರಿಂದ ಎಲ್ಲ ಮಾಹಿತಿ ಪಡೆದುಕೊಂಡು, ಆಡಳಿತ ವರ್ಗದ‌ ಸಮಸ್ಯೆ ಆಲಿಸಿದರು. ನಂತರ ಮಾತನಾಡಿ, ಆಡಳಿತ ವರ್ಗದವರು ಮಾಲಿಕರೊಂದಿಗೆ ಚರ್ಚಿಸಿ ಫ್ಯಾಕ್ಟರಿ ಪ್ರಾರಂಭಿಸಬೇಕು. ನಂತರ ಕಂಪನಿಯಲ್ಲಿಯೇ ಕುಳಿತು ಕಾರ್ಮಿಕರ ಹಾಗೂ ಮಾಲಿಕರ ಸಮಸ್ಯೆಗೆ ಪರಿಹಾರ ಹುಡುಕಬಹುದು. ನಾಳೆಯೇ ಕಂಪನಿ ಪ್ರಾರಂಭಿಸುವಂತೆ ಸೂಚಿಸಿದರು. ಕಂಪನಿ ಪ್ರೊಸೆಸಿಂಗ್‌ ಮುಖ್ಯಸ್ಥ ಎಡ್ವರ್ಡ್‌, ಕಂಪನಿ ಮಾಲಿಕರಿಗೆ ಈ ಎಲ್ಲ ವಿಷಯ ತಿಳಿಸುತ್ತೇನೆ. ಅವರು ಕೈಗೊಂಡ ನಿರ್ಣಯದಂತೆ ಮುಂದುವರೆಯಲಾಗುವುದು ಎಂದರು.
Advertisement

Udayavani is now on Telegram. Click here to join our channel and stay updated with the latest news.

Next