Advertisement

ಗೇರು ತೋಟ ಬೆಳೆಸಲು ಈ ಬಾರಿ ಶೇ.50 ಸಹಾಯಧನ

02:18 AM May 17, 2019 | sudhir |

ಉಡುಪಿ: ದೇಶದಲ್ಲಿ 11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗೇರು ತೋಟವಿದ್ದು 8 ಲಕ್ಷ ಟನ್‌ ಗೇರು ಬೀಜ ಉತ್ಪಾದನೆಯಾಗುತ್ತಿದೆ. ಇರುವ 4,000 ಗೇರು ಬೀಜ ಉತ್ಪಾದನೆಯ ಕೈಗಾರಿಕಾ ಘಟಕಗಳಿಗೆ 17 ಲಕ್ಷ ಟನ್‌ ಗೇರುಬೀಜದ ಅಗತ್ಯವಿದೆ. ಉತ್ಪಾದನೆ ಕೊರತೆಯಿಂದ ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಖರ್ಚಾಗುತ್ತಿರುವ ಮೊತ್ತ 10,000 ಕೋ.ರೂ. ರಫ್ತು ಆಗುತ್ತಿರುವುದು 5,500 ಕೋ.ರೂ. ಮಾತ್ರ. ಹೀಗಾಗಿ ಕೇಂದ್ರ ಕೃಷಿ ಸಚಿವಾಲಯ ಈ ವರ್ಷ 1.2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಗೇರು ತೋಟವನ್ನು ವಿಸ್ತರಿಸಲು ಯೋಜನೆಯನ್ನು ಹಾಕಿಕೊಂಡಿದೆ.

Advertisement

ತೋಟ ವಿಸ್ತರಣೆಗೆ ಸಹಾಯಧನ

ತೋಟಗಾರಿಕಾ ಇಲಾಖೆ ಗೇರು ತೋಟ ವಿಸ್ತರಣೆಗೆ ಸಹಾಯಧನವನ್ನು ನೀಡುತ್ತಿದೆ. ಒಂದು ಹೆಕ್ಟೇರ್‌ (2.5 ಎಕ್ರೆ) ಪ್ರದೇಶದಲ್ಲಿ 277 ಗೇರು ಸಸಿಗಳನ್ನು ನೆಟ್ಟರೆ ಇದಕ್ಕೆ 57,640 ರೂ. ಖರ್ಚು ತಗಲುತ್ತದೆ. ಸಾಮಾನ್ಯ ವರ್ಗದವರಾದರೆ ಇದರ ಶೇ.50 ಸಹಾಯಧನ (28,820 ರೂ.), ಪರಿಶಿಷ್ಟರಿಗಾದರೆ ಶೇ.90 (51,878 ರೂ.) ಸಹಾಯಧನ ನೀಡಲಾಗುತ್ತದೆ.

ಹನಿ ನೀರಾವರಿ ಘಟಕಕ್ಕೆ ಸಹಾಯಧನ

ಹನಿನೀರಾವರಿ ಘಟಕ ಸ್ಥಾಪಿಸಿದರೆ ತಗಲಿದ ಖರ್ಚಿನ ಶೇ. 90 ಸಹಾಯಧನವನ್ನು ನೀಡಲಾಗುತ್ತದೆ. ಸೌಲಭ್ಯದ ವಿವರಣೆಗಾಗಿ ರೈತರು ಸಮೀಪದ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Advertisement

ಸಣ್ಣ ಮತ್ತು ಅತಿ ಸಣ್ಣ ರೈತರಾದರೆ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಖರ್ಚನ್ನು ಭರಿಸುವ ಅವಕಾಶ ವಿರುವುದರಿಂದ ಸಂಪೂರ್ಣ ಉಚಿತವಾಗಿ ಗೇರು ತೋಟವನ್ನು ಅಭಿವೃದ್ಧಿಪಡಿಸಬಹುದು.

ದ.ಕ., ಉಡುಪಿ, ಉ.ಕ., ಶಿವಮೊಗ್ಗ ಈ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ 26,000 ಹೆ. ಭೂಪ್ರದೇಶವನ್ನು ಹೊಂದಿದ್ದು ಗೇರು ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಇವರು ಈ ವರ್ಷ ವೆಂಗುರ್ಲಾ 4, ವೆಂಗುರ್ಲಾ 7, ಉಳ್ಳಾಲ 1, ಉಳ್ಳಾಲ 3 ಇತ್ಯಾದಿ ಕಸಿ ಕಟ್ಟಿದ ಸಸ್ಯಗಳನ್ನು ಕುಂದಾಪುರ ತಾಲೂಕಿನ ಗುಜ್ಜಾಡಿ, ಕಾರ್ಕಳ ತಾಲೂಕಿನ ಕೆರ್ವಾಶೆ, ಪುತ್ತೂರು ಉಪ್ಪಿನಂಗಡಿ ಸಮೀಪದ ವಳಾಲು, ಕುಮಟಾದ ಬಡಾಲು ಸಸ್ಯಕ್ಷೇತ್ರಗಳಲ್ಲಿ ಉತ್ಪಾದಿಸುತ್ತಿದೆ. ಈ ಬಾರಿ 3 ಲಕ್ಷ ಸಸ್ಯಗಳನ್ನು ಉತ್ಪಾದಿಸುತ್ತಿದ್ದು ಕೃಷಿಕರಿಗೆ ರಿಯಾಯಿತಿ ದರದಲ್ಲಿ ಪೂರೈಸುತ್ತಿದೆ. ರೈತರು ಸಮೀಪದ ಸಸ್ಯಕ್ಷೇತ್ರಗಳನ್ನು ಸಂಪರ್ಕಿಸಬಹುದು. ಪ್ರತಿ ಸಸ್ಯಕ್ಷೇತ್ರದಲ್ಲಿಯೂ ಕಸಿ ಕಟ್ಟುವ ಕುಶಲ ಕಾರ್ಮಿಕರಿದ್ದಾರೆ. ಹೋದ ವರ್ಷ ನಿಗಮವು 1 ಲಕ್ಷ ಸಸ್ಯಗಳನ್ನು ನಿಗಮದ ಜಾಗದಲ್ಲಿ ನೆಟ್ಟಿತ್ತು. ಈ ವರ್ಷವೂ ನಿಗಮದ 300 ಹೆ. ಪ್ರದೇಶದಲ್ಲಿ ಸುಮಾರು 60,000 ಸಸಿಗಳನ್ನು ನೆಡುತ್ತಾರೆ.

ದೇಶದ 20 ರಾಜ್ಯಗಳ 11 ಲಕ್ಷ ಹೆ. ಪ್ರದೇಶದಲ್ಲಿ ಗೇರು ಉತ್ಪಾದನೆಯಾಗುತ್ತಿದ್ದು 1.2 ಲಕ್ಷ ಹೆ. ಪ್ರದೇಶದಲ್ಲಿ ವಿಸ್ತರಿಸಲು ಯೋಜಿಸಲಾಗಿದೆ. ಇದಕ್ಕೆ ನೀರು ಕಡಿಮೆ ಸಾಕಾಗುವ ಕಾರಣ ಸಣ್ಣ ರೈತರಿಗೆ ಉತ್ತಮ ಆದಾಯ ತರಬಲ್ಲುದು.

– ವೆಂಕಟೇಶ ಹುಬ್ಬಳ್ಳಿ, ನಿರ್ದೇಶಕರು, ಗೇರು ಮತ್ತು ಕೊಕ್ಕೋ ಮಂಡಳಿ ನಿರ್ದೇಶನಾಲಯ, ಕೊಚ್ಚಿ.

ಗೇರು ತೋಟದ ವಿಸ್ತರಣೆಗೆ, ಹನಿ ನೀರಾವರಿ ಘಟಕ ಸ್ಥಾಪನೆಗೆ ಸಹಾಯಧನವನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತದೆ.

– ಭುವನೇಶ್ವರಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಉಡುಪಿ

ರೈತರಿಗೆ ಅನುಕೂಲವಾಗಬೇಕೆಂದು ಗೇರು ಸಸಿಗಳನ್ನು ಉತ್ಪಾದಿಸಿದ್ದು ಇದನ್ನು ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತದೆ. ರಬ್ಬರ್‌ನಂತಹ ಬೆಳೆಗಳಲ್ಲಿ ಬೆಲೆಗಳು ಏರುಪೇರಾಗುವ ಸಾಧ್ಯತೆ ಇದೆ. ಇದಕ್ಕೆ ತುಲನೆ ಮಾಡಿದರೆ ಗೇರು ಲಾಭದಾಯಕ ಬೆಳೆ. ಕಸಿ ಕಟ್ಟಿದ ಗೇರು ಸಸಿ ಮೂರನೆಯ ವರ್ಷದಲ್ಲಿಯೇ ಇಳುವರಿ ಕೊಡುತ್ತದೆ.

– ಪ್ರಕಾಶ್‌ ನೆಟಾಲ್ಕರ್‌,ಆಡಳಿತ ನಿರ್ದೇಶಕರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಮಂಗಳೂರು

  • ಮಟಪಾಡಿ ಕುಮಾರಸ್ವಾಮಿ
Advertisement

Udayavani is now on Telegram. Click here to join our channel and stay updated with the latest news.

Next